ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಾಳೆಯಿಂದ ಭಕ್ತರಿಗೆ ತಾಯಿ ಮೂಕಾಂಬಿಕೆಯ ದರ್ಶನಕ್ಕೆ ಎಲ್ಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ದೇವಳದಲ್ಲಿ ದೇವರ ದರ್ಶನದ ಹೊರತು ಯಾವುದೇ ಸೇವೆಗಳಿಗೆ ಅವಕಾಶ ಇರುವುದಿಲ್ಲ.
ಕೋವಿಡ್ -19 ಹಿನ್ನೆಲೆಯಲ್ಲಿ ಸುಮಾರು ಮೂರು ತಿಂಗಳಿಂದ ರಾಜ್ಯದ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಇದೀಗ ಸರಕಾರವು ನಾಳೆಯಿಂದ ರಾಜ್ಯಾದ್ಯಂತ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದೆ.
ಕೊಲ್ಲೂರು ದೇವಳದಲ್ಲಿ ದರ್ಶನ ಹೊರತು ಪಡಿಸಿ ಸರಕಾರದ ಮುಂದಿನ ಆದೇಶದವರೆಗೆ ಯಾವುದೇ ಹರಕೆಯ ಸೇವೆ, ವೈಯಕ್ತಿಕ ಪೂಜೆ ಹಾಗೂ ಸಂಕಲ್ಪಗಳಿಗೆ ಅವಕಾಶವಿಲ್ಲ. ಸೇವೆ ಮಾಡಬಯಸುವವರು ಹಣ ಪಾವತಿ ಮಾಡಿದಲ್ಲಿ ಆನ್ ಲೈನ್ ಸೇವಾದಾರರಿಗೆ ಕಳುಹಿಸುವಂತೆ ಅಂಚೆ ಮೂಲಕ ಕುಂಕುಮ ಪ್ರಸಾದ ಕಳುಹಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ದೇವಸ್ಥಾನದ ಎದುರಿನ ಮುಖ್ಯದ್ವಾರದ ಮೂಲಕ ಒಳ ಪ್ರವೇಶಿಸುವ ಭಕ್ತರು, ಹಿಂಭಾಗದ ಆನೆ ಬಾಗಿಲಿನ ಮೂಲಕ ಹೊರ ತೆರಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದೇವಸ್ಥಾನ ಪ್ರವೇಶ ಮಾಡುವ ಮೊದಲು ಕೈ ಕಾಲು ತೊಳೆದು ಬರುವ ಭಕ್ತರು, ನಂತರ ಕೈಗಳನ್ನು ಸ್ಯಾನಿಟೈಸ್ ಮೂಲಕ ಸ್ವಚ್ಛಗೊಳಿಸುವುದನ್ನು ಕಡ್ಡಾಯ ಮಾಡಲಾಗಿದೆ. ಎಲ್ಲರೂ ಮುಖಕ್ಕೆ ಮಾಸ್ಕ್ ಧರಿಸಬೇಕು. ಸರಕಾರ ಹಾಗೂ ಜಿಲ್ಲಾಡಳಿತ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲು ನೌಕರರು ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.
ದೇವಳ ಆವರಣ ಹಾಗೂ ಒಳ ಭಾಗದಲ್ಲಿ ಭಕ್ತರಿಗೆ ವ್ಯಕ್ತಿಗತ ಅಂತರವನ್ನು ಕಾಯ್ದುಕೊಂಡು ದರ್ಶನ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಧ್ವನಿವರ್ಧಕದ ಮೂಲಕ ಭಕ್ತರನ್ನು ಎಚ್ಚರಿಸಲಾಗುವುದು. ಕ್ಷೇತ್ರದಲ್ಲಿ ಸದ್ಯ ಮಧ್ಯಾಹ್ನ ಮತ್ತು ರಾತ್ರಿಯ ಅನ್ನಪ್ರಸಾದವನ್ನು ಸ್ಥಗಿತಗೊಳಿಸಲಾಗಿದೆ. ಮುಂದೆ ಹಂತ ಹಂತವಾಗಿ ಅನ್ನಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಸುತ್ತಗುಂಡಿ ತಿಳಿಸಿದ್ದಾರೆ.