Thursday, June 30, 2022

Latest Posts

ಕೋತಿ, ಹಂದಿಗಳ ಕಾಟಕ್ಕೆ ಗಡಿನಾಡ ಕೃಷಿಕರು ಕಂಗಾಲು

ಕಾಸರಗೋಡು: ಕಾಸರಗೋಡು ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ  ಕಾಡು ಮೃಗಗಳ ಉಪಟಳದಿಂದಾಗಿ ಕೃಷಿಕರು ಕಂಗಾಲಾಗಿದ್ದಾರೆ. ಮಂಗಗಳ ಹಾಗೂ ಕಾಡುಹಂದಿಗಳ ಹಾವಳಿಯಿಂದ ಕೃಷಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಮಂಗಗಳ ಉಪಟಳ ಇಲ್ಲಿನ ತೆಂಗು ಕೃಷಿಕರನ್ನು ಕಂಗಾಲಾಗಿಸಿದೆ. ಎಳೆಯ ಎಳತು ಕಾಯಿಗಳನ್ನು  ವ್ಯಾಪಕವಾಗಿ ಮರದಿಂದ ಕಿತ್ತು ಹಾಕುತ್ತಿದೆ. ಬಲಿತ ಕಾಯಿಗಳೂ ಇದರಲ್ಲಿ  ಒಳಗೊಂಡಿದೆ. ಇನ್ನು ಹಂದಿಗಳು ಗೆಣಸು, ಬಾಳೆ, ಎಳೆಯ ಅಡಕೆ ಸಸಿಗಳನ್ನು  ವ್ಯಾಪಕವಾಗಿ ಹಾನಿಗೊಳಿಸುತ್ತಿದೆ.

ಅರಣ್ಯದ ಅಂಚಿಗಿರುವ ತೋಟ ಮಾತ್ರವಲ್ಲದೆ ಹಳ್ಳಿಯ ತೋಟಗಳಿಗೂ ಕೋತಿಗಳು ಗುಂಪಾಗಿ ಲಗ್ಗೆಯಿಡುತ್ತಿವೆ. ಮಲೆನಾಡು ಪ್ರದೇಶದ ಕೃಷಿಕರು ಮಂಗಗಳ ದಾಳಿಯಿಂದ ಕಂಗಾಲಾಗಿದ್ದು, ಮಂಗಗಳನ್ನು  ಹಿಮ್ಮೆಟ್ಟಿಸಲು ಇವರಲ್ಲಿ  ಯಾವುದೇ ಅಸ್ತ್ರಗಳಿಲ್ಲ. ಕೋವಿ ಬಳಸಿ ಶಬ್ಧ  ಉಂಟು ಮಾಡಿದರೂ ಅದನ್ನು  ಕ್ಯಾರೇ ಮಾಡುವುದಿಲ್ಲ. ತೆಂಗಿನ ಇಳುವರಿ ಗಣನೀಯವಾಗಿ ಕುಸಿದಿರುವುದರ ಜತೆಗೆ ಕೋತಿಗಳ ಕಾಟದಿಂದ ಕೆಲವರಿಗೆ ದಿನ ಬಳಕೆಗೂ ತೆಂಗಿನಕಾಯಿ ಲಭ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕೊಬ್ಬರಿ ಮಾಡಿ ತೆಂಗಿನೆಣ್ಣೆ  ಪಡೆಯುತ್ತಿದ್ದವರಿಗೂ ಈ ಬಾರಿ ತೆಂಗಿನಕಾಯಿ ಲಭಿಸುತ್ತಿಲ್ಲ. ಇಳುವರಿ ಕಡಿತಗೊಂಡ ಹಿನ್ನೆಲೆಯಲ್ಲಿ  ನಿರೀಕ್ಷಿತ ಪ್ರಮಾಣದಲ್ಲಿ  ತೆಂಗಿನಕಾಯಿ ಮಾರುಕಟ್ಟೆಗೂ ಹೋಗುತ್ತಿಲ್ಲ  ಎಂಬುದು ಇಲ್ಲಿನ ಕೃಷಿಕರ ಕೊರಗಾಗಿದೆ.

ಕಳೆದ ವರ್ಷ ಜನವರಿ – ಫೆಬ್ರವರಿ ತಿಂಗಳಲ್ಲಿ  ಮಲೆನಾಡು ಪ್ರದೇಶದಿಂದ ಸರಾಸರಿ ಒಂದು ಲೋಡು ತೆಂಗಿನಕಾಯಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿದ್ದಲ್ಲಿ  ಇಂದು ವಾರಕ್ಕೆ ಒಂದು ಲೋಡ್ ರವಾನೆಯೂ ಕಷ್ಟಸಾಧ್ಯವಾಗುತ್ತಿದೆ. ಕೆಲವು  ಹೊಟೇಲ್ ಉದ್ಯಮಿಗಳು ಮಲೆನಾಡು ಪ್ರದೇಶಕ್ಕೆ ಆಗಮಿಸಿ ಖುದ್ದಾಗಿ ತೆಂಗಿನಕಾಯಿ ಖರೀದಿಸುವವರೂ ಇದ್ದಾರೆ.
ಕಳೆದ ವರ್ಷ ಬೇಸಿಗೆಯಲ್ಲಿ  ಬಾಧಿಸಿದ ಬರಗಾಲವೂ ತೆಂಗಿನ ಇಳುವರಿ ಕುಸಿತಕ್ಕೆ ಇನ್ನೊಂದು ಕಾರಣವಾಗಿದೆ. ಇಳುವರಿ ಕಡಿಮೆಯಾಗಿದ್ದರೂ ಇರುವ ಬೆಳೆಗಳನ್ನು  ಕಾಡು ಪ್ರಾಣಿಗಳಿಂದ ಸಂರಕ್ಷಿಸಿಕೊಳ್ಳುವುದೂ ಕೃಷಿಕರಿಗೆ ಸವಾಲಾಗಿ ಪರಿಣಮಿಸುತ್ತಿದೆ.

ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ಆಗ್ರಹ: ಕಾಸರಗೋಡು ಜಿಲ್ಲೆಯ ವಿವಿಧೆಡೆ ಕಾಡುಪ್ರಾಣಿಗಳ ಹಾವಳಿ ತೀವ್ರವಾಗುತ್ತಿದೆ. ಅದರಲ್ಲೂ  ಮಲೆನಾಡು ಪ್ರದೇಶದಲ್ಲಿ  ಕಾಡಾನೆ, ಕಾಡುಹಂದಿ, ಮಂಗಗಳು, ಕೋತಿಗಳು ಅಲ್ಲದೆ ನವಿಲು ಸೇರಿದಂತೆ ಅನೇಕ ಪ್ರಾಣಿ ಪಕ್ಷಿಗಳು ಕೃಷಿಕರು ಬೆಳೆದ ಬೆಳೆಗಳನ್ನು  ಹಾಳು ಮಾಡಿ ಕೃಷಿಕರ ಬದುಕನ್ನೇ ನಾಶಗೊಳಿಸುತ್ತಿವೆ. ಈ ನಿಟ್ಟಿನಲ್ಲಿ  ಕೇರಳ ಸರಕಾರವೇ ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಆಗ್ರಹ ವ್ಯಾಪಕವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss