Sunday, August 14, 2022

Latest Posts

ಕೋಲಾರ| ಯಾವುದೇ ಗೊಂದಲವಿಲ್ಲದೆ ಸುಗಮವಾಗಿ ನಡೆದ ಸಿಇಟಿ ಪರೀಕ್ಷೆ

ಕೋಲಾರ: ಜಿಲ್ಲೆಯ ೧೭ ಕೇಂದ್ರಗಳಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯ ಜೀವಶಾಸ್ತ್ರ ವಿಷಯಕ್ಕೆ ೮೪೧ ಹಾಗೂ ಗಣಿತಕ್ಕೆ ೪೧೯ ಮಂದಿ ಗೈರಾಗಿದ್ದಾರೆ ಮತ್ತು ಕೋವಿಡ್ ಮಾರ್ಗಸೂಚಿ ಪಾಲಿಸಿದ್ದು ಯಾವುದೇ ಗೊಂದಲಕ್ಕೆ ಅವಕಾಶವಾಗಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಮೊದಲ ದಿನದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಳಗ್ಗಿನ ಅವಧಿಯಲ್ಲಿ ನಡೆದ ಜೀವಶಾಸ್ತ್ರ ವಿಷಯಕ್ಕೆ ಜಿಲ್ಲೆಯ ಎಲ್ಲಾ ೧೭ ಕೇಂದ್ರಗಳಲ್ಲಿ ೫೩೨೦ ಮಂದಿ ನೋಂದಾಯಿಸಿದ್ದು, ಅವರಲ್ಲಿ ೪೪೭೯ ಮಂದಿ ಹಾಜರಾಗಿದ್ದು, ೮೪೧ ಮಂದಿ ಗೈರಾಗಿದ್ದರು ಎಂದು ತಿಳಿಸಿದ್ದಾರೆ.
ಅದೇ ರೀತಿ ಮಧ್ಯಾಹ್ನದ ಅವಧಿಯಲ್ಲಿ ನಡೆದ ಗಣಿತ ವಿಷಯದ ಪರೀಕ್ಷೆಗೆ ಒಟ್ಟು ೫೩೨೦ ಮಂದಿ ನೋಂದಾಯಿಸಿದ್ದು, ೪೯೦೧ ಮಂದಿ ಹಾಜರಾಗುವ ಮೂಲಕ ೪೧೯ ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಪಾಲನೆ
ಜಿಲ್ಲೆಯ ಎಲ್ಲಾ ೧೭ ಕೇಂದ್ರಗಳಲ್ಲೂ ಮೊದಲೇ ಪರೀಕ್ಷಾ ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಲಾಗಿದ್ದು, ೧೦-೩೦ಕ್ಕೆ ಪರೀಕ್ಷೆ ಇದ್ದರೂ, ಗುಂಪು ಸೇರುವುದನ್ನು ತಡೆಯಲು ಇಂದು ಬೆಳಗ್ಗೆ ೮-೩೦ಕ್ಕೆ ವಿದ್ಯಾರ್ಥಿಗಳು ಕೇಂದ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು ಎಂದರು.
ಶುಶ್ರೂಕಿಯರು, ಆಶಾ ಕಾರ್ಯಕರ್ತರನ್ನು ಪ್ರತಿ ಕೇಂದ್ರಕ್ಕೂ ನೇಮಿಸಲಾಗಿದ್ದು, ಪರೀಕ್ಷಾ ಸಿಬ್ಬಂದಿ ಹಾಗೂ ಕೇಂದ್ರಕ್ಕೆ ಬರುವ ಪ್ರತಿ ವಿದ್ಯಾರ್ಥಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸ್ ಹಾಕಿಯೇ  ಒಳ ಕಳುಹಿಸಲಾಗಿದೆ ಮತ್ತು ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಪ್ರತಿ ಕೇಂದ್ರದಲ್ಲೂ ಕಂಟೈನ್‌ಮೆಂಟ್ ಝೋನ್‌ನಿಂದ ಬರುವ ಪರೀಕ್ಷಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ಮಾಡಲಾಗಿದ್ದು, ಕೋವಿಡ್ ಪಾಸಿಟೀವ್ ಇದ್ದ ವಿದ್ಯಾರ್ಥಿಯೊಬ್ಬರಿಗಾಗಿ ನಗರದ ಮೊರಾರ್ಜಿದೇಸಾಯಿ ವಸತಿ ಶಾಲೆಯಲ್ಲಿ ಪ್ರತ್ಯೇಕ ಕೇಂದ್ರ ತೆರೆದಿದ್ದು, ಅಲ್ಲಿಯೂ ಪರೀಕ್ಷೆ ಸುಗಮವಾಗಿ ನಡೆದಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕೇಂದ್ರ ಪ್ರವೇಶಿಸುವಾಗ ಮಾತ್ರವಲ್ಲ, ಪರೀಕ್ಷೆ ಮುಗಿಸಿ ಹೊರ ಹೋಗುವ ಸಂದರ್ಭದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೆಚ್ಚಿನ ನಿಗಾ ವಹಿಸಲಾಗಿದೆ, ಪ್ರತಿ ಕೇಂದ್ರದಲ್ಲೂ ಧ್ವನಿವರ್ಧಕ ಅಳವಡಿಸಿದ್ದು, ಕಾಲಕಾಲಕ್ಕೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರಗಳಿಗೆ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಸೇರಿದಂತೆ ಮೆಥೋಡಿಸ್ಟ್, ಬಾಲಕರ ಹಾಗೂ ಬಾಲಕಿಯರ ಪಿಯು ಕಾಲೇಜು ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾವು, ಪ್ರಾಂಶುಪಾಲ ಎನ್.ಕೆ.ಮಂಜುನಾಥ್, ಇಲಾಖೆಯ ಗೋಪಿನಾಥ್ ಮತ್ತಿತರರಿದ್ದರು ಎಂದು ವಿವರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss