Thursday, June 30, 2022

Latest Posts

ಕೋಲಾರ| ಹೊರರಾಜ್ಯದ ತರಕಾರಿ ಎಪಿಎಂಸಿಗೆ ಬರುವುದನ್ನು ನಿರ್ಬಂಧಿಸಿ-ರೈತಸಂಘದಿಂದ ಆಗ್ರಹ

ಕೋಲಾರ: ಕೊರೋನಾ ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಾಯವಾಗಿ ಆಧಾರ್‌ಕಾರ್ಡ್ ಜಾರಿಗೊಳಿಸಿ ಹೊರರಾಜ್ಯದ ಟೊಮೆಟೊ, ತರಕಾರಿಯನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿ ರೈತಸಂಘದಿಂದ ಮುಳಬಾಗಿಲು ಎಪಿಎಂಸಿ ಅಧ್ಯಕ್ಷ ಮತ್ತು ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಗಡಿಭಾಗಕ್ಕೆ ಹೊಂದಿಕೊಂಡಿರುವ ವಡ್ಡಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಸಾವಿರಾರು ಕಾರ್ಮಿಕರು, ರೈತರು, ವ್ಯಾಪಾರಸ್ಥರ ಜೊತೆಗೆ ಸಾವಿರಾರು ಕೋಟಿ ವಹಿವಾಟು ನಡೆಯುತ್ತಿದ್ದು, ಕಣ್ಣಿಗೆ ಕಾಣದ ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತೆ ವಹಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ದೂರಿದರು.
ಮತ್ತೊಂದೆಡೆ ಜಿಲ್ಲೆಯ ಸುತ್ತಲೂ ಕೊರೊನಾ ವೈರಸ್ ಹೆಚ್ಚಾಗಿದ್ದರೂ ಮಾರುಕಟ್ಟೆಯಲ್ಲಿ ಯಾವುದೇ ವೈದ್ಯಕೀಯ ತಪಾಸಣೆಯಿಲ್ಲ. ಮಾಸ್ಕ್, ಸ್ಯಾನಿಟೈಸರ್ ಕೇಳುವಂತಿಲ್ಲ. ಅದರ ಜೊತೆಗೆ ನೆರೆಯ ಆಂಧ್ರದ ವಿಕೋಟೆಯಲ್ಲಿ ೮ ಜನ ಕೊರೊನಾ ಸೋಂಕಿತರಲ್ಲಿ ಮೂರ‍್ನಾಲ್ಕು ಜನ ಕೋಲಾರ ಜಿಲ್ಲಾದ್ಯಂತ ಮಾರುಕಟ್ಟೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುವ ಜೊತೆಗೆ ಈಗಾಗಲೇ ಮಾರುಕಟ್ಟೆಯಲ್ಲಿ ಅವರ ಸಂಪರ್ಕದಲ್ಲಿದ್ದ ೨೬ ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಟ್ಟಿರುವುದು ಆಡಳಿತ ಮಂಡಳಿಯ ವೈಫಲ್ಯಕ್ಕೆ ಉದಾಹರಣೆಯಾಗಿದೆ ಎಂದರು.
ಕಳೆದ ೫೦ ದಿನಗಳಿಂದ ಜಿಲ್ಲಾಡಳಿತ ಮತ್ತು ಅಧಿಕಾರಿಗಳ ಹಗಲು, ರಾತ್ರಿ ಕಷ್ಟಪಟ್ಟು ನಿಯಂತ್ರಣಕ್ಕೆ ತಂದಿದ್ದ ವೈರಸ್ ಒಂದೇ ದಿನದಲ್ಲಿ ನೀರಿನಲ್ಲಿ ಮಾಡಿದ ಹೋಮದಂತಾಗಿದೆ.
ಇಷ್ಟಾದರೂ ಎಚ್ಚೆತ್ತುಕೊಂಡು ಮಾರುಕಟ್ಟೆಯಲ್ಲಿ ಯಾವುದೇ ಮುಂಜಾಗ್ರತೆವಹಿಸಿ ಕಡ್ಡಾಯವಾಗಿ ಕೊರೊನಾ ಹಾವಳಿ ನಿಯಂತ್ರಣಕ್ಕೆ ಬರುವವರೆಗೂ ಹೊರರಾಜ್ಯದ ತರಕಾರಿ ಮತ್ತು ಟೊಮೆಟೊಗೆ ನಿರ್ಬಂಧ ಹೇರಲು ಆಧಾರ್‌ಕಾರ್ಡ್ ಕಡ್ಡಾಯವಾಗಿ ಜಾರಿಗೊಳಿಸಿ ಮಾರುಕಟ್ಟೆಯಲ್ಲಿ ವೈದ್ಯಕೀಯ ತಪಾಸಣಾ ಕೇಂದ್ರ ತೆರೆದು ವ್ಯಾಪಾರಕ್ಕೆ ಬರುವ ವ್ಯಾಪಾರಸ್ಥರು ಮತ್ತು ಕೂಲಿಕಾರ್ಮಿಕರು, ರೈತರ ಮೇಲೆ ನಿಗಾ ಇಡಲು ಪ್ರತ್ಯೇಕ ತಂಡ ರಚನೆ ಮಾಡಬೇಕೆಂದು ಒತ್ತಾಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss