Wednesday, June 29, 2022

Latest Posts

ಕೋಲಾರದಲ್ಲಿ ಸಹಕಾರಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ರಾಜ್ಯದ ಪ್ರಥಮ ಸಿಎಂ ದಿ.ಕೆ.ಸಿ.ರೆಡ್ಡಿ ಪುತ್ಥಳಿಗೆ ನಿರ್ಧಾರ

ಹೊಸ ದಿಗಂತ ವರದಿ, ಕೋಲಾರ:

ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿ ಸಹಕಾರಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ದಿವಂಗತ ಕೆ.ಸಿ.ರೆಡ್ಡಿ ಅವರ ಪುತ್ಥಳಿಯನ್ನು ನಗರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶಾಸಕರೂ ಹಾಗೂ ಇಪ್ಕೋ ಟೋಕಿಯೋ ವಿಮಾ ಸಂಸ್ಥೆ ಅಧ್ಯಕ್ಷರೂ ಆದ ಕೆ.ಶ್ರೀನಿವಾಸಗೌಡ ತಿಳಿಸಿದರು.
ಶನಿವಾರ ನಗರದ ಜಿಲ್ಲಾ ಸಹಕಾರ ಯೂನಿಯನ್ ಮುಂಭಾಗ ಶಾಸಕ ಕೆ.ವೈ.ನಂಜೇಗೌಡರೊಡನೆ 67ನೇ ಸಹಕಾರ ಸಪ್ತಾಹದ ಧ್ವಜಾರೋಹಣ ನೆರವೇರಿಸಿದ ನಂತರ ಸಹಕಾರಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ನಮ್ಮ ಜಿಲ್ಲೆಯವರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿದ್ದರು ಆದರೆ ಅವರ ನೆನಪಿನಲ್ಲಿ ಜಿಲ್ಲೆಯಲ್ಲಿ ಏನನ್ನೂ ಮಾಡಲಿಲ್ಲ, ಕೆ.ಸಿ.ರೆಡ್ಡಿ ಅವರು ಜಿಲ್ಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಿ ಅದರ ಅಧ್ಯಕ್ಷರಾಗುವ ಮೂಲಕ ಸಹಕಾರಿ ಕ್ಷೇತ್ರದಲ್ಲೂ ಕೆಲಸ ಮಾಡಿ ರೈತರಿಗೆ ಅನುಕೂಲ ಮಾಡಿದ್ದಾರೆ ಎಂದರು.
ಈ ಹಿನ್ನಲೆಯಲ್ಲಿ ಅವರ ನೆನಪಿಗಾಗಿ ಪುತ್ಥಳಿಯನ್ನು ನಿರ್ಮಿಸಲು ನಿರ್ಧರಿಸಿದ್ದು, ಜಿಲ್ಲೆಯ ಎಲ್ಲಾ ಸಹಕಾರಿಗಳು ಹಾಗೂ ಸಹಕಾರ ಸಂಸ್ಥೆಗಳು ಸಹಕಾರ ನೀಡಬೇಕೆಂದು ತಿಳಿಸಿದರು.
ಸಹಕಾರಿ ಕ್ಷೇತ್ರದಲ್ಲಿ ಯುವಕರು ಬರಲಿ
ಜಿಲ್ಲೆಯ ಸಹಕಾರ ಕ್ಷೇತ್ರ ಇನ್ನಷ್ಟು ಪ್ರಗತಿ ಸಾಧಿಸಲು ಯುವಕರು ಮುಂದಾಳತ್ವ ವಹಿಸಬೇಕು,  ನಂಬಿಕೆ,ವಿಶ್ವಾಸ, ಪಾರದರ್ಶಕ ವ್ಯವಹಾರದ ಮೂಲಕ ಸಹಕಾರಿ ರಂಗವನ್ನು ಮತ್ತಷ್ಟು ಬಲಗೊಳಿಸಬೇಕು ಎಂದು ಕರೆ ನೀಡಿದರು.
ತಾವಿಂದು ಅಂತರಾಷ್ಟ್ರೀಯ ಮಟ್ಟದ ಇಫ್ಕೋ-ಟೊಕಿಯೋ ಸಂಸ್ಥೆಯ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುವುದಕ್ಕೆ ಅಣ್ಣಿಹಳ್ಳಿಯ ಸಹಕಾರ ಸಂಸ್ಥೆ ಕಾರಣ, ಜಿಲ್ಲೆಯಲ್ಲಿ ಅನೇಕರು ನನ್ನಂತೆ ಸಹಕಾರ ಕ್ಷೇತ್ರದ ಮೂಲಕ ಉನ್ನತ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಬ್ಯಾಂಕ್ ಉಳಿಸಿದ ಗೋವಿಂದಗೌಡ
ನಷ್ಟದಿಂದ ಮುಚ್ಚುವ ಹಂತ ತಲುಪಿದ್ದ ಡಿಸಿಸಿ ಬ್ಯಾಂಕ್‌ಗೆ ಬ್ಯಾಲಹಳ್ಳಿಹಳ್ಳಿ ಗೋವಿಂದಗೌಡ ಸಾರಥ್ಯವಹಿಸಿಕೊಂಡು ಜೀವ ತುಂಬಿದ್ದಾರೆ, ಇದೀಗ ಬ್ಯಾಂಕಿನ ಬಗ್ಗೆ ರೈತರು, ಮಹಿಳೆಯರಲ್ಲಿ ನಂಬಿಕೆ,ವಿಶ್ವಾಸ ಹೆಚ್ಚಾಗುವಂತಾಗಿದೆ ಎಂದರು.
ನಿಜ ಹೇಳಬೇಕೆಂದರೆ ನನಗೆ ಗೋವಿಂದಗೌಡ ಅಧ್ಯಕ್ಷನಾದರೆ ನಿಬಾಯಿಸುವುದು ಕಷ್ಟವಾಗಬಹುದೆಂದು ಬೇರೆಯವರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದ್ದೆ. ಆದರೆ ನನ್ನ ನಿರೀಕ್ಷೆಗೂ ಮೀರಿ ಬ್ಯಾಂಕಿನ ಅಭಿವೃದ್ದಿ ಮಾಡಿದ್ದಾರೆ ಎಂದು ಪ್ರಶಂಶಿಸಿದರು.
ಸಹಕಾರ ರಂಗ ಬಲಿಷ್ಟವಾಗಿದೆ
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಬಲಿಷ್ಟವಾಗಿದೆ ಎಂಬುದಕ್ಕೆ ಕೋಚಿಮುಲ್ ಹಾಗೂ ಡಿಸಿಸಿ ಬ್ಯಾಂಕ್ ಸಾಧನೆಯೇ ಸಾಕ್ಷಿ ಎಂದು ಅಭಿಪ್ರಾಯಪಟ್ಟರು.
ಮುಳುಗಿದ್ದ ಡಿಸಿಸಿ ಬ್ಯಾಂಕ್ ಕಳೆದ 7 ವರ್ಷಗಳಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ೩೬ ಸಾವಿರಕ್ಕೂ ಹೆಚ್ಚು ಸ್ತ್ರೀಶಕ್ತಿ ಸಂಘಗಳಿಗೆ, 1823 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಗೂ ರೈತರಿಗೆ ಬಡ್ಡಿರಹಿತ ಸಾಲ ನೀಡುವ ಮೂಲಕ ರಾಜ್ಯದ ಗಮನ ಸೆಳೆದಿದೆ, ಅದೇ ರೀತಿ ಜಿಲ್ಲಾ ಹಾಲು ಒಕ್ಕೂಟ ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲಿ ೨ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಪ್ರತಿದಿನ 10ಲಕ್ಷ ಲೀಟರ್ ಹಾಲು ಒಕ್ಕೂಟಕ್ಕೆ ಸರಬರಾಜು ಆಗುತ್ತಿದೆ, ಚಿಕ್ಕಬಳ್ಳಾಪುರದಲ್ಲಿ ೨೦೦ ಕೋಟಿ ರೂ.ವೆಚ್ಚದಲ್ಲಿ ಮೇಗಾ ಡೇರಿಯನ್ನು ನಿರ್ಮಿಸಲಾಗಿದ್ದು ಕೋಲಾರದಲ್ಲೂ 200 ಕೋಟಿ ರೂ. ವೆಚ್ಚದಲ್ಲಿ ಎಂ.ವಿ.ಕೃಷ್ಣಪ್ಪ ಮೇಗಾ ಡೇರಿ ಸ್ಥಾಪನೆಗೆ ನಿರ್ಧರಿಸಲಾಗಿದ್ದು ಶೀಘ್ರವೇ ಕಾಮಗಾರಿಗೆ ಚಾಲನೆ ನೀಡುವುದಾಗಿ ಹೇಳಿದರು.
ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮಾತನಾಡಿ, ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಇನ್ನಷ್ಟು ಬಲಿಷ್ಟವಾಗಬೇಕಿದೆ, ಹಿರಿಯರ ಮಾರ್ಗದರ್ಶನದಲ್ಲಿ ಡಿಸಿಸಿ ಬ್ಯಾಂಕ್ ಮುನ್ನಡೆಯುತ್ತಿದ್ದು, ಎಲ್ಲಾ ವರ್ಗದ ಜನರ ಹಿತ ಕಾಪಾಡುವುದು ಡಿಸಿಸಿ ಬ್ಯಾಂಕಿನ ಆದ್ಯತೆಯಾಗಿದೆ ಎಂದರು.
ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ಸಹಕಾರ ಸಂಸ್ಥೆಗಳ ಸದಸ್ಯತ್ವ ಹೆಚ್ಚಿಸುವ ಮೂಲಕ ಪರಿಶಿಷ್ಟ ಜಾತಿ, ಪ.ಪಂಗಡ ಹಾಗೂ ಅಲ್ಪಸಂಖ್ಯಾತರು ಆಡಳಿತ ಮಂಡಳಿಯಲ್ಲಿ ಪ್ರಾತಿನಿಧ್ಯತೆ ಪಡೆಯಲು ಅವಕಾಶ ಮಾಡಿಕೊಡುವ ಸಂಬಂಧ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮತ್ತು ನಾನು ಚರ್ಚೆ ನಡೆಸಿದ್ದೇವೆ, ಮುಂದಿನ ದಿನಗಳಲ್ಲಿ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಎಸ್.ವಿ.ಗೋವರ್ಧನರೆಡ್ಡಿ, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ನಿರ್ದೇಶಕ ನಾಗನಾಳ ಸೋಮಣ್ಣ,ಸಹಕಾರ ಸಂಘಗಳ ಉಪ ನಿರ್ದೇಶಕ ಸಿದ್ಧನಗೌಡ ಎನ್.ನೀಲಪ್ಪನವರ್, ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಮಾತನಾಡಿದರು.
ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಉರಿಗಿಲಿ ಎಸ್.ಆರ್.ರುದ್ರಸ್ವಾಮಿ, ಇ.ಗೋಪಾಲಪ್ಪ, ಎನ್.ಶಂಕರನಾರಾಯಣಗೌಡ, ಅರುಣಮ್ಮ, ಡಿ.ಆರ್.ರಾಮಚಂದ್ರೇಗೌಡ, ಪೆಮ್ಮಶೆಟ್ಟಿಹಳ್ಳಿ ಎಸ್.ಸುರೇಶ್, ಪಿ.ಎಂ.ವೆಂಕಟೇಶ್, ಎನ್.ನಾಗರಾಜ್, ಕೆ.ಎಂ.ಮಂಜುನಾಥ್, ಬಿ.ರಮೇಶ್, ಟಿ.ಕೆ.ಬೈರೇಗೌಡ, ವಿ.ಪಾಪಣ್ಣ, ಕೋಲಾರ ಎಪಿಎಂಸಿ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಹಾಲು ಒಕ್ಕೂಟದ ಉಪ ಕಚೇರಿಯ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ, ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಭಾರತಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss