Saturday, July 2, 2022

Latest Posts

ಕೋಲಾರ| ಮೊದಲ ಹಂತದ ಗ್ರಾ.ಪಂ ಚುನಾವಣೆ: ಶೇ.90ಕ್ಕೂ ಹೆಚ್ಚು ಮತದಾನ, ಕೋವಿಡ್ ಮಾರ್ಗಸೂಚಿ ಪಾಲನೆ

ಹೊಸ ದಿಗಂತ ವರದಿ, ಕೋಲಾರ:

ಜಿಲ್ಲೆಯ ಕೋಲಾರ,ಮಾಲೂರು,ಶ್ರೀನಿವಾಸಪುರ ತಾಲ್ಲೂಕುಗಳಲ್ಲಿ ನಡೆದ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದಂತೆ ಶಾಂತಿಯುತವಾಗಿ ನಡೆದಿದ್ದು, ಶೇ.90ಕ್ಕಿಂತ ಹೆಚ್ಚು ಮತದಾನವಾಗಿದೆ.
ಮತಗಟ್ಟೆಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ಇದೇ ಮೊದಲ ಬಾರಿಗೆ ಮತಗಟ್ಟೆಗೆ ಬರುವ ಮತದಾರರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಕೈಗಳಿಗೆ ಸ್ಯಾನಿಟೈಸರ್ ಹಾಕಿ ಮತಗಟ್ಟೆಗೆ ಕಳುಹಿಸಲಾಗುತ್ತಿತ್ತು, ಈ ಕಾರ್ಯಕ್ಕಾಗಿ ಪ್ರತಿ ಮತಗಟ್ಟೆಗೂ ತಲಾ ಇಬ್ಬರು ಆಶಾ ಕಾರ್ಯಕರ್ತರನ್ನು ನೇಮಿಸಲಾಗಿತ್ತು.
ಅಭ್ಯರ್ಥಿಗಳೂ ಸಹಾ ಪ್ರಚಾರಕ್ಕಾಗಿ ಮಾಸ್ಕ್ ವಿತರಿಸಿದ್ದು, ಒಂದೇ ಬಣ್ಣದ ಮಾಸ್ಕ್ ಧರಿಸಿ ಮತದಾರರು ಪೆಮ್ಮಶೆಟ್ಟಿಹಳ್ಳಿಯಲ್ಲಿ ಮತಚಲಾಯಿಸಿದ್ದು ಕಂಡು ಬಂತು.
ಮಧ್ಯಾಹ್ನದ ವೇಳೆಗೆ ಶೇ.70 ಮತದಾನ
ಮತಗಟ್ಟೆಗಳಲ್ಲಿ ಮತದಾರರು ಬೆಳಗ್ಗೆ 7 ಗಂಟೆಯಿಂದಲೇ ಸಾಲುಗಟ್ಟಿ ನಿಂತಿದ್ದು, 9 ಗಂಟೆಯವರೆಗೂ 10.72 ರಷ್ಟು ಮತದಾನವಾಗಿತ್ತು. ನಂತರ 11 ಗಂಟೆವರೆಗೂ ಶೇ.27.88 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆವರೆಗೂ 52.01 ರಷ್ಟು ಹಾಗೂ 3 ಗಂಟೆವರೆಗೂ 70.54 ರಷ್ಟು ಮತದಾನವಾಗಿತ್ತು.
ಮಂಜುಕವಿದ ವಾತಾವರಣವಿದ್ದರೂ ಮತದಾನ ಬೆಳಗ್ಗಿನಿಂದಲೇ ಚುರುಕಾಗಿದ್ದು, ಮಧ್ಯಾಹ್ನದ ವೇಳೆಗೆ ಸರಿಸುಮಾರು ಎಲ್ಲಾ ಮತಗಟ್ಟೆಗಳಲ್ಲೂ ಶೇ.50ಕ್ಕೂ ಹೆಚ್ಚು ಪ್ರಮಾಣದ ಮತದಾನ ದಾಖಲಾಗಿತ್ತು.
ಮಾತಿನ ಚಕಮಕಿ ತಳ್ಳಾಟ-ನೂಕಾಟ
ಜಿಲ್ಲೆಯ ವಿವಿಧ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳ ಮುಂಭಾಗ ಜನರು ನೂರಾರು ಸಂಖ್ಯೆಯಲ್ಲಿ ಸೇರಿದ್ದರಿಂದ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆದ ವರದಿಗಳು ಬಂದಿದೆ.
ಕೋಲಾರ ತಾಲ್ಲೂಕಿನ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿಯ 96 ಮತಗಟ್ಟೆ ಮುಂಭಾಗ ಮತಹಾಕಲು ಸರದಿ ಸಾಲಿನಲ್ಲಿ ನಿಂತಿದ್ದ ಮತದಾರರ ಬಳಿ ಪ್ರಚಾರಕ್ಕೆ ಮುಂದಾದಾಗ ಪ್ರಶ್ನಿಸಿದ್ದಕ್ಕಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಗ್ರಾಮಸ್ಥರ ದೂರಿನ ಮೇರೆಗೆ ಚುನಾವಣೆ ಉಸ್ತುವಾರಿ ಹೊಂದಿದ್ದ ಸೆಕ್ಟರ್ ಅಧಿಕಾರಿ ಕೆ.ಎನ್.ಮಂಜುನಾಥ್ ತಂಡ ಗ್ರಾಮಕ್ಕೆ ಬಂದು ಪೊಲೀಸರ ಸಹಕಾರದಿಂದ ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾದರು.
ಮಧ್ಯಾಹ್ನ 1 ಗಂಟೆ ಸಮಯದಲ್ಲಿ ನಗರ ಹೊರವಲಯದ ಅಮ್ಮೇರಹಳ್ಳಿ ಮತಗಟ್ಟೆಯಲ್ಲಿ ತಹಸೀಲ್ದಾರ್ ಶೋಭಿತಾ ಸಮ್ಮುಖದಲ್ಲೇ ನೂರಾರು ಮಂದಿ ಗುಂಪುಗೂಡಿ ಕಿರುಚಾಡಿ,ತಳ್ಳಾಡಿಕೊಂಡ ಘಟನೆ ನಡೆಯಿತು.
ಮತಗಟ್ಟೆ ಬಂದೋಬಸ್ತ್‌ಗೆ ನೇಮಕಗೊಂಡಿದ್ದ ಓರ್ವ ಮಹಿಳಾ,ಪುರುಷ ಪೇದೆ, ಗುಂಪನ್ನು ಚದುರುಸಲು ಪ್ರಯಾಸ ಪಡಬೇಕಾಯಿತು. ತಹಸೀಲ್ದಾರ್ ನೀಡಿದ ಮಾಹಿತಿ ಮೇರೆಗೆ ಪೊಲೀಸ್ ಜೀಪ್ ಆಗಮಿಸಿ ಗುಂಪನ್ನು ಚದುರಿಸುವ ಮೂಲಕ ಸುಗಮ ಮತದಾನ್ಕೆ ಅವಕಾಶ ಮಾಡಿಕೊಟ್ಟಿತು.
ಮತದಾರರಿಗೆ ಕೊಡುಗೆ ಮಹಾಪೂರ
ಪಂಚಾಯಿತಿ ಚುನಾವಣಾ ಪ್ರಚಾರ ಕಳೆದ 10 ದಿನಗಳಿಂದ ಪೈಫೋಟಿಯಿಂದ ನಡೆದಿದ್ದು, ಮತದಾನದ ಹಿಂದಿನ ದಿನ ಪ್ರತಿ ಓಟಿಗೂ 500 ರಿಂದ 5 ಸಾವಿರದವರೆಗೂ ನೀಡಿದ ದೂರುಗಳು ಕೇಳಿ ಬಂದವು. ಜತೆಗೆ ಪ್ರತಿ  ಮನೆಗೂ ಕುಕ್ಕರ್ ಮತ್ತಿತರ ಗೃಹಬಳಕೆ ವಸ್ತುಗಳನ್ನು ವಿತರಿಸಿದ ಆರೋಪಗಳು ಕೇಳಿ ಬಂದವು.
ಪೈಪೋಟಿ ಹೆಚ್ಚಿರುವ ಕಡೆಗಳಲ್ಲಿಮೂಗುತಿ, ಕಾಲುಚೈನ್ ಸಹಾ ಮಹಿಳೆಯರಿಗೆ ನೀಡಿದ್ದಾರೆಂದ ಹೇಳಲಾಗಿದೆ. ಮತದಾನದ ದಿನ ಅಭ್ಯರ್ಥಿಗಳ ಪರವಾಗಿ ಗುಂಪುಗಳು ಸೇರಿ ಮತದಾರರನ್ನು ಅಂತಿಮವಾಗಿ ಸೆಳೆಯಲು ಎಲೆ,ಅಡಿಗೆ ಹೂವು,ಮತಚೀಟಿ ನೀಡಿ ಮತಯಾಚಿಸುತ್ತಿದ್ದುದು ಕಂಡು ಬಂತು.
ಕೆಲವೆಡೆ ಮತದಾರರು ಮತಗಟ್ಟೆಗೆ ಬಂದು ಹೋಗಲು ವಾಹನ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಪ್ರತಿ ಚುನಾವಣೆಯಲ್ಲೂ ಗಲಾಟೆ ನಡೆಯುವ ಶ್ರೀನಿವಾಸಪುರ ತಾಲ್ಲೂಕಿನಲ್ಲೂ ಶಾಂತಿಯುತ ಮತದಾನ ನಡೆದಿರುವುದು ವಿಶೇಷವೆನಿಸಿತ್ತು.
ಮೊದಲ ಮತದಾನದ ಹರ್ಷದಲ್ಲಿ ಯುವಕರು
ಗ್ರಾಮ ಪಂಚಾಯಿತಿ ಮತದಾನದಲ್ಲಿ ಯುವಕ,ಯುವತಿಯರು ಉತ್ಸಾಹದಿಂದ ಪಾಲ್ಗೊಂಡಿದ್ದು ಕಂಡು ಬಂತು, ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದ ಖುಷಿ ಯುವಕರಲ್ಲಿ ಕಂಡು ಬಂತು.
ಕೋಲಾರ ತಾಲ್ಲೂಕಿನ ನಾಗಲಾಪುರದಲ್ಲಿ ಸುಷ್ಮಾ ಎಂಬ ಯುವತಿ ಮೊಟ್ಟಮೊದಲ ಬಾರಿಗೆ ಮತಚಲಾಯಿಸಿ, ರೋಮಾಂಚನಗೊಂಡು ಸಂಭ್ರಮಿಸಿ, ಇದು ನನಗೆಮೊದಲ ಅನುಭವ ಎಂದು ತಿಳಿಸಿದರು.
ಕೆಲವೆಡೆ ವಯೋವೃದ್ದರು, ವಿಕಲಚೇತನರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುತ್ತಿದ್ದುದು ಕಂಡು ಬಂತು. .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss