ಚಿತ್ರದುರ್ಗ: ಕಳೆದ ಅನೇಕ ವರ್ಷಗಳಿಂದ ನಿರಂತರ ಈರುಳ್ಳಿ ಬೆಳೆಯುತ್ತಿದ್ದ ರೈತರು ಪ್ರತಿ ವರ್ಷ ಖರ್ಚು ಕಳೆದು ಅಷ್ಟೋ ಇಷ್ಟೋ ಹಣ ಸಂಪಾದನೆ ಮಾಡುತ್ತಿದ್ದರು. ಆದರೆ ಈ ವರ್ಷ ಮುಂಗಾರಿನಲ್ಲಿ ಭರವಸೆ ಹುಟ್ಟಿಸಿದ್ದ ಮಳೆರಾಯ ತಿಂಗಳಾನುಗಟ್ಟಲೆ ನಿರಂತರವಾಗಿ ಸುರಿದು ಸಾವಿರಾರು ಹೆಕ್ಟೇರ್ ಪ್ರದೇಶದ ಈರುಳ್ಳಿ ಬೆಳೆಯನ್ನು ಆಪೋಶನ ಮಾಡಿದ್ದಾನೆ. ಇದರಿಂದ ಉತ್ತಮ ಇಳುವರಿ ಬರುವ ಕನಸು ಕಂಡಿದ್ದ ರೈತರಿಗೆ ಈರುಳ್ಳಿ ಬೆಳೆದು ಕೈ ಸುಟ್ಟುಕೊಂಡ ಅನುಭವವಾಗಿದೆ.
ಚಿತ್ರದುರ್ಗ, ಚಳ್ಳಕೆರೆ ತಾಲೂಕುಗಳಲ್ಲಿನ ರೈತರು ಪ್ರತಿವರ್ಷ ವ್ಯಾಪಕವಾಗಿ ಈರುಳ್ಳಿ ಬೆಳೆಯುತ್ತಾರೆ. ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ತಾಲೂಕುಗಳ ಭಾಗಶಃ ರೈತರು ಈರುಳ್ಳಿ ಬೆಳೆಯುತ್ತಾರೆ. ಕಳೆದ ಹಲವು ದಶಕಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ನಡೆಸದ ಮುಂಗಾರು, ಈ ಬಾರಿ ಉತ್ತಮ ಮಳೆಯಾಗಿ ರೈತರಲ್ಲಿ ಹೊಸ ಹುರುಪು ಮೂಡಿಸಿತ್ತು. ಇದರಿಂದ ಪ್ರೇರಿತರಾದ ರೈತರು ಹುಮ್ಮಸ್ಸಿನಿಂದ ಕೃಷಿ ಮಾಡಲು ಮುಂದಾಗಿದ್ದರು. ಆದರೆ ಈರುಳ್ಳಿಗೆ ಕೊಳೆರೋಗ ಬಂದು ಸಂಪೂರ್ಣ ನಾಶವಾಗಿದೆ.
ಜಿಲ್ಲೆಯಲ್ಲಿ ಒಟ್ಟು ೨೦೯೮೧ ಸಾವಿರ ಹೆಕ್ಟೇರ್ ಈರುಳ್ಳಿ ಬಿತ್ತನೆ ಮಾಡಲಾಗಿತ್ತು. ಅದರಲ್ಲಿ ೭೧೮೬.೩೦ ಹೆಕ್ಟೇರ್ ಈರುಳ್ಳಿ ಹಾಳಾಗಿದೆ. ಇದರಿಂದ ೯.೭೦ ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಚಿತ್ರದುರ್ಗ ತಾಲೂಕಿನಲ್ಲಿ ೬೦೫೦ ಹೆಕ್ಟೇರ್ ಬಿತ್ತನೆ, ೩೨೮೦ ಹೆಕ್ಟೇರ್ ಹಾನಿ. ಚಳ್ಳಕೆರೆ ೧೦೨೭೨ ಹೆಕ್ಟೇರ್ ಬಿತ್ತನೆ, ೨೬೪೦ ಹಾನಿ. ಹಿರಿಯೂರು ೧೫೪೨ ಬಿತ್ತನೆ, ೧೦೫೫ ಹಾನಿ. ಹೊಳಲ್ಕೆರೆ ೧೬೨೦ ಹೆಕ್ಟೇರ್ಗೆ ೨೦೧ ಹೆಕ್ಟೇರ್ ಹಾಗೂ ಮೊಳಕಾಲ್ಮುರು ತಾಲೂಕಿನಲ್ಲಿ ೧೯೧ ಹೆಕ್ಟೇರ್ಗೆ ೧೦.೩ ಹೆಕ್ಟೇರ್ ಹಾನಿಯಾಗಿದೆ.
ಕಳೆದ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ನಿರಂತರ ಮಳೆಯಿಂದ ಈರುಳ್ಳಿ ಬೆಳೆಗೆ ಕೊಳೆರೋಗ ತಗುಲಿದೆ. ಇನ್ನು ಒಂದು ಅಥವಾ ಎರಡು ವಾರದಲ್ಲಿ ಈರುಳ್ಳಿ ಕೀಳಬೇಕು ಎನ್ನುವಷ್ಟರಲ್ಲಿ ನಿರಂತರ ಮಳೆ ಆರಂಭವಾಯಿತು. ಇದರಿಂದ ಜಮೀನಿನಲ್ಲಿ ಹೆಚ್ಚು ನೀರು ನಿಂತು ಈರುಳ್ಳಿ ಬೆಳೆ ಹಾಳಾಯಿತು. ಇದರಿಂದ ಬೇಸತ್ತ ರೈತರು ಈರುಳ್ಳಿ ಕೀಳುವುದನ್ನೇ ಬಿಟ್ಟಿದ್ದಾರೆ. ಕಿತ್ತರೆ ಯಾವುದೇ ಲಾಭವಿಲ್ಲ, ಕೂಲಿ ಹಣ ಕೈಯಿಂದ ಕೊಡಬೇಕಾಗುತ್ತದೆ. ಟ್ರ್ಯಾಕ್ಟರ್ ತಂದು ಈರುಳ್ಳಿ ಬೆಳೆಸಹಿತ ಉಳುಮೆ ಮಾಡುತ್ತಿದ್ದಾರೆ.