ಕೋಲಾರ: ಕೋವಿಡ್ ಹರಡದಂತೆ ಸಾರ್ವಜನಿಕರು ಸಹಕಾರ ನೀಡಿ, ಜಿಲ್ಲಾಡಳಿತ ಜಿಲ್ಲೆಯ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗಾಗಿ ಒಟ್ಟು ೫,೯೮೧ ಬೆಡ್ ಸಿದ್ದಗೊಳಿಸಿದ್ದು, ಇದರಲ್ಲಿ ೨೮೨ ಆಕ್ಸಿಜನ್ ಬೆಡ್, ೫೨ ವೆಂಟಿಲೇಟರ್ಗಳಿವೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿದ ಅವರು, ಕೋವಿಡ್ ಸೋಂಕಿತರು ಭಯಪಡುವ ಅಗತ್ಯವಿಲ್ಲ, ಜಿಲ್ಲಾಡಳಿತ ನೀಡುವ ಮಾರ್ಗಸೂಚಿಯನ್ನು ತಪ್ಪದೇ ಜನ ಪಾಲಿಸಬೇಕು, ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆರಂಭಿಕವಾಗಿ ಜಿಲ್ಲೆಯನ್ನು ಹಸಿರುವಲಯವಾಗಿಯೇ ಕಾಪಾಡಿಕೊಳ್ಳಲಾಗಿತ್ತು, ಆದರೆ ಸೋಂಕು ಹರಡಿದೆ, ಇದನ್ನು ತಡೆಗಟ್ಟಲು ಜಿಲ್ಲಾಡಳಿತ ಸಜ್ಜಾಗಿದ್ದು, ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಯಾರಿಗಾದರೂ ಕೆಮ್ಮು ನೆಗಡಿ ಶೀತ ತಲೆನೋವು ಜ್ವರದ ಲಕ್ಷಣಗಳು ಕಂಡುಬಂದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾರು ಆತಂಕ ಪಡಬಾರದು. ಕೋವಿಡ್ ಗುಣಮುಖವಾಗುವ ಖಾಯಿಲೆಯಾಗಿದ್ದು ನಿರ್ದಿಷ್ಟ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿ ಇದುವರೆಗೂ ಒಟ್ಟು ೪೭೪ ಕೋವಿಡ್ ಪ್ರಕರಣಗಳು ಕಂಡುಬಂದಿದ್ದು, ೧೫೬ ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ೪೨ ಜನರನ್ನು ಬಿಡುಗಡೆ ಮಾಡಲಾಗುವುದು. ಜಿಲ್ಲೆಯಲ್ಲಿ ೩೦೯ ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ೯ ಮಂದಿ ಕೋವಿಡ್ನಿಂದ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಹಿಂದೆ ಸೊಂಕಿತರ ಪ್ರಾಥಮಿಕ ಸಂಪರ್ಕಗಳು ೨೮ ದಿನವಾದರೂ ನೆಗೆಟಿವ್ ಬರುತ್ತಿತ್ತು. ಆದರೆ ಇತ್ತೀಚೆಗೆ ಸೋಂಕಿತರ ಶೇ ೨೯ ರಷ್ಟು ಪ್ರಾಥಮಿಕ ಸಂಪರ್ಕಗಳು ಪಾಸಿಟಿವ್ ಬರುತ್ತಿವೆ ಎಂದರು.
ಎಸ್ಸೆನ್ನಾರ್ ಆಸ್ಪತ್ರೆಯಲ್ಲಿ ಒಂದೂ ಸಾವಾಗಿಲ್ಲ
ಸ್ಯಾರಿ ಪ್ರಕರಣಗಳು ಹೆಚ್ಚಾಗುತ್ತಿವೆ. ಜಿಲ್ಲೆಯ ಎಸ್ಎನ್ಆರ್ ಆಸ್ಪತ್ರೆಯಲ್ಲಿ ಹೆಚ್ಚಿನ ಟೆಸ್ಟ್ಗಳನ್ನು ಮಾಡುತ್ತಿದ್ದು ಟೆಸ್ಟಿಂಗ್ ನಲ್ಲಿ ರಾಜ್ಯದಲ್ಲಿಯೇ ಜಿಲ್ಲೆ ಪ್ರಥಮ ಅಥವಾ ದ್ವಿತೀಯ ಸ್ಥಾನವನ್ನು ಪಡೆದುಕೊಳ್ಳುತ್ತಿದೆ ಎಂದು ತಿಳಿಸಿದರು.
ಪ್ರತಿ ತಾಲ್ಲೂಕಿಗೆ ಒಂದು ಕ್ರೂನಟ್ ಮಿಷನ್ ಖರೀದಿಸಲು ಅನುಮತಿ ನೀಡಿದ್ದು, ಇದರಿಂದ ಇನ್ನೂ ಹೆಚ್ಚಿನ ಟೆಸ್ಟ್ಗಳನ್ನು ಮಾಡಲು ಅನುಕೂಲವಾಗುತ್ತದೆ. ಎಸ್ಎನ್ಆರ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಯಾವ ಕೋವಿಡ್ ಪ್ರಕರಣದ ವ್ಯಕ್ತಿಯು ಮರಣಹೊಂದಿಲ್ಲ. ಇದು ಇಲ್ಲಿನ ಗುಣಮಟ್ಟದ ಚಿಕಿತ್ಸೆಗೆ ಸಾಕ್ಷಿ ಎಂದು ತಿಳಿಸಿದರು.
ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರಿಗೆ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಬೆಳಿಗ್ಗೆ ಸಂಜೆ ಮೊಟ್ಟೆ, ಮೊಳಕೆ ಕಾಳು. ಹಣ್ಣುಗಳು. ಮಾಂಸಾಹಾರ ಸೇವಿಸುವವರಿಗೆ ಮಾಂಸಾಹಾರದ ಊಟ ಈ ರೀತಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ನೀಡಿ ಸರಾಸರಿ ೭ ದಿನಗಳಲ್ಲಿ ಗುಣಮುಖರನ್ನಾಗಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಭಾನುವಾರ ಲಾಕ್ಡೌನ್ ಎಪಿಎಂಸಿಗೆ ರಿಯಾಯಿತಿ
ಈ ಭಾನುವಾರವು ಲಾಕ್ಡೌನ್ ಜಾರಿಯಲ್ಲಿರುತ್ತದೆ. ಜಿಲ್ಲೆಯ ರೈತರಿಗೆ ಅನಾನುಕೂಲವಾಗಬಾರದು ಎಂದು ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಭಾನುವಾರ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತದೆ ಎಂದರು.
ಆದರೆ ರೈತರು ಹಾಗೂ ವ್ಯಾಪಾರಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಜಿಲ್ಲೆಯ ಸೀಲ್ ಡೌನ್, ಕಂಟೈನ್ಮೆಂಟ್ ಜೋನ್ ಗಳಿಗೆ ಯಾವುದೇ ಅನುದಾನ ಬರುವುದಿಲ್ಲ. ಜನರೇ ತಮ್ಮ ಸ್ವಂತ ಹಣದಿಂದ ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕೋವಿಡ್ ತಡೆಗೆ ಜಿಲ್ಲಾಡಳಿತ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದೆ, ಜಿಲ್ಲಾಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿ ಬೆಡ್ಗಳನ್ನು ಹೆಚ್ಚಿಸಲಾಗಿದೆ, ಹೊರ ರೋಗಿಗಳಿಗೆ ಪಕ್ಕದ ಇಟಿಸಿಎಂ ಆಸ್ಪತ್ರೆ ಕಟ್ಟಡದಲ್ಲಿ ಚಿಕಿತ್ಸೆ ಮುಂದುವರೆಯಲಿದೆ ಎಂದು ಸ್ವಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಜಿ.ನಾರಾಯಣಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮ್ಯದೀಪಿಕಾ ಮತ್ತಿತರರು ಉಪಸ್ಥಿತರಿದ್ದರು.