ಕೋಲಾರ: ಜಿಲ್ಲಾಸ್ಪತ್ರೆಯಲ್ಲೇ ಕೊರೋನಾ ಪರೀಕ್ಷಾ ಲ್ಯಾಬ್ ಆರಂಭವಾಗುತ್ತಿರುವುದರಿಂದ ದಿನಕ್ಕೆ ೧೫೦ ಮಂದಿಯ ಗಂಟಲು ದ್ರವ ಮಾದರಿಗಳ ಪರೀಕ್ಷಾ ಫಲಿತಾಂಶ ಅದೇ ದಿನ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಅಬಕಾರಿ ಸಚಿವ ಹೆಚ್.ನಾಗೇಶ್ ತಿಳಿಸಿದರು.
ಮಂಗಳವಾರ ನಗರದ ಎಸ್ಸೆನ್ನಾರ್ ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವಿಭಾಗದಲ್ಲಿ ಸ್ಥಾಪಿಸಿರುವ ಕೋವಿಡ್ ೧೯ ಪ್ರಯೋಗಾಲಯವನ್ನು ಉದ್ಘಾಟಿಸಿದ ಅವರು, ತಮ್ಮ ಹಾಗೂ ಡಿಸಿಯವರ ಮನವಿಗೆ ತಕ್ಷಣ ಸ್ಪಂದಿಸಿ ಜಿಲ್ಲೆಗೆ ಪ್ರಯೋಗಾಲಯ ಮಂಜೂರು ಮಾಡಿದ ಸಿಎಂಗೆ ಧನ್ಯವಾದ ಸಲ್ಲಿಸಿದರು.
ಕೊರೋನಾ ಪರೀಕ್ಷೆಗೆ ಗಂಟಲುದ್ರವ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಬೇಕಾಗಿತ್ತು, ಆದರೆ ಈಗ ಇಲ್ಲೇ ಲ್ಯಾಬ್ ಇದ್ದ, ಗಂಟೆಗೆ ೧೨ ಮಂದಿಯಂತೆ ಒಟ್ಟು ದಿನಕ್ಕೆ ೧೫೦ ಮಂದಿಯ ಫಲಿತಾಂಶ ಸಿಗಲಿದೆ ಎಂದರು.
ಖಾಸಗಿ ಆಸ್ಪತ್ರೆಗಿಂತ
ನಾವು ಕಡಿಮೆ ಇಲ್ಲ
ನಗರದ ರಾಜರ ಕಾಲದ ಇತಿಹಾಸ ಹೊಂದಿರುವ ಜಿಲ್ಲಾ ಆಸ್ಪತ್ರೆಯ ವಾತಾವರಣ ನೋಡಿದರೆ ಯಾವುದೇ ಖಾಸಗಿ ಆಸ್ಪತ್ರೆಗಳಿಗಿಂತ ಕಡಿಮೆ ಇಲ್ಲ, ಮಾದರಿ ಆಸ್ಪತ್ರೆಯಾಗಿ ಹೊರಹೊಮ್ಮಿದೆ ಎಂದ ಅವರು, ಇದು ಮುಂದುವರೆಯಬೇಕು, ಇನ್ನಷ್ಟು ಉತ್ತಮ ಸೇವೆ ನೀಡುವಂತಾಗಲು ಜಿಲ್ಲಾಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಿದರು.
ಇಷ್ಟು ದಿನ ಕರೊನಾ ಪರೀಕ್ಷೆಗಾಗಿ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಿ ವರದಿಗಾಗಿ ಕನಿಷ್ಟ ೨ ದಿನ ಕಾಯಬೇಕಿತ್ತು. ವೀಡಿಯೋ ಕಾನ್ಫರೆನ್ಸ್ನಲ್ಲಿ ಜಿಲ್ಲಾಸ್ಪತ್ರೆಗೆ ಪ್ರಯೋಗಾಲಯ ಮಂಜೂರು ಮಾಡುವಂತೆ ನಾನು ಹಾಗೂ ಜಿಲ್ಲಾಧಿಕಾರಿಗಳು ಸಿಎಂಗೆ ಮನವಿ ಮಾಡಿದ ತಕ್ಷಣ ಮಂಜೂರಾತಿ ಸಿಕ್ಕಿತು ಜಿಲ್ಲೆಯ ಪಾಲಿಗಿಂದು ಶುಭದಿನ ಎಂದು ಹರ್ಷ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಈವರೆಗೆ
೨೬ ಸೋಂಕಿತಕೇಸ್
ಜಿಲ್ಲೆಯಲ್ಲಿ ಈವರೆಗೆ ಒಟ್ಟು ೨೮ ಮಂದಿಗೆ ಕರೊನಾ ಸೋಂಕು ದೃಢಪಟ್ಟು ಸೋಮವಾರದವರೆಗೆ ೧೧ ಜನ ಬಿಡುಗಡೆಹೊಂದಿದ್ದಾರೆ. ೧೭ ಸಕ್ರೀಯ ಪ್ರಕರಣಗಳಿವೆ. ಎಲ್ಲರೂ ಆದಷ್ಟು ಶೀಘ್ರ ಗುಣಮುಖರಾಗುವ ಭರವಸೆಯಿದೆ. ನಮ್ಮ ಟೀಂ ಅಷ್ಟು ಸಮರ್ಥವಾಗಿದೆ. ಜಿಲ್ಲಾಡಳಿತ, ವೈದ್ಯ ಸಿಬ್ಬಂದಿಗಳು, ಕರೊನಾ ವಾರಿಯರಸ್ ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನುಡಿದರು.
ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಪ್ರಯೋಗಾಲಯದಲ್ಲಿ ಪ್ರತಿ ಗಂಟೆಗೆ ೧೨ ಮಾದರಿಗಳ ವರದಿ ಕೈ ಸೇರುವುದರಿಂದ ಸೋಂಕಿತರ ಪ್ರಾಥಮಿಕ ಸಂಪರ್ಕ ಪತ್ತೆಹಚ್ಚಲು, ಕಂಟೇನ್ಮೆಂಟ್ ಜೋನ್ ತಕ್ಷಣದಲ್ಲಿ ಕ್ರಮ ವಹಿಸಲು ಸಾಧ್ಯವಾಗುತ್ತದೆ ಎಂದರು.
ಸರ್ಕಾರದ ಮಾರ್ಗಸೂಚಿ ಪ್ರಕಾರ ಇ-ರೌಂಡ್ಸ್ನಲ್ಲಿ ವೈದ್ಯ ಸಿಬ್ಬಂದಿ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದ ಅವರು, ಕರೊನಾ ನಿಯಂತ್ರಣ ಸಲುವಾಗಿ ತಾತ್ಕಾಲಿಕವಾಗಿ ೬ ತಿಂಗಳ ಅವಧಿಗೆ ವೈದ್ಯ ಹುದ್ದೆಗೆ ಆರ್ಜಿ ಆಹ್ವಾನಿಸಲಾಗಿತ್ತು. ಆದರೆ ಯಾರೂ ಅರ್ಜಿ ಹಾಕಿಲ್ಲ ಎಂದು ನುಡಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ೨೦೦ ಹಾಸಿಗೆಯ ಪ್ರತ್ಯೇಕ ಕೋವಿಡ್ ವಿಭಾಗ ತೆರೆಯಲಾಗುತ್ತಿದೆ. ಐಸಿಯು ಸಾಧನ ಸಲಕರಣೆಗಳ ಜತೆಗೆ ೪೦ ಹಾಸಿಗೆಯನ್ನು ಮೀಸಲಿಡಲಾಗುತ್ತಿದೆ. ಸಣ್ಣಪುಟ್ಟ ಕೆಲಸ ಕಾರ್ಯಗಳಷ್ಟೇ ಬಾಕಿಯಿದೆ ಎಂದರು.
ಕೊರೊನಾ ಸೋಂಕು ದೃಢಪಟ್ಟ ಪ್ರದೇಶವನ್ನು ೨೮ ದಿನಗಳ ಕಾಲ ಕಂಟೇನ್ಮೆಂಟ್ ಪ್ರದೇಶವಾಗಿ ಘೋಷಿಸಿ ನಿರ್ಬಂಧ ವಿಧಿಸಲಾಗುತ್ತಿದೆ. ಹೊಸ ಯಾವುದೇ ಪಾಸಿಟಿವ್ ಬಾರದಿದ್ದರೆ ನಿಗದಿತ ದಿನಗಳ ನಂತರ ನಿರ್ಬಂಧ ತೆಗೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಸೋಮಶೇಖರ್, ಡಿಎಚ್ಒ ಡಾ. ಎಸ್.ಎನ್. ವಿಜಯಕುಮಾರ್, ಜಿಲ್ಲಾ ಸರ್ಜನ್ ಡಾ. ಎಸ್.ಜಿ. ನಾರಾಯಣಸ್ವಾಮಿ, ತಹಸೀಲ್ದಾರ್ ಶೋಭಿತಾ, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಜಗದೀಶ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿ ವರ್ಗದವರು ಹಾಜರಿದ್ದರು.