Friday, July 1, 2022

Latest Posts

ಕೋಲಾರ| ವಿಮರ್ಶೆಗೊಳಪಟ್ಟ ಸಾಹಿತ್ಯಕ್ಕೆ ಘನತೆ ಹೆಚ್ಚು: ಡಿಸಿ ಸಿ.ಸತ್ಯಭಾಮ

ಕೋಲಾರ:ವಿಮರ್ಶೆಯೆಂಬ ಕತ್ತಿಯ ಅಲುಗಿನಲ್ಲಿ ಪರೀಕ್ಷೆಗೊಳಪಟ್ಟು ತನ್ನ ಘನತೆ ಹೆಚ್ಚಿಸಿಕೊಂಡ ಸಾಹಿತ್ಯ ರಚನೆ ಮಾಡಿದ ಕವಿ,ಲೇಖಕರನ್ನು ಸಮಾಜಕ್ಕೆ ಪರಿಯಚಿಸುವ ಮನ್ವಂತರದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.

ಮಂಗಳವಾರ ಮನ್ವಂತರ  ಪ್ರಕಾಶನ, ಮನ್ವಂತರ ಜನಸೇವಾ ಟ್ರಸ್ಟ್  ಆಶ್ರಯದಲ್ಲಿ ನಗರದ ಕೆಇಬಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕವಿ, ಲೇಖಕ, ಪತ್ರಕರ್ತ ಆರ್. ಚೌಡರೆಡ್ಡಿ ಪಣಸಮಾಕನಹಳ್ಳಿ ಅವರಿಗೆ ಕವಿ ನಮನ-೨೦೨೦ ಕಾರ್ಯಕ್ರಮವನ್ನು ಕೊರೋನಾ ವಾರಿಯರ‍್ಸ್‌ಗೆ ಪುಷ್ಪವೃಷ್ಟಿ ಮಾಡಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಡಿವಿಜಿ,ಮಾಸ್ತಿಯಂತ ದಿಗ್ಗಜರು ಜನ್ಮತಾಳಿದ ಜಿಲ್ಲೆಯಾಗಿದೆ, ಇಂತಹ ಗಡಿನಾಡಲ್ಲಿ ವಿಮರ್ಶೆಗಳೆನ್ನಲ್ಲಾ ಮೀರಿ ಓದುಗರ ಪ್ರೀತಿ ಗಳಿಸಿ ಕವಿಯಾಗಬೇಕು, ರಚಿಸವ ಸಾಹಿತ್ಯ ಸಮಾಜಕ್ಕೆ ದಾರಿದೀಪವಾಗಬೇಕು, ಮನುಷ್ಯವೇಗದ ವಿಮರ್ಶೆ ಮಾಡಿ ನೋಡುವ ಕಾಲಘಟ್ಟದಲ್ಲಿ ನಾವಿಂದು ಅಂತಹ ಸಾಹಿತ್ಯ,ಸಾಹಿತಿಯನ್ನು ಗೌರವಿಸುವ ಕೆಲಸ ಮಾಡಬೇಕಾಗಿದೆ ಎಂದರು.

ತಮ್ಮ ಹುಟ್ಟುಹಬ್ಬಕ್ಕೆ ಕುವೆಂಪು ಅವರ ಕವಿಶೈಲಕ್ಕೆ ಹೋಗಿ ಗುಂಪು ಚರ್ಚೆಯಲ್ಲಿ ಭಾಗಿ, ಬರಹಗಾರರಾದ ತೇಜಸ್ವಿ, ಜಯಪ್ರಕಾಶ್ ಜತೆ ಮಾತನಾಡಿದ್ದನ್ನು ಡಿಸಿಯವರು ನೆನಪು ಮಾಡಿಕೊಂಡರು.

ಸಾಹಿತ್ಯ,ಸಂಗೀತ ನಿರ್ಮಲ ಅದನ್ನು ಆಸ್ವಾದಿಸಲು ನಮ್ಮ ಮನಸ್ಸು ಸರಿಯಿರಬೇಕು, ಕಾಳಿದಾಸ ಇಂಗ್ಲೆಂಡ್‌ನಲ್ಲಿ ಹುಟ್ಟಿದ್ದರೆ ವಿಶ್ವಮಾನ್ಯರಾಗುತ್ತಿದ್ದರು, ಅವರ ಸಾಹಿತ್ಯಕ್ಕೆ ಸಾಟಿಯೇ ಇಲ್ಲ ಎಂದರು.

ಮನ್ವಂತರ ಜನಸೇವಾ ಟ್ರಸ್ಟ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ದೋಂಬಿ,ಗಲಾಟೆಗೆ ಮಾಧ್ಯಮಗಳು ನೀಡುವಷ್ಟು ಮಾನ್ಯತೆ ಸಾಹಿತ್ಯಕ್ಕೆ ನೀಡುತ್ತಿಲ್ಲ,ಚೌಡರೆಡ್ಡಿ ಗ್ರಾಮೀಣ ಕೆರೆ,ಕಣಿ,ಬೆಳೆ,ಕೃಷಿಯ ಜಾನಪದ ಸೊಗಡನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ ಎಂದು ಅಭಿನಂದಿಸಿದರು.

ಇಂದು ಲೇಖಕರ ಕೃತಿಯ ಬಗ್ಗೆ ಮಾತನಾಡಲೂ ಕೂಲಿ ಪಡೆಯುವ ಬುದ್ದಿಜೀವಿಗಳಿದ್ದಾರೆ, ಕೂಲಿ ಬರಹಗಾರರೇ ಹೆಚ್ಚುತ್ತಿರುವ ದಿನಗಳಲ್ಲಿ ಕೂಲಿಕೇಳದೇ ಸಾಹಿತಿಯನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮನ್ವಂತರ ಟ್ರಸ್ಟ್ ಮಾಡುತ್ತಿದೆ, ನಿರ್ಮಲ ಮನಸ್ಸಿನ ಚೌಡರೆಡ್ಡಿಗೆ ಕವಿನಮನ ನಿಜಕ್ಕೂ ಅರ್ಥಪೂರ್ಣ ಎಂದರು.

ಅರಸ ಮರಣಿಸಿದರೆ ತಾರೆಯೊಂದು ಉರುಳಿತು ಎನ್ನುತ್ತಾರೆ ಆದರೆ ಕವಿಯೊಬ್ಬ ಮರಣಿಸಿದರೆ ಆತನ ಸಾಹಿತ್ಯ ಜನರ ನಾಲಿಗೆಯಲ್ಲಿ ಶಾಶ್ವತವಾಗಿ ಉಳಿಯುವ ಮೂಲಕ ತಾರೆಯೊಂದು ಗಗನ ಸೇರಿತು ಎನ್ನುತ್ತೇವೆ ಎಂದು ಚೌಡರೆಡ್ಡಿರನ್ನು ಅಭಿನಂದಿಸಿದರು.
ಹಳ್ಳಿಗನಿಗೆ ಹೃದಯದಲ್ಲಿ ಬುದ್ದಿ ಇದ್ದರೆ ವಿಚಾರವಾದಿಗೆ ತಲೆಯಲ್ಲಿ ಬುದ್ದಿ ಇರುತ್ತದೆ, ಸೃಜನಶೀಲತೆ ಕಾವ್ಯದಲ್ಲಲ್ಲ ಅದನ್ನು ಹೊರತೆಗೆಯುವನಲ್ಲಿ ಇರುತ್ತದೆ ಎಂದರು.

ಕಾವ್ಯದಲ್ಲಿ ಸೌಂದರ್ಯ ತರುವ, ಶಬ್ದಗಳಿಗೆ ನಾದ ತುಂಬುವ ಕೆಲವೇ ಸಮಕಾಲೀನ ಕವಿಗಳಲ್ಲಿ ಚೌಡರೆಡ್ಡಿ ಒಬ್ಬರು, ಜನರ ನಾಲಿಗೆಯಲ್ಲಿ ಕವಿ ಬದುಕಿರುತ್ತಾನೆ ಎಂಬ ಮಾತಿಗೆ ಅರ್ಥವಾದವರು ಚೌಡರೆಡ್ಡಿ ಎಂದರು.

ಕವಿತೆಯಿಂದ ಕವಿತೆಗೆ ಏರಬೇಕು, ಶೂನ್ಯಕ್ಕಲ್ಲ, ಗಾಂಧಿ, ಅಂಬೇಡ್ಕರ್ ಅವರು ಬಸವಣ್ಣ, ಅಕ್ಕಮಹಾದೇವಿಯ ವಚನಗಳಲ್ಲಿ ಇರೋದು, ಕವಿಗಳು ಗರ್ಭಕೋಶ ಉಳಿಸಿಕೊಂಡು ಕಾವ್ಯದ ಶಿಶುವನ್ನು ಬೆಳೆಸಿ ಸಮಾಜಕ್ಕೆ ನೀಡಲಿ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಮನ್ವಂತರ ಅನೇಕ ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ,ಬಡ ವಿದ್ಯಾರ್ಥಿಗಳಿಗೆ ನೆರವಾಗಿದೆ, ಸಾಮಾಜಿಕ ಸೇವೆಯ ಈ ಸಂಸ್ಥೆ ಇದೀಗ ಚೌಡರೆಡ್ಡಿರಂತಹ ಉತ್ತಮ ಕವಿಯನ್ನು ಗುರುತಿಸಿ ಗೌರವಿಸುತ್ತಿದೆ, ಈ ಸಂಸ್ಥೆಗೆ ಜಿಲ್ಲಾಧಿಕಾರಿಗಳು ನಿವೇಶನ ನೀಡಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜೆ.ಜಿ.ನಾಗರಾಜ್, ೨೦೦೮ರಲ್ಲಿ ಕವಿಗೋಷ್ಟಿ ಮೂಲಕ ಆರಂಭವಾದ ಮನ್ವಂತರ ಪ್ರಕಾಶನ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ, ಟ್ರಸ್ಟ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಕಾರ್ಯದರ್ಶಿ ಪಾ.ಶ್ರೀ ಅನಂತರಾಮ್ ನೇತೃತ್ವದಲ್ಲಿ ಬಡ ವಿದ್ಯಾರ್ಥಿಗಳಿಗೆ ನೆರವಾಗುವುದು,ಬಡ ಕ್ರೀಡಾಪಟುಗಳಿಗೆ ಸೌಲಭ್ಯ, ವರ್ಷವಿಡೀ ಊಟ, ಪರಿಸರ ಸಂರಕ್ಷಣೆ,ಸಮಾಜಕ್ಕೆ ನೆರವು ನೀಡುವ ಕಾಯಕ ಮಾಡಿಕೊಂಡು ಬಂದಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ವಾಗತಿಸಿದ ಮನ್ವಂತರ ಜನಸೇವಾ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ ಅನಂತರಾಮ್, ಕೊರೋನಾ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸಮಾಜಕ್ಕೆ ಕೋವಿಡ್ ಭಯ ಹೋಗಲಾಡಿಸುವ ಪ್ರಯತ್ನವಾಗಿದೆ, ಸಾಮಾಜಿಕ ಅಂತರ ಕಾಯ್ದುಕೊಂಡ ಎಲ್ಲರಿಗೂ ಧನ್ಯವಾದ ಎಂದರು.

ಇದೇ ಸಂದರ್ಭದಲ್ಲಿ ಕವಿನಮನಕ್ಕೆ ಭಾಜನರಾದ ಚೌಡರೆಡ್ಡಿ ಪಣಸಮಾಕನಹಳ್ಳಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನಾ  ಶ್ರೀನಿವಾಸಪುರದ ಗಾಯಕ ನರಸಿಂಹಮೂರ್ತಿ ಮತ್ತು ತಂಡದಿಂದ ಆರ್.ಚೌಡರೆಡ್ಡಿ ವಿರಚಿತ ಗೀತೆಗಳ ಗಾಯನ ನಡೆಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss