ಉಡುಪಿ: ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಅಧೀನದಲ್ಲಿರುವ, ರಾಜ್ಯದ ಎರಡನೇ ಶ್ರೀಮಂತ ದೇವಸ್ಥಾನ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚಿಸಿ, ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ. ಈ ಸಮಿತಿಯು ಮುಂದಿನ ಮೂರು ವರ್ಷಗಳ ಕಾಲ ಅಸ್ತಿತ್ವದಲ್ಲಿರಲಿದೆ.
ಪ್ರಸ್ತುತ ಪಾಳಿಯಲ್ಲಿರುವ ಪ್ರಧಾನ ಅರ್ಚಕ ಡಾ. ಕೆ. ರಾಮಚಂದ್ರ ಅಡಿಗ, ರತ್ನ ಮತ್ತು ಸಂಧ್ಯಾ ರಮೇಶ್ (ಮಹಿಳೆ), ಗೋಪಾಲ ಕೃಷ್ಣ (ಎಸ್ಸಿ), ಕೆರಾಡಿ ಚಂದ್ರಶೇಖರ ಶೆಟ್ಟಿ, ಗಣೇಶ್ ಕಿಣಿ, ಡಾ. ಅತುಲ್ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ್ ಮತ್ತು ಶೇಖರ ಪೂಜಾರಿ (ಸಾಮಾನ್ಯ)ಸಮಿತಿಯ ಸದಸ್ಯರಾಗಿದ್ದಾರೆ. ಕೊಲ್ಲೂರು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯು ವ್ಯವಸ್ಥಾಪನಾ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯಾಗಿರುತ್ತಾರೆ ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಾರ್ಯದರ್ಶಿ ಹಾಗೂ ದತ್ತಿ ಇಲಾಖೆಯ ಆಯುಕ್ತರು ಆದೇಶಿಸಿದ್ದಾರೆ.
ವರ್ಷದ ಹಿಂದೆಯೇ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅವಧಿ ಮುಕ್ತಾಯವಾಗಿತ್ತು. ಆ ಬಳಿಕ ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಲು ಭಾರೀ ಪೈಪೋಟಿ ಇದ್ದು, ಒಟ್ಟು 158 ಅರ್ಜಿಗಳು ಸ್ವೀಕೃತವಾಗಿದ್ದವು. ಇವುಗಳಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸತ್ಯಾಪನಾ ವರದಿ ಸಲ್ಲಿಸಿದ ನಂತರ ಎಂಟು ಮಂದಿಯನ್ನು ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ಸದಸ್ಯರು ಮೊದಲ ಸಭೆಯಲ್ಲಿ ಸಮಿತಿಯ ಅಧ್ಯಕ್ಷರ ನೇಮಕ ಮಾಡಲಿದ್ದಾರೆ.