Wednesday, June 29, 2022

Latest Posts

ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಪ್ರಸ್ತಾವನೆ:ಸಚಿವ ನಾಗೇಶ್

ಹೊಸದಿಗಂತ ವರದಿ, ಕೋಲಾರ: 

ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ೭೫೦ ರೂ. ಕೋಟಿಗಳ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ನಾಗೇಶ್ ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ೨೦೨೧-೨೨ ನೇ ಸಾಲಿನ ಆಯವ್ಯಯದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಮುಳಬಾಗಿಲು ನಗರಕ್ಕೆ ಒಳಚರಂಡಿ ಯೋಜನೆಗೆ ಪ್ರಸ್ತಾವನೆ ಹಾಗೂ ಸೋಮೇಶ್ವರ ದೇವಸ್ಥಾನ, ಅಂತರಗಂಗೆ, ಆವಣಿ, ಕುರುಡುಮಲೆ, ಕೋಟಿಲಿಂಗ, ಚಿಕ್ಕತಿರುಪತಿ ಮುಂತಾದ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದ ಅವರು ಜಿಲ್ಲೆಯು ಅಂತರ ರಾಜ್ಯ ಗಡಿಯಲ್ಲಿರುವುದರಿಂದ ಕೋಲಾರದಲ್ಲಿ ಹೈಟೆಕ್ ಬಸ್‌ನಿಲ್ದಾಣ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ  ಸುಸಜ್ಜಿತ ಹೋಟೆಲ್ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಮಾತನಾಡಿ, ಕೋಲಾರಕ್ಕೆ ಹೊಸ ಐ.ಬಿ. ಪರಿವೀಕ್ಷಣಾ ಮಂದಿರ ಅಗ್ಯವಿದ್ದು ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.
ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕರದ ಕೆ.ವೈ.ನಂಜೇಗೌಡ ಅವರು ಮಾತನಾಡಿ, ೨೨ ಎಕರೆ ಜಾಗದಲ್ಲಿ ೧೨೦೦ ಬಡವರಿಗೆ ಉಚಿತ ನಿವೇಶನ ನೀಡಲು ಲೇಔಟ್ ಅಭಿವೃದ್ಧಿ ಪಡಿಸಲು ೨೦ ಕೋಟಿ ರೂ. ಹಾಗೂ ಮಾಲೂರು ಕೆರೆಗೆ ೨೩.೮೫ ರೂ. ಪ್ರಸ್ತಾವನೆ ನೀಡಿದರು.  ಮಾಲೂರಿನ ಸಮಗ್ರ  ಅಭಿವೃದ್ಧಿಗಾಗಿ ೩೦ ಕೋಟಿಗಳ ವಿವಿಧ ಕಾರ್ಯಕ್ರಮಗಳ ಪ್ರಸ್ತಾವನೆ ಸಲ್ಲಿಸಿದರು. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ನೆನಪಿನ ಅಧ್ಯಯನ ಕೇಂದ್ರವನ್ನು ಮಾಲೂರಿನಲ್ಲಿರುವ ಅವರ ಸ್ವಂತ ಗ್ರಾಮ ಮಾಸ್ತಿಯಲ್ಲಿ ಸ್ಥಾಪಿಸಲು ಸಲಹೆ ನೀಡಿದರು.
ಡಿಹೆಚ್‌ಒ-ಶಾಸಕಿ ಮಾತಿನ ಚಕಮಕಿ
ಕರೊನಾ ಸಂದರ್ಭದಲ್ಲಿ ಕೆಜಿಎಫ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಂಡವರಿಗೆ, ಡಿ ಗ್ರೂಪ್ ನೌಕರರಿಗೆ ನಾಲ್ಕೈದು ತಿಂಗಳಿನಿಂದ ಸಂಬಳ ನೀಡಿಲ್ಲ, ಪಿಎಫ್, ಇಎಸ್‌ಐ ಹಾಕುತ್ತಿಲ್ಲ, ಮಾಸಿಕ ೧೨,೦೦೦ ರೂ. ವೇತನ ನೀಡಬೇಕಾದ ಕಡೆ ೮೦೦೦ ರೂ, ನೀಡುತ್ತಾರೆ ಎಂದು ಶಾಸಕಿ ರೂಪಕಲಾ ಶಶಿಧರ್ ಆರೋಪಿಸಿ ಡಿಹೆಚ್‌ಒ ಕಾರ್ಯವೈಖರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಹಳಬರಿಗೆ ಗುತ್ತಿಗೆ ಅವಧಿ ಮುಗಿದಿದ್ದರೂ ಮುಂದುವರಿಸಿದ್ದಾರೆ, ಬದಲಾಯಿಸಲು ಹೇಳಿದ್ದರೂ ಸ್ಪಂದಿಸದೆ ಬೇಜವಾಬ್ದಾರಿತನ ತೋರಿಸುತ್ತಾರೆ ಎಂದು ಡಿಎಚ್‌ಒ ಡಾ.ಎಸ್.ಎನ್. ವಿಜಯಕುಮಾರ್ ರನ್ನು  ತರಾಟೆಗೆ ತೆಗೆದುಕೊಂಡರು.
ಕೆಜಿಎಫ್ ಆಸ್ಪತ್ರೆ ಜಿಲ್ಲಾ ಸರ್ಜನ್ ಶಿವಕುಮಾರ್ ಸಭೆಗೆ ಬರುತ್ತಿದ್ದಂತೆಯೇ ಎಂದು ಶಾಸಕಿ ರೂಪಕಲಾ ಪ್ರಶ್ನಿಸಿದರು. ಉತ್ತರಿಸಿದ ಜಿಲ್ಲಾ ಸರ್ಜನ್ ಕಳೆದ ಮಾರ್ಚ್‌ನಲ್ಲಿ ಗುತ್ತಿಗ ಅವಧಿ ಮುಗಿದಿತ್ತು. ಕಡತವನ್ನು ಡಿಸಿಯವರ ಆಪ್ತ ಸಹಾಯಕರ ಬಳಿ ಕೊಟ್ಟಿದ್ದೆ, ಎರಡ್ಮೂರು ಮಂದಿ ಆಪ್ತ ಸಹಾಯಕರು ಬದಲಾಗಿದ್ದಾರೆ, ಕಡತ ಮಿಸ್ ಆಗಿರಬಹುದು ಎಂದು ಸಮಜಾಯಿಸಿ ನೀಡಿದರು.
ಶಾಸಕಿಯ ಬೆಂಬಲಕ್ಕೆ ನಿಂತ ಎಮ್ಮೆಲ್ಸಿ ಗೋವಿಂದರಾಜು ನಿಮ್ಮ ಪಿಎಗೆ ಬಹಳ ಬೇಜವಾಬ್ದಾರಿ, ನನ್ನ ಮೂರು ಕಡತಗಳು ಕೂಡ ಬಾಕಿ ಇದೆ, ಅವರನ್ನು ಸಸ್ಪೆಂಡ್ ಮಾಡಿ ಎಂದು ಆಕ್ರೋಶಭರಿತರಾಗಿ ನುಡಿದಾಗ ಕಡತ ವಿಲೇವಾರಿಗೆ ತಡವಾಗಲು ಏನು ಕಾರಣ ಎಂದು ಈ ಸಂದರ್ಭದಲ್ಲಿ ಹೇಳಬೇಕಾ ? ಇದು ವೇದಿಕೆ ಅಲ್ಲ ಎಂದು ಡಿಸಿ ಸತ್ಯಭಾಮ ತಿರುಗೇಟು ನೀಡಿದರು.
ಮದ್ಯಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ಸಮಸ್ಯೆ ಬಗ್ಗೆ ಎಂದಾದರೂ ಡಿಸಿ ಗಮನಕ್ಕೆ ತಂದಿದ್ದೀರಾ, ತಂದಿದ್ದರೆ ಇಷ್ಟು ರಾಮಾಯಣ ಆಗುತ್ತಿರಲಿಲ್ಲ ಎಂದರು.
ಕೋಲಾರ ಮತ್ತು ಕೆಜಿಎಫ್ ಜಿಲ್ಲಾ ಆಸ್ಪತ್ರೆಯಲ್ಲಿ ಗುತ್ತಿಗೆ ನೌಕರರಿಗೆ ವೇತನ ಪಾವತಿ ಸಂಬಂಧ ಪರಿಶೀಲನೆ ನಡೆಸಿ ಎರಡ್ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಡಿಸಿ ಸತ್ಯಭಾಮ ಅವರು ಜಿಪಂ ಸಿಇಒ ಎನ್.ಎಂ.ನಾಗರಾಜ್‌ಗೆ ಸೂಚಿಸಿದರು.
ಸಭೆಯಲ್ಲಿ ಕೆ.ಜಿ.ಎಫ್. ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಕಲಾ ಶಶಿಧರ್,  ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಓಂಶಕ್ತಿ ಚಲಪತಿ, ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್, ಉಪ ವಿಭಾಗಾಧಿಕಾರಿಗಳಾದ ಸೋಮಶೇಖರ್, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss