ಅಮರಾವತಿ : ಕೋರೋನಾ ಸೋಂಕು ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಉಚಿತವಾಗಿ ಮಾಸ್ಕ್ ವಿತರಿಸಲು ಆಂಧ್ರ ಸರ್ಕಾರ ತೀರ್ಮಾನಿಸಿದೆ.
ಮುಖ್ಯ ಮಂತ್ರಿ ಜಗನ್ಮೋಹನರೆಡ್ಡಿ ಭಾನುವಾರದಂದು ಅಧಿಕಾರಿಗಳೊಂದಿಗೆ ಈ ದಿಶೆಯಲ್ಲಿ ತುರ್ತು ಸಭೆ ನಡೆಸಿ ಈ ತೀರ್ಮಾನ ಕೈಗೊಂಡರು. ಪ್ರತಿಯೊಬ್ಬರಿಗೂ ತಲಾ ಮೂರು ಮಾಸ್ಕ್ಗಳನ್ನ ಉಚಿತವಾಗಿ ನೀಡಲಾಗುವುದು. ತೀವ್ರ ಸೋಂಕಿನಿಂದ ಪೀಡಿತರಾದವರಿಗೆ ಮೊದಲ ಆದ್ಯತೆ ನೀಡಲಾಗುವುದೆಂದು ಸರ್ಕಾರದ ವಕ್ತಾರರು ಸುದ್ದಿಗಾರರಿಗೆ ತಿಳಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಒಟ್ಟು ೧೬ ಕೋಟಿ ಮಾಸ್ಕ್ಗಳನ್ನು ಜನತೆಗೆ ಹಂಚಲು ಜಗನ್ ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ಆದೇಶ ನೀಡಿದ್ದಾರೆ. ಕಳೆದ ಮೂರು ದಿನಗಳಲ್ಲಿ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ ಅಧಿಕಗೊಂಡಿದ್ದು ಭಾನುವಾರದ ಸಂಜೆ ವೇಳೆಗೆ ಇದು ೪೦೦ ದಾಟಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಉಗಿದರೆ ದಂಡ !
ಇದೇ ವೇಳೆ ಸಾರ್ವ ಜನಿಕ ಸ್ಥಳಗಳಲ್ಲಿ ಉಗಿಯುವುದನ್ನು ನಿಷೇಧಿಸಿ ಸರ್ಕಾರ ಆದೇಶವೊಂದನ್ನು ಜಾರಿಗೊಳಿಸಿದೆ. ತಂಬಾಕು, ಗುಟಕಾ ಸೇರಿದಂತೆ ಮಾದಕ ಪದಾರ್ಥಗಳನ್ನು ಸೇವಿಸಿ ಸಾರ್ವತ್ರಿಕ ಸ್ಥಳಗಳಲ್ಲಿ ಉಗಿಯುವರ ವಿರುದ್ಧ ಕ್ರಿಮಿನಲ್ ಖಟ್ಲೆ ದಾಖಲಿಸುವುದಲ್ಲದೆ ಸರ್ಕಾರ ದಂಡವನ್ನೂ ವಿಧಿಸಿದೆ.