ಕೋಲಾರ: ಈ ಹಿಂದೆ ತಹಸೀಲ್ದಾರ್ ಆಗಿದ್ದ ವಿಜಯಣ್ಣ ಅವಧಿಯಲ್ಲಿ ಭೂಮಂಜೂರಾತಿ,ಸಾಗುವಳಿ ಚೀಟಿ ವಿತರಣೆಯಲ್ಲಿ ಅವ್ಯವಹಾರ ಗಳಾಗಿರುವ ಆರೋಪಗಳಿರುವ ಹಿನ್ನಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಉಪವಿಭಾಗಾಧಿಕಾರಿಗಳಿಗೆ ಶಾಸಕ ಹಾಗೂ ಇಪ್ಕೋ ಸಂಸ್ಥೆ ಅಧ್ಯಕ್ಷ ಕೆ.ಶ್ರೀನಿವಾಸಗೌಡ ಸೂಚನೆ ನೀಡಿದರು.
ನಗರದ ಮಿನಿ ವಿಧಾನಸೌಧದಲ್ಲಿ ಮಂಗಳವಾರ ಕರೆದಿದ್ದ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ ಸಭೆಯಲ್ಲಿ ಬಂದ ದೂರುಗಳ ಹಿನ್ನಲೆಯಲ್ಲಿ ಈ ಸೂಚನೆ ನೀಡಿದರು.
ವಿಜಯಣ್ಣ ಅವಧಿಯಲ್ಲಿ ಆಗಿರುವ ಭೂಮಂಜೂರಾತಿ, ಸಾಗುವಳಿ ಚೀಟಿ ವಿತರಣೆ ಕುರಿತು ಪುನರ್ ಪರಿಶೀಲನೆ ನಡೆಸುವಂತೆ ಎಸಿಗೆ ಸೂಚಿಸಿದ ಶಾಸಕರು, ಜಮೀನು ಮಂಜೂರಾಗಿದ್ದರೂ ಸಾಗುವಳಿ ಚೀಟಿ ನೀಡದಿರುವ ದೂರುಗಳನ್ನು ಪರಿಹರಿಸಲು ತಿಳಿಸಿದರು.
ನಾನೂ ಒಬ್ಬ ರೈತನಾಗಿದ್ದೇನೆ, ಜನರ ಕಷ್ಟ ತಿಳಿದಿದೆ. ಜನಸಾಮಾನ್ಯರು ಕೆಲಸ ಕಾರ್ಯಗಳಿಗೆ ನಿತ್ಯ ಕಚೇರಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ವಾರಕ್ಕೊಮ್ಮೆ ಅಹವಾಲು ಸ್ವೀಕರಿಸಿ ಆ ಮೂಲಕ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಈ ಹಿಂದೆ ತಾಲ್ಲೂಕಿನಲ್ಲಿ ತಹಸೀಲ್ದಾರ್ ಆಗಿದ್ದ ವಿಜಯಣ್ಣ ಅವಧಿಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ. ತಾಲೂಕಿನ ೭ ಹೋಬಳಿಗಳಲ್ಲೂ ಇದೇ ಕೆಲಸ ಆಗಿದೆ. ಅರ್ಹ ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡಿದ್ದರೆ ತಮ್ಮ ಅಭ್ಯಂತರ ಇಲ್ಲ. ಆದರೆ ಹತ್ತಾರು ಎಕರೆ ಜಮೀನು ಉಳ್ಳವರಿಗೂ ಗೋಮಾಳ, ಸರ್ಕಾರಿ ಜಮೀನನ್ನು ಆ ಮನುಷ್ಯ ಮಂಜೂರು ಮಾಡಿದ್ದಾನೆ. ಹೇಳುತ್ತಾ ಹೋದರೆ ಆತನ ವಿರುದ್ದ ದೂರುಗಳ ರಾಶಿಯೇ ಬೀಳುತ್ತದೆ ಎಂದರು.
ಈ ಸಂದರ್ಭದಲ್ಲಿ ಎಸಿ ಸೋಮಶೇಖರ್ ಅವರಿಗೆ ದೂರವಾಣಿ ಮಾಡಿ ಕಚೇರಿಗೆ ಕರೆಯಿಸಿಕೊಂಡ ಶಾಸಕರು ವಿಜಯಣ್ಣ ಅವಧಿಯಲ್ಲಿ ನಡೆದಿರುವ ಎಲ್ಲ ಮಂಜೂರಾತಿಗಳಿಗೆ ಸಂಬಂಧಿಸಿದಂತೆ ಎಲ್ಲ ಫಲಾನುಭವಿಗಳಿಗೂ ನೋಟಿಸ್ ಜಾರಿ ಮಾಡಿ, ಈಗಾಗಲೇ ಉಳುಮೆ ಶುರು ಮಾಡಿದ್ದರೆ ತಕ್ಷಣ ನಿಲ್ಲಿಸಿ, ದಾಖಲೆಗಳನ್ನು ಮರುಪರಿಶೀಲಿಸಿ, ಅರ್ಹರಾಗಿದ್ದಲ್ಲಿ ಮಂಜೂರಾತಿ ಮುಂದುವರಿಸಿ, ಇಲ್ಲವಾದಲ್ಲಿ ರದ್ದುಪಡಿಸಲು ಕ್ರಮ ವಹಿಸುವಂತೆ ಸೂಚಿಸಿದರು.
ದಾದಿರೆಡ್ಡಿಹಳ್ಳಿಯ ಮುನಿಸ್ವಾಮಿಗೌಡ ಅರ್ಜಿ ಸಲ್ಲಿಸಿ ೨೦೦೪ರಲ್ಲಿ ಅರ್ಜಿ ನೀಡಿದ್ದರೂ ಇನ್ನೂ ಖಾತೆ ಆಗದಿರುವ ಬಗ್ಗೆ ದೂರಿದಾಗ ಗರಂ ಆದ ಶಾಸಕರು, ಒಂದು ಜಮೀನಿನ ಖಾತೆ ಮಾಡಿಕೊಡಲು ೧೫ ವರ್ಷ ಬೇಕಾ ಎಂದು ಪ್ರಶ್ನಿಸಿದರಲ್ಲದೆ ಮುಂದಿನ ವಾರದೊಳಗೆ ಈ ಜಮೀನಿನ ಪ್ರಗತಿ ಏನಾಯಿತು ಎಂಬುದನ್ನು ತಿಳಿಸುವಂತೆ ಕಂದಾಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕಿನ ಹೂಹಳ್ಳಿಯಲ್ಲಿ ೪ ಎಕರೆ ಜಮೀನು ಸರ್ಕಾರಿ ಶಾಲೆಗೆ ಆಟದ ಮೈದಾನಕ್ಕೆ ಮೀಸಲಿಡಬೇಕೆಂದು ಗ್ರಾಮದ ಚಂದ್ರಶೇಖರ್ ಮನವಿ ನೀಡಿದಾಗ ಈ ಬಗ್ಗೆ ಸರ್ವೇ ನಡೆಸಿ ಮುಂದಿನ ಮಂಗಳವಾರದೊಳಗೆ ವರದಿ ನೀಡುವಂತೆ ಸೂಚಿಸಿದರು.
ತಾಲೂಕಿನ ಕೋಟಿಗಾನಹಳ್ಳಿಯಲ್ಲಿ ಸ್ಮಶಾನ ಜಮೀನು ಒತ್ತುವರಿಯಾಗಿರುವ ಬಗ್ಗೆ ಕೋಟಿಗಾನಹಳ್ಳಿ ಗಣೇಶಗೌಡ, ನರಸಾಪುರದಲ್ಲಿ ಸುಮಾರು ೪ ಎಕರೆಯಷ್ಟಿದ್ದ ಸ್ಮಶಾನ ಭೂಮಿ ಅರ್ಧ ಎಕರೆಯಷ್ಟು ಮಾತ್ರ ಉಳಿದಿರುವ ಬಗ್ಗೆ ಶ್ರೀಧರ್ ದೂರಿದಾಗ ಒತ್ತುವರಿದಾರರು ಎಷ್ಟೇ ದೊಡ್ಡವರಾಗಿದ್ದರೂ ಕ್ರಮ ಕೈಗೊಳ್ಳಿ ಎಂದು ಶಾಸಕರು ಸೂಚಿಸಿದರು.
ಉಪ ವಿಬಾಗಾಧಿಕಾರಿ ಸೋಮಶೇಖರ್, ಪ್ರಭಾರಿ ತಹಸೀಲ್ದಾರ್ ಸುಜಾತ, ಶಿರಸ್ತೇದಾರ್ ಕೊಂಡಪ್ಪ, ಕಂದಾಯ ಇಲಾಖೆ ಸಿಬ್ಬಂದಿ ಶೈಜಲಾ ಇತರರು ಹಾಜರಿದ್ದರು.