ಹೊಸ ದಿಗಂತ ವರದಿ, ಕೋಲಾರ:
ಬೆಲೆ ಏರಿಕೆಯಾದರೂ ನಮ್ಮ ಹಬ್ಬಗಳ ಸಂಪ್ರದಾಯ ನಿಲ್ಲಿಸಲು ಸಾಧ್ಯವಿಲ್ಲವೆನ್ನುವಂತೆ ಸಂಕ್ರಾಂತಿ ಆಚರಣೆಗಾಗಿ ನಗರದ ವಿವಿಧೆಡೆ ಗೆಣಸು,ಶೇಂಗಾ,ಎಳ್ಳು,ಬೆಲ್ಲ ಖರೀದಿ ಜೋರಾಗಿ ನಡೆದಿದ್ದು, ಗೋಪಾಲಕರು ರಾಸುಗಳನ್ನು ಅಲಂಕರಿಸಲು ಕಾತರದಿಂದ ಸಿದ್ದತೆ ನಡೆಸಿದ್ದಾರೆ.
ನಗರದ ಬಸ್ನಿಲ್ದಾಣದ ಸಮೀಪ, ರಂಗಮಂದಿರದ ಮುಂಭಾಗ, ತರಕಾರಿ ಮಾರುಕಟ್ಟೆ ಬಳಿ ರಸ್ತೆ ಬದಿ ತಮಿಳುನಾಡು ಮತ್ತಿತರ ರಾಜ್ಯಗಳ ಕಬ್ಬು ರಾಶಿಯಾಗಿ ತಂದು ಹಾಕಿದ್ದು, ಮಾರಾಟದ ಭರಾಟೆ ಜೋರಾಗಿಯೇ ನಡೆದಿದೆ.
ಪ್ರತಿ ಜಳ್ಳೆ ಕಬ್ಬು 50 ರಿಂದ 60 ರೂ.ಗೆ ಮಾರಾಟವಾಗುತ್ತಿದ್ದು, ಹಬ್ಬದ ವಹಿವಾಟಿನಲ್ಲಿ ಮಹಿಳೆಯರು ಪುರುಷರು ಪಾಲ್ಗೊಂಡಿದ್ದುದು ಕಂಡು ಬಂತು.
ನಗರದ ಪ್ರಮುಖ ರಸ್ತೆಗಳಲ್ಲಿ, ಹೂ, ಹಣ್ಣು, ಶೇಂಗಾ ಸೇರಿದಂತೆ ಹಬ್ಬದ ಸಾಮಾನುಗಳ ಖರೀದಿ ಬರದಿಂದ ನಡೆದಿದೆ, ಕಳೆದ ವರ್ಷದ ಬೆಲೆಗಳಿಗೆ ಹೋಲಿಸಿದರೆ ಈ ಬಾರಿ ಎಲ್ಲಾ ವಸ್ತುಗಳ ಬೆಲೆಯೂ ಏರಿಕೆಯಾಗಿದೆ ಎನ್ನುತ್ತಾರೆ ಗ್ರಾಹಕರು.
ಎಳ್ಳು ಬೆಲ್ಲ, ಕಳ್ಳೆಪಪ್ಪು, ಕಳ್ಳೆಬೀಜದ ಬೆಲೆಯೂ ಗಗನದತ್ತ ದಾಪುಗಾಲು ಹಾಕಿದೆ, ಎಳ್ಳುಬೆಲ್ಲಕ್ಕಾಗಿಯೇ ಶುದ್ದಗೊಳಿಸಿದ ಪ್ರತಿ ಕೆಜಿ ಎಳ್ಳು 500 ರೂ, ಶೇಂಗಾ ಬೀಜಕ್ಕೆ 230ರೂ, ಕಳ್ಳೆಪಪ್ಪಿಗೆ 130 ರೂ, ಬೆಲ್ಲ 50 ರಿಂದ 70ರೂಗೆ ತನ್ನ ಬೆಲೆ ಏರಿಸಿಕೊಂಡು ಬೀಗುತ್ತಿದ್ದರೂ, ಹಬ್ಬಕ್ಕಾಗಿ ಈ ವಸ್ತುಗಳನ್ನು ಖರೀದಿಸಲೇಬೇಕಾದ ಅನಿವಾರ್ಯತೆ ಗ್ರಾಹಕನದ್ದಾಗಿದೆ.
ಸಂಕ್ರಾಂತಿ ಆಚರಣೆಗೆ ಅಷ್ಟೇನು ಖಾದ್ಯ ಆಹಾರ ತಯಾರಿಸದ ನಾಗರೀಕರು ಪೊಂಗಲ್ ಜತೆಗೆ ಸಂಕ್ರಾಂತಿಯ ಅವರೇ ಹಿತುಕಿದ ಬೇಳೆ ಸಾರಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ. ಇದರಿಂದಾಗಿ ಕಳೆದೆರಡು ದಿನಗಳ ಹಿಂದೆ ೪೦ ರೂ ಇದ್ದ ಕೆಜಿ ಅವರೆಕಾಯಿ ಈಗ ೫೦ ರೂ ದಾಟಿದೆ.
ಗೋವುಗಳಿಗೆ ವಿಶೇಷ
ಸಂಕ್ರಾಂತಿ ಗೋವುಗಳ ಹಬ್ಬವೂ ಆಗಿರುವುದರಿಂದ ಗ್ರಾಮೀಣ ಜನತೆ ತಮ್ಮ ಗೋವುಗಳನ್ನು ಸಿಂಗರಿಸಿ, ಪೂಜಿಸಲು ಅಗತ್ಯ ಸಾಮಗ್ರಿಗಳಿಗಾಗಿ ವ್ಯಾಪಾರ ನಡೆಸುತ್ತಿದ್ದಾರೆ.
ನಗರದ ಕಿಲಾರಿಪೇಟೆಯಲ್ಲಿ ಸಂಕ್ರಾಂತಿ ಅಂಗವಾಗಿ ಪ್ರತಿ ವರ್ಷವೂ ಗೋವುಗಳಿಗೆ ಮೇವು ದಾನ ನೀಡುವ ಸಂಪ್ರದಾಯವನ್ನು ಇಲ್ಲಿನ ಯಾದವ ಸಮಾಜದ ಮುಖಂಡರು ಪಾಲಿಸಿಕೊಂಡು ಬಂದಿದ್ದು, ಈ ಬಾರಿಯೂ ಈ ವಿಶಿಷ್ಟತೆ ಮುಂದುವರೆಯಲಿದೆ.
ಹಬ್ಬದ ಪೂಜೆಗೆ ಮಾತ್ರವಲ್ಲದೇ ಗೋವುಗಳ ಅಲಂಕಾರಕ್ಕೂ ಹೂವಿನ ಅಗತ್ಯತೆ ಇರುವುದರಿಂದ ಹೂ ಮಾರುಕಟ್ಟೆಯಲ್ಲಿ ವ್ಯಾಪಾರದ ಭರಾಟೆ ಜೋರಾಗಿ ನಡೆದಿದ್ದು, ಜನತೆ ಹೂ ಖರೀದಿಯಲ್ಲಿ ಬ್ಯುಸಿಯಾಗಿದ್ದರು.
ಅಲಂಕಾರಗೊಂಡ ನಗರದ ದೇವಾಲಯಗಳು
ಸಂಕ್ರಾಂತಿ ಜತೆಗೆ ಧನುರ್ಮಾಸದ ಪೂಜೆ, ಮುಂಜಾನೆಯ ಭಜನೆ,ಮೆರವಣಿಗೆಯ ಸಂಪ್ರದಾಯವನ್ನೂ ಇನ್ನೂ ಮುಂದುವರೆಸಿಕೊಂಡು ಹೋಗಿರುವ ನಗರದ ಕಿಲಾರಿಪೇಟೆ, ಗಲ್ಪೇಟೆ ಮತ್ತಿತರ ಬಡಾವಣೆಗಳ ನಾಗರೀಕರು ಸಂಕ್ರಾಂತಿಯಂದು ಚುಮುಚುಮು ಚಳಿಯಲ್ಲಿ ಭಜನೆಗೆ ತಪ್ಪಿಸಿಕೊಳ್ಳದೇ ಬರುವ ಮಕ್ಕಳಿಗೆ ಬಹುಮಾನ ವಿತರಿಸುವ ಕಾರ್ಯವನ್ನೂ ಇದೇ ದಿನ ದೇವಾಲಯಗಳ ಮುಂದೆ ನಡೆಸುತ್ತಾರೆ.
ಇದರಿಂದಾಗಿ ನಗರದ ವಿವಿಧ ದೇವಾಲಯಗಳಲ್ಲಿ ಸಂಕ್ರಾಂತಿ ಸಂಭ್ರಮಕ್ಕಾಗಿ ವಿಶೇಷ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ, ದೇವರಿಗೆ ಹೂವಿನ ಅಲಂಕಾರ, ಪ್ರಸಾದ ವಿನಿಯೋಗ, ಎಳ್ಳುಬೆಲ್ಲ ಹಂಚಿಕೆಗೆ ಸಿದ್ದತೆಗಳು ಭರದಿಂದ ನಡೆದಿವೆ.
ಒಟ್ಟಾರೆ ಬೆಲೆ ಏರಿಕೆಯ ಸಂಕಷ್ಟ ಹಬ್ಬದ ಸಂಭ್ರಮಕ್ಕಂತೂ ಅಡ್ಡಿಯಾಗಿಲ್ಲ, ನಮ್ಮ ಹಿರಿಯರು ಹಾಕಿಕೊಟ್ಟ ಸಂಪ್ರದಾಯವನ್ನು ನಮ್ಮ ಜನ ಮರೆತಿಲ್ಲವೆಂಬುದಕ್ಕೆ ಈ ಹಬ್ಬದ ಸಂಭ್ರಮ ಸಾಕ್ಷಿಯೆನ್ನಬಹುದು.