Monday, July 4, 2022

Latest Posts

ಕೋಲಾರ: 2 ನೇ ದಿನವೇ ಲಾಕ್‌ಡೌನ್ ಸಡಿಲಿಕೆ ವಾಪಸ್ಸು… ರಸ್ತೆಗಿಳಿದವರಿಗೆ ಲಾಠಿರುಚಿ!!

ಕೋಲಾರ: ಸಾಮಾಜಿಕ ಅಂತರ ಕಾಯ್ದುಕೊಳ್ಳವಲ್ಲಿ ವಿಫಲ ಹಾಗೂ ಕರೋನಾ ಸಂಕಷ್ಟ ಪರಿಸ್ಥಿತಿಯ ಗಂಭೀರತೆಯನ್ನು ಅರಿಯದ ಜನರ ವರ್ತನೆಗೆ ಆಕ್ರೋಶಗೊಂಡ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಗುರುವಾರ ನೀಡಿದ್ದ ಲಾಕ್‌ಡೌನ್ ಸಡಿಲಿಕೆಯನ್ನು ವಾಪಸ್ಸು ಪಡೆದಿದ್ದರಿಂದಾಗಿ ನಗರದಲ್ಲಿ ಮತ್ತೆ ಬಿಗಿ ಪರಿಸ್ಥಿತಿ ನಿರ್ಮಾಣಗೊಂಡಿತು.
ರಾಜ್ಯ,ಕೇಂದ್ರ ಸರ್ಕಾರದ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ಜಿಲ್ಲೆ ಹಸಿರುವಲಯದಲ್ಲಿದ್ದ ಹಿನ್ನಲೆಯಲ್ಲಿ ಗುರುವಾರವಷ್ಟೇ ಜಿಲ್ಲಾಧಿಕಾರಿಗಳು ಲಾಕ್‌ಡೌನ್ ಸಡಿಲಿಕೆ ಘೋಷಿಸಿದ್ದರು. ಲಾಕ್‌ಡೌನ್ ಸಡಿಲಿಕೆ ನಡುವೆ ಸಾಮಾಜಿಕ ಅಂತರಕಾಯ್ದುಕೊಳ್ಳಲು, ಮಾಸ್ಕ್ ಕಡ್ಡಾಯವಾಗಿ ಬಳಸಲು ಡಿಸಿ ಸೂಚಿಸಿದ್ದು ಗುರುವಾರ ನಗರಾದ್ಯಂತ ಎಲ್ಲಾ ಅಂಗಡಿಮುಂಗಟ್ಟುಗಳು ತೆರೆದು ವಹಿವಾಟು ಆರಂಭಿಸಲಾಗಿತ್ತು.
ಹಲವು ಅಂಗಡಿಗಳ ಬೀಗದ ಕೀ ವಶ
ಗುರುವಾರ ರಾತ್ರಿ ದಿಢೀರ್ ನಗರದಲ್ಲಿ ಸಂಚಾರ ನಡೆಸಿದ ಡಿಸಿ ಸತ್ಯಭಾಮ, ಹಲವು ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮತ್ತು ಮಾಸ್ಕ್ ಧರಿಸದೇ ಜನತೆ ಖರೀದಿಯಲ್ಲಿ ತೊಡಗಿದ್ದನ್ನು ಕಂಡು ಕಸಿವಿಸಿಕೊಂಡರು.
ನೀಡಿದ್ದ ಸಡಿಲಿಕೆ ದುರುಪಯೋಗವಾಗುತ್ತಿದ್ದು, ಹಸಿರುವಲಯವಾಗಿರುವ ಜಿಲ್ಲೆಗೆ ಮತ್ತೆ ಸಂಕಷ್ಟ ಎದುರಾಗುವ ಆತಂಕದ ಹಿನ್ನಲೆಯಲ್ಲಿ ಶುಕ್ರವಾರದಿಂದಲೇ ಲಾಕ್ ಡೌನ್ ಬಿಗಿಗೊಳಿಸಿ, ಅಗತ್ಯಸೇವೆಗಳಾದ ಔಷಧಿ,ಹಾಲು ಮಾರಾಟಕ್ಕೆ ಅವಕಾಶ ನೀಡಿ ಯಥಾಸ್ಥಿತಿ ಮುಂದುವರೆಸಿ ಎಂದು ನಗರಸಭೆ ಆಯುಕ್ತ ಶ್ರೀಕಾಂತ್ ಅವರಿಗೆ ಕಟ್ಟಪ್ಪಣೆ ಮಾಡಿದರು.
ಸಾಮಾಜಿಕ ಅಂತರ ನಿರ್ಲಕ್ಷ್ಯಕ್ಕೆ ಕಾರಣವಾದ ನಗರದ ಹಲವಾರು ಅಂಗಡಿಗಳ ಕೀಯನ್ನು ವಶಕ್ಕೆ ಪಡೆದ ಡಿಸಿಯವರು, ನಾಳೆಯಿಂದಲೇ ಲಾಕ್‌ಡೌನ್ ಕಟ್ಟುನಿಟ್ಟಿನ ಜಾರಿಗೆ ಆದೇಶಿಸಿದರು. ನಗರ ಸಂಚಾರದ ಸಂದರ್ಭದಲ್ಲಿ ಕೆಲವು ಅಂಗಡಿಗಳಲ್ಲಿ ರಸ್ತೆ ಬದಿ ಸಿಹಿ ಮಾರಾಟ, ಸ್ವಚ್ಚತೆ ಕೊರತೆ ಕಂಡು ಅಗತ್ಯ ಕ್ರಮಕ್ಕೆ ಸೂಚಿಸಿದರಲ್ಲದೇ ನಾಳೆಯಿಂದ ಸರ್ಕಾರದ ಮುಂದಿನ ಆದೇಶದವರೆಗೂ ಲಾಕ್‌ಡೌನ್‌ಅನ್ನು ಬಿಗಿಗೊಳಿಸಿ, ರಸ್ತೆಗಿಳಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಲಾಕ್‌ಡೌನ್ ಮತ್ತೆ ಬಿಗಿ ಜನರಿಗೆ ಲಾಠಿ ರುಚಿ
ಡಿಸಿಯವರ ಆದೇಶದ ಹಿನ್ನಲೆಯಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಮುನ್ನವೇ ಎಲ್ಲಾ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದರು. ನಿಯಮ ಮೀರಿ ರಸ್ತೆಗಿಳಿದವರಿಗೆ ಲಾಠಿ ರುಚಿ ತೋರಿಸಿ ಮನೆಗಟ್ಟಿದರು. ನಗರಾದ್ಯಂತ ಹಲವಾರು ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಎಲ್ಲಾ ಮುಖ್ಯರಸ್ತೆಗಳಲ್ಲೂ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದೆ, ಇಡೀ ನಗರ ಮತ್ತೆ ಲಾಕ್‌ಡೌನ್‌ಗೆ ಮರಳಿದೆ.
ಮಸೀದಿಯಲ್ಲಿ ಪ್ರಾರ್ಥನೆ 11 ಮಂದಿ ವಶಕ್ಕೆ
ನಗರದ ತರಕಾರಿ ಮಾರುಕಟ್ಟೆ ಸಮೀಪದ ಬಾ-ಕೀ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿರುವ ಮಾಹಿತಿ ಪಡೆದ ತಹಸೀಲ್ದಾರ್ ಶೋಭಿತಾ ದಿಢೀರ್ ದಾಳಿ ನಡೆಸಿ 11 ಮಂದಿಯನ್ನು ವಶಕ್ಕೆ ಪಡೆದುಕೊಂಡರು.
ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಬೇರೆ ಊರುಗಳಿಂದ ಬಂದು ಮಸೀದಿ ಸಮೀಪ ಬಾಳೆಹಣ್ಣು ಮಾರುವ ಕೆಲವು ಮಂದಿ ಮಸೀದಿಯ ಚಿಕ್ಕ ಬಾಗಿಲಿನಿಂದ ಒಳಹೋಗಿ ಪ್ರಾರ್ಥನೆಯಲ್ಲಿ ತೊಡಗಿದ್ದು, ಈ ಕುರಿತು ಕ್ಷಮೆಯೂ ಯಾಚಿಸಿದ್ದಾರೆ ಆದರೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಲು 11 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss