spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೋಲಾರ| ಕೊರೋನಾ ಕುರಿತು ಜಾಗೃತಿ-ಅಣಕು ಪರೀಕ್ಷೆಗೆ ರಾಜ್ಯವ್ಯಾಪಿ ಮೆಚ್ಚುಗೆ!

- Advertisement -Nitte

ಕೋಲಾರ:  ಕೊರೋನಾ ಸವಾಲನ್ನು ಹಿಮ್ಮೆಟ್ಟಿಸಿ ಯಶಸ್ವಿಯಾಗಿ ಪರೀಕ್ಷೆ ನಡೆಸಬಹುದು ಎಂಬುದನ್ನು ಇಲಾಖೆ ವತಿಯಿಂದ ನಡೆಸಲಾದ ಅಣಕು ಪರೀಕ್ಷೆ  ಮೂಲಕ ಸಾಬೀತು ಮಾಡಿದ್ದು, ಇದಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಡಿಡಿಪಿಐ ಕೆ.ರತ್ನಯ್ಯ ತಿಳಿಸಿದರು.
ನಗರದಲ್ಲಿ ಬುಧವಾರ ನಡೆದ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗಿನ ಈ ಸಾಲಿನ ೧೦ನೇ ಹಾಗೂ ಕೊನೆಯ ಫೋನ್ ಇನ್ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡುತ್ತಿದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ತಾಲ್ಲೂಕಿನ ವ್ಯಾಲಿ ಪಬ್ಲಿಕ್ ಶಾಲಾ ಪರೀಕ್ಷಾ ಕೇಂದ್ರದಲ್ಲಿ ನಡೆಸಲಾದ ಅಣಕು ಪರೀಕ್ಷೆಯಲ್ಲಿ ಕೊರೋನಾ ಸಂಕಷ್ಟದಲ್ಲಿ ಮುಂಜಾಗ್ರತೆ ವಹಿಸಿ ಪರೀಕ್ಷೆ ನಡೆಸುವುದು ಹೇಗೆ ಎಂಬುದನ್ನು ಸಾಕ್ಷೀಕರಿಸಲಾಗಿದೆ ಎಂದರು.
ಈ ಅಣಕು ಪರೀಕ್ಷೆಯ ವೀಡಿಯೋ ರಾಜ್ಯದ ಇತರ ಜಿಲ್ಲೆಗಳಿಗೂ ಮಾದರಿಯಾಗಿದೆ ಎಂದ ಅವರು ಶಿಕ್ಷಣ ಸಚಿವರು,ಇಲಾಖೆಯ ಆಯುಕ್ತರು ಸೇರಿದಂತೆ ರಾಜ್ಯಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕೊರೋನಾ ಸೋಂಕಿನ ಸಂಕಷ್ಟದಲ್ಲಿ ಪರೀಕ್ಷೆ ನಡೆಸುವುದು ಒಂದು ಸವಾಲಾಗಿದ್ದರೂ, ಇದನ್ನು ಧೈರ್ಯದಿಂದ ಹಾಗೂ ಮುಂಜಾಗ್ರತೆಯಿಂದ ಸಮರ್ಥವಾಗಿ ಎದುರಿಸಬಹುದು, ಮಕ್ಕಳ ಸುರಕ್ಷತೆಯೊಂದಿಗೆ ಯಶಸ್ವಿಯಾಗಿ ಪರೀಕ್ಷೆ ನಡೆಸಬಹುದು ಎಂದು ತಿಳಿಸಿದರು.
ಫೋನ್ ಇನ್ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲಾ ಇಲಾಖೆ ಅಧಿಕಾರಿಗಳು, ಸಂಪನ್ಮೂಲ ಶಿಕ್ಷಕರನ್ನು ಅವರು ಅಭಿನಂದಿಸಿದರು.
ರಾಜ್ಯಾದ್ಯಂತ ಬಂದ ಫೋನ್ ಕರೆಗಳು
ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಎಸ್ಸೆಸ್ಸೆಲ್ಸಿ ಪರೀಕ್ಷೆ ಜೂ.೨೫ ರಿಂದ ನಡೆಯಲಿರುವುದರಿಂದ ಇಲಾಖೆಯಿಂದ ನಡೆಸಲಾಗುತ್ತಿರುವ ಕೊನೆಯ ಫೋನ್ ಇನ್ ಕಾರ್ಯಕ್ರಮ ಇದಾಗಿದ್ದು, ಇಷ್ಟೊಂದು ಫೋನ್ ಇನ್ ಕಾರ್ಯಕ್ರಮಗಳನ್ನು ಬೇರಾವ ಜಿಲ್ಲೆಗಳಲ್ಲೂ ನಡೆಸಿಲ್ಲ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳ ಮಕ್ಕಳು, ಪೋಷಕರು ಅದರಲ್ಲೂ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ದೂರವಾಣಿ ಕರೆ ಮಾಡಿ ಪರೀಕ್ಷೆ ಕುರಿತು ಇದ್ದ ಆತಂಕ ಪರಿಹರಿಸಿಕೊಂಡಿದ್ದಾರೆ ಎಂದ ಅವರು, ಲಾಕ್‌ಡೌನ್ ಸಂದರ್ಭದಲ್ಲಿ ಮಕ್ಕಳನ್ನು ಜಾಗೃತಗೊಳಿಸಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಇದಾಗಿತ್ತು ಎಂದರು.
ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಕೋವಿಡ್-೧೯ ರಿಂದ ಇದ್ದ ಭಯ ಹೋಗಲಾಡಿಸುವಲ್ಲಿ ಫೋನ್ ಇನ್ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸಿದ್ದು, ಇದನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಸಂಪನ್ಮೂಲ ಶಿಕ್ಷಕರಿಗೆ ಅಭಿನಂದನಾ ಪತ್ರವನ್ನು ಇಲಾಖೆಯಿಂದ ನೀಡುವುದಾಗಿ ತಿಳಿಸಿದರು.
ಜೀವ ಇದ್ದರೆ ಜೀವನ ಎಂಬ ಮಾತಿನಂತೆ ಮಕ್ಕಳಿಗೆ ಸ್ಯಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರದ ಮಹತ್ವವನ್ನು ತಿಳಿಸಿಕೊಡುವಲ್ಲಿಯೂ ಫೋನ್ ಇನ್ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಮಕ್ಕಳು,ಪೋಷಕರಿಂದ ೫೪೯ ದೂರವಾಣಿಕರೆ
ಪರೀಕ್ಷಾನೋಡಲ್ ಅಧಿಕಾರಿ ನಾಗೇಂದ್ರಪ್ರಸಾದ್ ಫೋನ್ ಇನ್ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ, ೧೦ನೇ ಹಾಗೂ ಕೊನೆಯ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆ,ಚಿಕ್ಕಬಳ್ಳಾಪುರ, ಶಿವಮೊಗ್ಗ, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ೫೪೯ ಕರೆಗಳಿಗೆ ಉತ್ತರ ನೀಡಿ ಆತಂಕ ನಿವಾರಿಸಲಾಯಿತು ಎಂದರು.
ಮಹಿಳಾ ಪೋಷಕರೇ ಹೆಚ್ಚು ಕರೆ ಮಾಡಿದ್ದು, ಕೊರೋನಾ ಎದುರಿಸಲು ಕೈಗೊಂಡಿರುವ ಕ್ರಮಗಳ ಕುರಿತು ಪ್ರಶ್ನೆ ಕೇಳಿದರು, ಪ್ರಶ್ನೆಪತ್ರಿಕೆ ಮಾದರಿ, ಅಂಕಗಳು ವ್ಯತ್ಯಾಸವಾಗುತ್ತದೆಯೇ ಎಂಬೆಲ್ಲಾ ಪ್ರಶ್ನೆಗಳು ಕೇಳಿ ಬಂದವು.
ಬಂಗಾರಪೇಟೆ ತಾಲ್ಲೂಕಿನಿಂದ ೭೩, ಕೆಜಿಎಫ್-೬೦, ಕೋಲಾರ-೮೫, ಮಾಲೂರು-೬೪, ಮುಳಬಾಗಿಲು-೧೧೫ ಹಾಗೂ ಶ್ರೀನಿವಾಸಪುರ ತಾಲ್ಲೂಕಿನಿಂದ ೫೦ ಕರೆಗಳಿಗೆ ಉತ್ತರ ನೀಡಲಾಯಿತು.
ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಎಲ್ಲಾ ೧೦ ಫೋನ್ ಇನ್ ಕಾರ್ಯಕ್ರಮಗಳಲ್ಲಿ ಹಾಜರಿದ್ದು, ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಅಭಿನಂದಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಬಿ.ಕೆ.ನಾಗರಾಜ್, ಬಿ.ಎ.ಕವಿತಾ, ಭಟ್ರಹಳ್ಳಿ ಶ್ರೀನಿವಾಸಗೌಡ, ನಾರಾಯಣಸ್ವಾಮಿ, ವೇಣುಗೋಪಾಲ್, ಬಸವರಾಜಯ್ಯ, ಶೋಭಾ,ಎಂ.ಕವಿತಾ,ಕೆ.ವಾಣಿ,ಆರ್.ಚೈತ್ರಾ, ಪ್ರಮೀಳಾ ಮತ್ತಿತರರು ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.
ಈ ಸಂದರ್ಭದಲ್ಲಿ ಡಿವೈಪಿಸಿ ಮೋಹನ್ ಬಾಬು, ಎವೈಪಿಸಿ ಸಿದ್ದೇಶ್, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಮಂಜುನಾಥ್, ವಿಷಯ ಪರಿವೀಕ್ಷಕರಾದ ಗಾಯತ್ರಿ,ಶಶಿವಧನ, ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss