ಕೋಲಾರ: ಎಸ್ಸೆಸೆಲ್ಸಿ ವಿಜ್ಞಾನ ಪರೀಕ್ಷಾ ಕಾರ್ಯದ ಪರಿಶೀಲನೆಗೆ ಜೂ.೨೯ರಂದು ಸಚಿವ ಸುರೇಶ್ಕುಮಾರ್ ಆಗಮಿಸುವ ಹಿನ್ನಲೆಯಲ್ಲಿ ಪರಿಕ್ಷಾ ಕೇಂದ್ರಗಳಲ್ಲಿನ ವ್ಯವಸ್ಥೆಗಳ ಪುನರ್ ಪರಿಶೀಲನಾ ಕಾರ್ಯವನ್ನು ಡಿಡಿಪಿಐ ಕೆ.ರತ್ನಯ್ಯ ನಡೆಸಿದರು.
ತಾಲ್ಲೂಕಿನ ವೇಮಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿದ್ದ ಅವರು, ಈಗಾಗಲೇ ಮುಗಿದಿರುವ ಗಣಿತ ಮತ್ತು ದ್ವಿತೀಯ ಭಾಷಾ ಪರೀಕ್ಷೆಗಳಿಗೆ ನಡೆಸಿದಷ್ಟೇ ಜಾಗ್ರತೆಯಿಂದ ಮುಂದಿನ ಪರೀಕ್ಷೆಗಳು ನಡೆಸಲು ತಾಕೀತು ಮಾಡಿದರು.
ಮಳೆಯಿಂದಾಗಿ ಮಕ್ಕಳು ಕೇಂದ್ರಕ್ಕೆ ಬರುವಾಗ ಮತ್ತು ಪರೀಕ್ಷೆ ಮುಗಿಸಿ ವಾಪಸ್ಸಾಗುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ರಚಿಸಲಾಗಿದ್ದ ಬಾಕ್ಸ್ಗಳು ಹಾಳಾಗಿರುವನ್ನು ಪರಿಶೀಲಿಸಿದ ಅವರು ಹೊಸದಾಗಿ ಬಾಕ್ಸ್ ರಚನೆಗೆ ಸೂಚಿಸಿದರು.
ಭಾನುವಾರ ಇಡೀ ಕಾಲೇಜಿನ ಆವರಣ, ಎಲ್ಲಾ ಕೊಠಡಿ,ಡೆಸ್ಕ್ಗಳಿಗೆ ಸ್ಯಾನಿಟೈಸ್ ಮಾಡಲಾಗಿದ್ದು, ಶೌಚಾಲಯಗಳ ಸ್ವಚ್ಚತೆ, ಇಡೀ ಶಾಲಾ ಪರಿಸರ ಸ್ವಚ್ಚತೆ ಕುರಿತು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಡಿಪಿಐ ಅವರು, ಜಿಲ್ಲೆಯ ಶಿಕ್ಷಣ ಇಲಾಖೆ ಹಾಗೂ ಪರೀಕ್ಷಾ ಸಿದ್ದತೆಗಳ ಕುರಿತು ನಡೆಸಲಾದ ಅಣಕು ಪರೀಕ್ಷೆ ವೀಡಿಯೋ ಕುರಿತು ಸಚಿವರು ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಜತೆಗೆ ಈವರೆಗೂ ನಡೆದ ಪರೀಕ್ಷೆಗಳಲ್ಲಿ ವಹಿಸಿದ ಶಿಸ್ತಬದ್ದ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ ಎಂದರು.
ಇಲಾಖೆ ಇಡೀ ಆರುದಿನದ ಪರೀಕ್ಷೆಯನ್ನೂ ಮೊದಲದಿನದಂತೆಯೇ ಉತ್ಸಾಹ, ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಿ ನಡೆಸುತ್ತಿದೆ, ಪ್ರತಿದಿನವೂ ಮೊದಲದಿನವೇ ಎಂದು ಭಾವಿಸಿ ಸುಗಮ ಪರೀಕ್ಷೆ ನಡೆಸಲು ಈಗಾಗಲೇ ಸಿಬ್ಬಂದಿಗೆ ಮಾರ್ಗದರ್ಶನ ನೀಡಿರುವುದಾಗಿ ನುಡಿದರು.
ಮಕ್ಕಳಲ್ಲಿಯೂ ಯಾವುದೇ ಗೊಂದಲ,ಭಯವಿಲ್ಲ, ಎಲ್ಲರೂ ಖುಷಿಯಿಂದಲೇ ಪರೀಕ್ಷೆಗೆ ಬಂದಿದ್ದಾರೆ, ಮಕ್ಕಳಿಗೆ ಆತಂಕವನ್ನು ನಿವಾರಿಸಲಾಗಿದೆ, ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ಇದೆ ಎಂದು ತಿಳಿಸಿದರು.
ಸಣ್ಣಪುಟ್ಟ ದೋಷಗಳು ಸುಳಿಯದಂತೆ ಕ್ರಮವಹಿಸಲಾಗಿದೆ, ಹತ್ತಾರು ಬಾರಿ ಸಭೆ ನಡೆಸಿ ಮಾರ್ಗದರ್ಶನದ ಜತೆಗೆ ಮುನ್ನಚ್ಚರಿಕಾ ಕ್ರಮಗಳ ಕುರಿತು ಜಾಗೃತಿ ಮೂಡಿಸಿರುವುದಾಗಿ ತಿಳಿಸಿದರು.
ಸಚಿವ ಸುರೇಶ್ಕುಮಾರ್ ಅವರು ಜೂ.೨೯ರ ಸೋಮವಾರ ಮಧ್ಯಾಹ್ನ ೧೨-೧೫ಕ್ಕೆ ತಾಲ್ಲೂಕಿನ ಕ್ಯಾಲನೂರು ಕೆಪಿಎಸ್ ಪಬ್ಲಿಕ್ ಶಾಲೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡುವರು, ಅಲ್ಲಿಂದ ನೇರವಾಗಿ ವೇಮಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಕೇಂದ್ರಕ್ಕೂ ಆಗಮಿಸಿ ಅಲ್ಲಿ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ದೈಹಿಕ ಶಿಕ್ಷಣ ಅಧೀಕ್ಷಕ ಮಂಜುನಾಥ್, ಕೇಂದ್ರದ ಮುಖ್ಯ ಅಧೀಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ಮತ್ತಿತರರಿದ್ದರು.