ಕೋಲಾರ: ಜಿಲ್ಲೆಯಲ್ಲಿ ಶನಿವಾರ ನಾಲ್ಕು ಕೋವಿಡ್ -19 ವೈರಾಣು ಸೋಂಕಿತ ವ್ಯಕ್ತಿಗಳು ಪತ್ತೆಯಾಗುವ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 41 ಕ್ಕೇರಿದಂತಾಗಿದೆ.
ಮಾಲೂರು ತಾಲೂಕಿನ 36 ವರ್ಷದ ಪುರುಷ ಅಂತರಾಜ್ಯ ಪ್ರವಾಸದ ಹಿನ್ನೆಲೆ ಹೊಂದಿದ್ದು, ಜಿಲ್ಲೆಯ 38 ನೇ ಸೋಂಕಿತರಾಗಿ ಕೋಲಾರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ರೀನಿವಾಸಪುರದಲ್ಲಿ ಮೂರು ದಿನಗಳ ಹಿಂದಷ್ಟೇ ಪತ್ತೆಯಾಗಿದ್ದ ಪಿ.6171 ಸೋಂಕಿತ ವ್ಯಕ್ತಿಯ ಪ್ರಥಮ ಸಂಪರ್ಕಿತರಾದ 80 ವರ್ಷದ ವೃದ್ಧ, ಆತನ ಪತ್ನಿ 78 ವರ್ಷದ ವೃದ್ಧೆ ಹಾಗೂ 17 ವರ್ಷದ ಪುತ್ರಿ ಸೋಂಕಿತರಾಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದರಿಂದ ಕೋಲಾರ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 41 ಕ್ಕೇರಿದ್ದು, ಗುಣಮುಖರಾಗಿ 26 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆ ಕ್ವಾರಂಟೈನ್ನಲ್ಲಿದ್ದಾರೆ. ಉಳಿದಂತೆ 15 ಸಕ್ರಿಯ ಪ್ರಕರಣಗಳು ಚಿಕಿತ್ಸೆ ಹಂತದಲ್ಲಿ ಆಸ್ಪತ್ರೆಯಲ್ಲಿರುವಂತಾಗಿದೆ.
ತಾಲೂಕುವಾರು ಸೋಂಕಿತರದಲ್ಲಿ ಕೋಲಾರದಿಂದ 8, ಮಾಲೂರಿನಲ್ಲಿ 3, ಬಂಗಾರಪೇಟೆಯಲ್ಲಿ 10, ಕೆಜಿಎ-ನಿಂದ 4, ಮುಳಬಾಗಿಲಿನಿಂದ 10 ಹಾಗೂ ಶ್ರೀನಿವಾಸಪುರದಿಂದ 6 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.
ಪ್ರಸ್ತುತ ಮುಳಬಾಗಿಲು ಹೊರತುಪಡಿಸಿ ಕೋಲಾರಜಿಲ್ಲೆಯ ಎಲ್ಲಾ ಐದು ತಾಲೂಕುಗಳಲ್ಲಿಯೂ ಸೋಂಕಿತರು ಇದ್ದಂತಾಗಿದೆ. ಮುಳಬಾಗಿಲಿನಲ್ಲಿ ಪತ್ತೆಯಾಗಿದ್ದ ಎಲ್ಲಾ ೧೦ ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.