Tuesday, June 28, 2022

Latest Posts

ಕೋಲಾರ| ತೂಕದಲ್ಲಿ ವ್ಯತ್ಯಾಸ, ಭ್ರಷ್ಟತೆ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ-ಸಚಿವ ಗೋಪಾಲಯ್ಯ ಎಚ್ಚರಿಕೆ

ಕೋಲಾರ: ಕೇಂದ್ರದಿಂದ ಈಗಾಗಲೇ ಪಡಿತರ ದಾಸ್ತಾನು ಬಂದಿದೆ, ತೂಕದಲ್ಲಿ ವ್ಯತ್ಯಾಸ ಮಾಡುವುದು, ಕಾರ್ಡುದಾರರಿಂದ ಹಣ ಪಡೆಯುವ ಕುರಿತು ದೂರುಗಳು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಗೋಪಾಲಯ್ಯ ಎಚ್ಚರಿಕೆ ನೀಡಿದರು.
ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಡವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಬರುವ ಪಡಿತರ ಸಮರ್ಪಕವಾಗಿ ತಲುಪಬೇಕು. ಯಾವುದೇ ಕಾರಣಕ್ಕೂ ತೂಕ ಮತ್ತು ಅಳತೆಯಲ್ಲಿ ವ್ಯತ್ಯಾಸವಾಗಬಾರದು ಎಂದರು.
ಈಗಾಗಲೇ ಕೇಂದ್ರ ಸರಕಾರವು ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿನಲ್ಲಿ ಕೊಡಬೇಕಿರುವ ಪಡಿತರವನ್ನು ಪ್ರತಿಯೊಬ್ಬರಿಗೂ ೫ ಕೆಜಿ ಅಕ್ಕಿ, ಪ್ರತಿ ಕುಟುಂಬಕ್ಕೆ ೧ ಕೆಜಿ ಬೇಳೆಯಂತೆ ಒದಗಿಸಿದ್ದು, ಆಹಾರ ಇಲಾಖೆ ಗೋಡೌನ್‌ಗಳಲ್ಲಿ ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದರು.
ಇಡೀ ರಾಜ್ಯ ಮತ್ತು ದೇಶ ಸಂಕಷ್ಟದಲ್ಲಿದ್ದು, ಬಡವರಿಗೆ ತಲುಪಬೇಕಿರುವ ಪಡಿತರವನ್ನು ಮೋಸ ಮಾಡದೆ ಜನರಿಗೆ ತಲುಪಿಸುವಂತೆ ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದಾಗಿ ಎಂದರು.
ಜಿಲ್ಲೆಯ ಹಲವು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ವೇಳೆ ೩ ಕೆಜಿ ಅಕ್ಕಿಯನ್ನು ಹಿಡಿದುಕೊಂಡು ಕೊಡಲಾಗುತ್ತಿದೆ, ಪ್ರತಿ ಕಾರ್ಡ್‌ಗೆ ೩ರೂ ಪಡೆಯಲಾಗುತ್ತಿದೆಯೆಂಬ ದೂರುಗಳ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಹ ಯಾವುದೇ ಸ್ಪಷ್ಟ ಪ್ರಕರಣವಿದ್ದರೆ ನನಗೆ ಮಾಹಿತಿ ನೀಡಿ ಕೂಡಲೇ ಕ್ರಮ ಕೈಗೊಳ್ಳುವೆ ಎಂದರು.
ಜನರು ಸಹ ತಮ್ಮ ಪಾಲಿನ ಪಡಿತರ ಪಡೆಯಲು ಯಾವುದೇ ಕಾರಣಕ್ಕೂ ಒಂದುರೂಪಾಯಿ ಹಣವನ್ನು ನೀಡಬಾರದು, ಸಮಸ್ಯೆ ಬಂದರೆ ಗಮನಕ್ಕೆ ತಂದರೆ ಕೂಡಲೇ ಸಂಬಂಧಪಟ್ಟ ಅಂಗಡಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಏಪ್ರಿಲ್ ತಿಂಗಳಿನಲ್ಲಿ ೧೪೬ ಅಂಗಡಿಗಳು ಇಡೀ ರಾಜ್ಯದಲ್ಲಿ ಅಮಾನತ್ತು ಆಗಿವೆ. ತಾವು ಪ್ರವಾಸ ಮಾಡಿದ ಕಡೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದು, ಸಮಸ್ಯೆಯಾದರೆ ಅವರೇ ಕ್ರಮಕೈಗೊಳ್ಳಲಿದ್ದಾರೆ.
ಇಲಾಖೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ನನಗೆ ಮುಖ್ಯಮಂತ್ರಿಯವರು ಖಾತೆ ನೀಡಿದ್ದು, ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಸಲಾಗುತ್ತಿದ್ದು, ಕಳೆದವಾರ ಚಿತ್ರದುರ್ಗ, ದಾವಣಗೆರೆಗಳಲ್ಲಿ ಮುಗಿಸಿದ್ದೇವೆ. ಅಂತೆಯೇ ಕೋಲಾರ ಜಿಲ್ಲೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದೇವೆ.
ಕೋಲಾರ ಜಿಲ್ಲೆಗೆ ಕಳೆದ ಬಾರಿ ಗೋಡೌನ್ ವೀಕ್ಷಣೆಗಾಗಿ ಬಂದಿದ್ದು, ಸಭೆಯನ್ನು ನಡೆಸಿರಲಿಲ್ಲ. ಇಂದು ಖುದ್ದಾಗಿ ಸಭೆ ನಡೆಸುತ್ತಿದ್ದೇವೆ, ಈಗಾಗಲೇ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಹಲವು ಸೂಚನೆಗಳನ್ನು ನೀಡಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಡಿಸಿ ಸಿ.ಸತ್ಯಭಾಮ, ಎಸ್ಪಿ ಕಾರ್ತಿಕ್‌ರೆಡ್ಡಿ, ತಹಶೀಲ್ದಾರ್ ಶೋಭಿತಾ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss