Monday, August 8, 2022

Latest Posts

ಕೋಲಾರ| ಭಾನುವಾರ ಎಪಿಎಂಸಿಗೆ ರಜೆ: ರೈತರು ಮಾರುಕಟ್ಟೆಗೆ ತರಕಾರಿ ತರದೇ ಸಹಕರಿಸಿ: ವಡಗೂರು ನಾಗರಾಜ್

ಕೋಲಾರ: ಕೋವಿಡ್-19 ಹರಡುವಿಕೆ ತಡೆಗಾಗಿ ಮೇ.೨೪ ಹಾಗೂ ೩೧ರ ಭಾನುವಾರ ಜಿಲ್ಲಾದ್ಯಂತ ಎಪಿಎಂಸಿಗಳಿಗೆ ರಜೆ ಘೋಷಿಸಲಾಗಿದ್ದು, ರೈತರು, ವರ್ತಕರು,ಮಂಡಿಮಾಲೀಕರು ಸಹಕರಿಸಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ವಡಗೂರು ಡಿ.ಎಲ್.ನಾಗರಾಜ್ ಮನವಿ ಮಾಡಿದರು.

ಗುರುವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಇತ್ತೀಚೆಗೆ ಮುಖ್ಯಮಂತ್ರಿಗಳು ಕರೆದಿದ್ದ ಸಭೆಯಲ್ಲಿ ಕೋವಿಡ್ ತಡೆಗೆ ಕೈಜೋಡಿಸಲು ಮಾಡಿದ್ದ ಮನವಿಗೆ ನಾವು ಸ್ಪಂದಿಸುತ್ತಿದ್ದು, ಎರಡು ಭಾನುವಾರ ರಜೆ ನೀಡಿ ಆ ದಿನಗಳಂದು ಇಡೀ ಮಾರುಕಟ್ಟೆಗೆ ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಈ ಸಂಬಂಧ ಜಿಲ್ಲೆಯ ಎಲ್ಲಾ ಎಪಿಎಂಸಿಗಳು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಒಪ್ಪಿಗೆ ನೀಡಿದ್ದಾರೆ, ಆದ್ದರಿಂದ ರೈತರು ಈ ಎರಡು ದಿನಗಳ ಹಿಂದಿನ ಶನಿವಾರ ಮಧ್ಯಾಹ್ನದ ನಂತರ ಮಾರುಕಟ್ಟೆಗೆ ತರಕಾರಿ ತರದಂತೆ ಮನವಿ ಮಾಡಿದರು.
ಮುಂಜಾಗ್ರತೆಗೆ ಮಂಡಿಗಳಿಗೆ ಸೂಚನೆ.

ಈಗಾಗಲೇ ಮಂಡಿ ಮಾಲೀಕರಿಗೆ ಸ್ಯಾನಿಟೈಸರ್,ಸೋಪ್,ನೀರು ಇಡಬೇಕು ಮತ್ತು ಎಲ್ಲಾ ಸಿಬ್ಬಂದಿ ನಿಮ್ಮಲ್ಲಿಗೆ ಬರುವ ರೈತರು, ಲಾರಿಚಾಲಕರು ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಸೂಚಿಸಲಾಗಿದೆ, ಮಾಸ್ಕ್ ಧರಿಸದಿದ್ದರೆ ೧೦೦ ದಂಡ ವಿಧಿಸಲಾಗುತ್ತಿದೆ ಎಂದರು.

ಮಾರುಕಟ್ಟೆಗೆ 65 ವರ್ಷ ಮೇಲ್ಪಟ್ಟವರು ಹಾಗೂ ೧೦ ವರ್ಷ ಕೆಳಗಿನ ವಯೋಮಿತಿಯವರು ಬಾರದಂತೆ ಮನವಿ ಮಾಡಿದರು.
ಮೇ.25 ರ ನಂತರ ಟಮೋಟೋ ಸೀಝನ್ ಆರಂಭಗೊಳ್ಳಲಿದ್ದು, 250 ರಿಂದ 300 ವಾಹನಗಳು ಮಾರುಕಟ್ಟೆಗೆ ಬರಲಿವೆ, ಈಗಾಗಲೇ ಎಪಿಎಂಸಿಯಿಂದ 150 ವಾಹನಗಳಿಗೆ ದಿನವೂ ಔಷಧಿ ಸಿಂಪಡಣೆ ಮಾಡುತ್ತಿರುವುದಾಗಿ ತಿಳಿಸಿದರು.

ಟಮೋಟೋ ಆವಕ ಹೆಚ್ಚುವುದರಿಂದ ಹೆಚ್ಚು ನಿಗಾ ವಹಿಸಬೇಕಾಗಿದೆ, ಟಮೋಟೋ ಪಶ್ಚಿಮ ಬಂಗಾಳ, ಪೂನಾ ಮತ್ತಿತರ ರಾಜ್ಯಗಳಿಗೆ ಹಾಗೂ ಭಾಂಗ್ಲಾ ದೇಶಕ್ಕೂ ರಪ್ತಾಗುತ್ತಿದ್ದು, ದೂರದಿಂದ ಲಾರಿ ಚಾಲಕರು,ಕ್ಲೀನರ್‌ಗಳು ಬರುವುದರಿಂದ ಮುಂಜಾಗ್ರತೆ ವಹಿಸಲಾಗುತ್ತಿದೆ ಎಂದರು.

ಆರ್‌ಟಿಪಿಸಿಆರ್ ಲ್ಯಾಬ್ ಜಿಲ್ಲೆಗೆ ನೀಡಿ-ಆಗ್ರಹ: ಜಿಲ್ಲೆಗೆ ರಿಯಲ್ ಟೈಮ್ ಪಾಲಿಮಾರಸ್ ಚೈನ್ ರಿಯಾಕ್ಷನ್ ಪ್ರಯೋಗಾಲಯವನ್ನು ಮಂಜೂರು ಮಾಡಿಸಿ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಆರಂಭಿಸಲು ಸಂಸದರು,ಉಸ್ತುವಾರಿ ಸಚಿವರಿಗೆ ನಾಗರಾಜ್ ಮನವಿ ಮಾಡಿದರು.

ಈಗಾಗಲೇ ಚಿಕ್ಕಬಳ್ಳಾಫುರದಲ್ಲಿ ಈ ಪ್ರಯೋಗಾಲಯ ಇದೆ, ಕೊರೋನಾ ದೃಢಪಡಿಸಿಕೊಳ್ಳಲು ಗಂಟಲು ದ್ರವದ ಮಾದರಿಗಳನ್ನು ಈಗ ಬೆಂಗಳೂರಿಗೆ ಕಳುಹಿಸಿಕೊಡಬೇಕಾದ್ದರಿಂದ ಫಲಿತಾಂಶ ವಿಳಂಬವಾಗುತ್ತಿದೆ ಎಂದು ತಿಳಿಸಿದರು.

ಜನತೆ,ರೈತರು ಕೊರೋನಾ ಟೆಸ್ಟ್‌ಗೆ ಒಳಗಾಗಲು ಹೆದರುತ್ತಿದ್ದಾರೆ, ಸ್ವಯಂಪ್ರೇರಣೆಯಿಂದ ಪರೀಕ್ಷೆಗೆ ಒಳಗಾಗಿ ಇದರಿಂದ ನಿಮ್ಮ ಕುಟುಂಬ ಮಾತ್ರವಲ್ಲ ಇಡೀ ಜಿಲ್ಲೆ,ದೇಶಕ್ಕೂ ಒಳಿತಾಗಲಿದೆ ಎಂದು ಕಿವಿಮಾತು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಎಪಿಎಂಸಿ ಉಪಾಧ್ಯಕ್ಷ ರವಿಶಂಕರ್ ಉಪಸ್ಥಿತರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss