ಕೋಲಾರ: ಇಡೀ ದೇಶದಲ್ಲೇ ಮೊದಲ ಬಾರಿಗೆ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನಿಂದ ಪ್ಯಾಕ್ಸ್ಗಳ ಮೂಲಕ ನಬಾರ್ಡ್ ನೆರವಿನೊಂದಿಗೆ ಆರಂಭಿಸಲಾಗುತ್ತಿರುವ ಮೈಕ್ರೋ ಎಟಿಎಂಗೆ ಸೆ.೧೮ ರಂದು ಚಾಲನೆ ನೀಡಲಾಗುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ಸೋಮವಾರ ಈ ಸಂಬಂಧ ಮೈಕ್ರೊ ಎಟಿಎಂ ಸರಬರಾಜು ಮಾಡುತ್ತಿರುವ ‘ಇಂಟಿಗ್ರಾ ಮೈಕ್ರೋ ಸಿಸ್ಟಮ್ಸ್ ಕಂಪನಿ ಅಧಿಕಾರಿಗಳೊಂದಿಗೆ ಮೈಕ್ರೋ ಎಟಿಎಂಗೆ ಚಾಲನೆ ನೀಡುವ ಸಂಬಂಧ ಪೂರ್ವಸಿದ್ದತೆಗಳ ಕುರಿತು ನಡೆಸಿದ ವಿಡೀಯೋ ಕಾನ್ಫರೆನ್ಸ್ನಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮೈಕ್ರೋ ಎಟಿಎಂಅನ್ನು ಪ್ಯಾಕ್ಸ್ಗಳಲ್ಲಿ ದೇಶದಲ್ಲೇ ಮೊದಲ ಬಾರಿಗೆ ಅಳವಡಿಸುತ್ತಿದ್ದು, ಇದಕ್ಕೆ ಆರ್ಥಿಕ ನೆರವನ್ನು ನಬಾರ್ಡ್ ಒದಗಿಸಿದೆ ಎಂದರು. ಮೈಕ್ರೋ ಎಟಿಎಂ ವಹಿವಾಟು ಶುಲ್ಕವಿಲ್ಲ ಮೈಕ್ರೋ ಎಟಿಎಂ ವಹಿವಾಟಿಗೆ ಮಹಿಳೆಯರು,ರೈತರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ತಿಳಿಸಿದ ಅವರು, ಇತರೆ ವಾಣಿಜ್ಯ ಬ್ಯಾಂಕುಗಳಂತೆ ಎಟಿಎಂ ಬಳಕೆಗೆ ಡಿಸಿಸಿ ಬ್ಯಾಂಕ್ ರೂಪೇ ಕಾರ್ಡ್ ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದರು.
ಮೈಕ್ರೋ ಎಟಿಎಂ ಮೂಲಕ ಗ್ರಾಮೀಣ ಕುಟುಂಬಗಳಿಗೆ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸಲಾಗುತ್ತಿದೆ, ಇರುವ ಸ್ಥಳದಲ್ಲೇ ಹಣ ಪಾವತಿ,ಡ್ರಾ ಎರಡೂ ಸೌಲಭ್ಯ ಸಿಗಲಿದ್ದು, ಪಾರದರ್ಶಕತೆಗೆ ಕಾರಣವಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂದರು.
ಸ್ಥಳದಲ್ಲೇ ಸಾಲ ಮರುಪಾವತಿ,ಉಳಿತಾಯದ ಹಣ ಪಾವತಿಗೆ ಸ್ವೀಕೃತಿ ಸಿಗುವುದರಿಂದ ಬ್ಯಾಂಕಿಂಗ್ ವ್ಯವಸ್ಥೆ ಕುರಿತು ನಂಬಿಕೆ ಬಲಗೊಳ್ಳಲಿದೆ, ಸೊಸೈಟಿಗಳು ಮೈಕ್ರೋ ಎಟಿಎಂ ಮೂಲಕ ಪಡೆದ ಮತ್ತು ಡ್ರಾ ಮಾಡಿದ ವಹಿವಾಟು ಕೂಡಲೇ ಆನ್ಲೈನ್ನಲ್ಲಿ ಅಪ್ಡೇಟ್ ಆಗುವುದರಿಂದ ಅಂದಿನ ಲೆಕ್ಕ ಅಂದೇ ಚುಕ್ತಾ ಆಗಿ ವ್ಯವಸ್ಥೆ ಬಲಗೊಳ್ಳಲಿದೆ ಎಂದರು.