Saturday, August 13, 2022

Latest Posts

ಕೋಲಾರಕ್ಕೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಭೇಟಿ: ಡಿಜಿ ಹಳ್ಳಿ ಗಲಭೆಕೋರರು ಎಲ್ಲೇ ಅಡಗಿದ್ದರೂ ಬಂಧನ ಖಚಿತ

ಕೋಲಾರ:  ಬೆಂಗಳೂರಿನ ಡಿಜಿ ಹಳ್ಳಿ ಮತ್ತು ಕೆಜೆಹಳ್ಳಿ ಗಲಭೆ ಪ್ರಕರಣಗಳಲ್ಲಿ ಭಾಗಿಯಾದ ದುಷ್ಕರ್ಮಿಗಳು ಎಷ್ಟೇ ದೂರ ಹೋದರೂ, ಎಲ್ಲೇ ಅಡಗಿದ್ದರೂ ಅವರನ್ನು ಬಂಧಿಸುವುದಾಗಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು.
ಭಾನುವಾರ ನಗರದ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು.
ಡಿಜಿ ಮತ್ತು ಕೆಜೆ ಹಳ್ಳಿಯಲ್ಲಿ ಅಂದು ರಾತ್ರಿ ಗಲಭೆಯಲ್ಲಿ ತೊಡಗಿದವರ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ತನಿಖೆ ನಡೆಸುತ್ತಿದೆ, ದಾಂಧಲೆ ನಡೆಸಿದವರನ್ನು ಬಿಡಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.
ಪ್ರಕರಣದಲ್ಲಿ ಭಾಗಿಯಾದವರು ಕೋಲಾರದಲ್ಲಿ ತಲೆಮಾರಿಸಿಕೊಂಡಿದ್ದಾರೆ ಎಂಬ ವದಂತಿಗಳ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಕೋಲಾರ ಅಲ್ಲ ರಾಜ್ಯದ ಯಾವುದೇ ಮೂಲೆಗೆ ಹೋದರೂ, ಸಾವಿರ ಕಿ.ಮೀ ದೂರ ಹೋದರೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ, ಕೃತ್ಯದಲ್ಲಿ ಭಾಗವಹಿಸಿದವರನ್ನು ಬಂಧಿಸಲಾಗುವುದೆಂದು ತಿಳಿಸಿದರು.
ಇನ್ನು ಕೋಲಾರ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವಂತಹ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲಾಗುವುದು, ಈಗಾಗಲೇ ಪೊಲೀಸ್ ಪೇದೆಗಳ ಹುದ್ದೆಗೆ ನೇಮಕಾತಿ ನಡೆಯುತ್ತಿದ್ದು, ಮುಂದಿನ ತಿಂಗಳು ಪರೀಕ್ಷೆ ನಡೆಯುತ್ತದೆ, ನವೆಂಬರ್ ವೇಳೆಗೆ ಭರ್ತಿಯಾಗಲಿದೆ ಎಂದರು.
ಉಳಿದಂತೆ ೩೦೦ ಮಂದಿ ಪಿಎಸ್‌ಐ ಹುದ್ದೆಗಳ ಭರ್ತಿಗೂ ಪರೀಕ್ಷೆ ನಡೆದಿದ್ದು, ಫಲಿತಾಂಶಕ್ಕೆ ಕಾಯಲಾಗುತ್ತಿದ್ದು, ಎಲ್ಲವೂ ಭರ್ತಿಯಾಗುತ್ತದೆ ಎಂದು ತಿಳಿಸಿದರು.
ನರಸಾಪುರ ಸೇರಿದಂತೆ ಕೋಲಾರ ಜಿಲ್ಲೆಯ ಕೆಲ ಪೊಲೀಸ್ ಠಾಣೆಗಳನ್ನು ಮೇಲ್ದೇಜೆಗೆ ಏರಿಕೆ ಮಾಡಲು ಚಿಂತನೆ ನಡೆಯುತ್ತಿದೆ ಮತ್ತು ಹೊಸ ಪೊಲೀಸ್ ಠಾಣೆಗಳನ್ನು ಮಂಜೂರು ಮಾಡುವ ಸಂಬಂಧ ಸರ್ಕಾರ ಸದನದಲ್ಲಿ ಭರವಸೆ ನೀಡಿರುತ್ತದೆ, ಸರ್ಕಾರದ ನಿರ್ಧಾರವಾದ ನಂತರವೇ ಹೊಸ ಠಾಣೆ ತೆರೆಯಲಾಗುವುದು ಎಂದರು.
ರಾಜ್ಯದಲ್ಲಿ ಕೋವಿಡ್ ನಿಯಂತ್ರನಕ್ಕೆ ಪೊಲೀಸ್ ಸಿಬ್ಬಂದಿ ಸಾಕಷ್ಟು ಶ್ರಮವಹಿಸಿದ್ದಾರೆ, ಜೊತೆಗೆ ಕೆಲವರು ಪ್ರಾಣಗಳನ್ನು ಕಳೆದುಕೊಂಡಿದ್ದು, ಅವರಿಗೆ ಪೊಲೀಸ್ ಇಲಾಖೆ ಕೃತಜ್ಞತೆ ತಿಳಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್ ರೆಡ್ಡಿ ಮತ್ತಿತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss