Thursday, July 7, 2022

Latest Posts

ಕೋಲಾರ| ಪೊಲೀಸ್ ಸಿಬ್ಬಂದಿ ಸೇರಿದಂತೆ ಆರು ಮಂದಿಯಲ್ಲಿ ಕೊರೋನಾ ಪಾಸಿಟೀವ್, ಠಾಣೆ ಸೀಲ್‌ಡೌನ್

ಕೋಲಾರ:  ಓರ್ವ ಪೊಲೀಸ್ ಮುಖ್ಯಪೇದೆ, ಇಬ್ಬರು ಮಹಿಳೆಯರು ಸೇರಿದಂತೆ ಕೋಲಾರ ನಗರದ ನಾಲ್ವರಲ್ಲಿ ಹಾಗೂ ಮುಳಬಾಗಿಲು ತಾಲ್ಲೂಕಿನ ಇಬ್ಬರಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿದ್ದು, ಇವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದಿನ ಸೋಂಕಿತರ ಪೈಕೆ ಕೋಲಾರದ ೫೮ ವರ್ಷದ ಮುಖ್ಯಪೇದೆ ನಿರ್ಬಂಧಿತ ವಲಯಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರೆನ್ನಲಾಗಿದ್ದು, ಸೋಂಕು ಕಂಡು ಬಂದಿದೆ.
ಕೋಲಾರದ 20 ವರ್ಷದ ಆರೋಗ್ಯ ಕಾರ್ಯಕರ್ತರೊಬ್ಬರಿಗೂ ಸೋಂಕು ತಗುಲಿದೆ, ಹಾಗೆಯೇ ಕೋಲಾರದ ೩೮ ವರ್ಷದ ಪುರುಷ, ೪೫ ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ ಮುಳಬಾಗಿಲಿನ ೪೫ ವರ್ಷದ ಮಹಿಳೆ, ೪೨ ವರ್ಷದ ಪುರುಷನಲ್ಲೂ ಸೋಂಕು ಕಂಡು ಬಂದಿದ್ದು, ಒಟ್ಟು ಇಂದಿನ ಸೋಂಕಿತರ ಸಂಖ್ಯೆ ೬ ಆಗಿದೆ.
ನಗರ ಸಂಚಾರಿ ಠಾಣೆ ಮುಖ್ಯಪೇದೆಯೊಬ್ಬರಿಗೆ ಸೋಂಕು ಪತ್ತೆಯಾಗಿರುವ ಹಿನ್ನಲೆಯಲ್ಲಿ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ, ಈ ಪೇದೆ ಎಲ್ಲರೊಂದಿಗೂ ಅತ್ಯಂತ ಉತ್ತಮ ಒಡನಾಟ ಹೊಂದಿದ್ದು, ಈತ ಪೊಲೀಸ್ ವಸತಿ ಗೃಹದಲ್ಲಿ ವಾಸವಾಗಿದ್ದ ಕಾರಣ ಅನೇಕ ಪೊಲೀಸರಲ್ಲೂ ಆತಂಕ ಶುರುವಾಗಿದ್ದು, ಕ್ವಾರೆಂಟೈನ್‌ಗೆ ಹೆಚ್ಚಿನ ಸಂಖ್ಯೆಯ ಪೊಲೀಸರು ಒಳಗಾಗುವ ಸಾಧ್ಯತೆ ಕಾಡುತ್ತಿದೆ.
ಈ ಹಿನ್ನಲೆಯಲ್ಲಿ ಸಂಚಾರಿ ಠಾಣೆ ಪೊಲೀಸರು ಇಂದು ಕರ್ತವ್ಯಕ್ಕೆ ಹಾಜರಾಗಲಿಲ್ಲ, ನಗರದ ಸಿಗ್ನಲ್ ವೃತ್ತಗಳಲ್ಲೂ ಇಂದು ಸಂಚಾರಿ ದೀಪಗಳು ಬೆಳಗಲಿಲ್ಲ, ಸೀಲ್‌ಡೌನ್ ಏರಿಯಾಗಳ ಬಂದೋಬಸ್ತ್‌ಗೂ ಅನೇಕ ಪೊಲೀಸರು ಇಂದು ತೆರಳದ ಕಾರಣ ಇಡೀ ಇಲಾಖೆಯೇ ಬೆಚ್ಚಿಬಿದ್ದಂದಿದ್ದು, ಆತಂಕ ಮನೆ ಮಾಡಿತ್ತು.ಠಾಣೆಗಳಲ್ಲಿ  ಸಾರ್ವಜನಿಕರ ಪ್ರವೇಶಕ್ಕೆ ತಡೆಯೊಡ್ಡಲಾಗಿದ್ದು, ದಿನವಹಿ ಕೆಲಸಗಳಿಗೆ ವ್ಯತ್ಯಯ ಕಂಡುಬಂತು.
ಇಂದಿನ ಆರು ಜನ ಸೇರಿದಂತೆ ಸೋಂಕಿತ ಸಂಖ್ಯೆ ೮೦ಕ್ಕೇರಿದ್ದು, ಕೋಲಾರದ ಇಬ್ಬರು ಹಾಗೂ ಬಂಗಾರಪೇಟೆ,ಮುಳಬಾಗಿಲಿನ ತಲಾ ಒಬ್ಬರು ಸೇರಿದಂತೆ ನಾಲ್ವರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದ ಬಿಡುಗಡೆ ಹೊಂದಿದವರ ಸಂಖ್ಯೆ ೩೬ಕ್ಕೇರಿದ್ದು, ಸಕ್ರಿಯ ಪ್ರಕರಣಗಳು ೪೪ ಆಗಿದೆ.ಇದುವರೆಗೂ ಯಾವುದೇ ಸಾವು ಸಂಭವಿಸಿಲ್ಲ.
ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗೂ ಸೋಂಕು ಪತ್ತೆ
ಜಿಲ್ಲೆಯ ಕೆಜಿಎಫ್ ನಗರದಲ್ಲಿ ನಾಳೆಯಿಂದ ಆರಂಭಗೊಳ್ಳುತ್ತಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿದ್ದ ಯುವತಿಯಲ್ಲಿ ಕರೊನಾ ಸೋಂಕಿನ ಶಂಕೆ ಹಿನ್ನಲೆಯಲ್ಲಿ ಆಕೆಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲ್ಯವಿವಾಹನದ ಆರೋಪದಡಿ ಕೋಲಾರ ಜಿಲ್ಲೆ ಕೆಜಿಎಫ್‌ನ ಬಾಲಮಂದಿರದಲ್ಲಿದ್ದ ಈ ಯುವತಿಯನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಎರಡು ದಿನಗಳ ಹಿಂದೆಯಷ್ಟೆ ಪೋಷಕರು ಮನೆಗೆ ಕರೆತಂದಿದ್ದರು ಎನ್ನಲಾಗಿದೆ.
ಇಂದು ಯವತಿಯಲ್ಲಿ ಕರೊನಾ ಸೋಂಕಿನ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ನಾಳಿನ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದ್ದು, ಆಕೆಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ನಾಲ್ವರು ಬಿಡುಗಡೆ ಹೊಂದಿದ್ದಾರೆ.
ಈ ಸಂಬಂಧ ಡಿಡಿಪಿಐ ಕೆ.ರತ್ನಯ್ಯ ಮಾಹಿತಿ ನೀಡಿದ್ದು, ಕೋವಿಡ್ ಸೋಂಕಿತರು ಮತ್ತು ಸೋಂಕಿನ ಶಂಕೆ ಇದ್ದವರಿಗೆ ಪರೀಕ್ಷೆ ಬರೆಯಲು ಅವಕಾಶವಿಲ್ಲ, ಅವರಿಗೆ ಪೂರಕ ಪರೀಕ್ಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸುವುದರ ಜತೆಗೆ ಆಗಲೂ ಅವರನ್ನು ಫ್ರೆಶ್ ಅಭ್ಯರ್ಥಿಯೆಂದೇ ಪರಿಗಣಿಸುವುದರಿಂದ ಯಾವುದೇ ಆತಂಕವಿಲ್ಲ ಎಂದು ಸ್ವಷ್ಟನೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss