ಮೈಸೂರು: ಚಾಮುರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಮಲೈಮಹದೇಶ್ವರ ಸ್ವಾಮಿಯ ಇತಿಹಾಸ ತಿರುಚಿ, ಹಾಡು ರಚಿಸಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪ ಇದೀಗ ಗಾಯಕ ರ್ಯಾಪರ್ ಚಂದನ್ ಶೆಟ್ಟಿವಿರುದ್ಧ ಕೇಳಿಬಂದಿದೆ. ರ್ಯಾಪರ್ ಚಂದನ್ಶೆಟ್ಟಿ ಇತ್ತೀಚೆಗೆ ಹೊರತಂದಿರುವ ಕೋಲುಮಂಡೆ ವಿಡಿಯೋ ಆಲ್ಬಂ ಈಗ ಭಾರೀ ವಿವಾದವನ್ನು ಎಬ್ಬಿಸಿದೆ. ಅಲ್ಲದೇ ಸಾರ್ವಜನಿಕರು ಹಾಗೂ ಮಲೆಮಹದೇಶ್ವರನ ಭಕ್ತರ ತೀವ್ರ ಆಕ್ರೋಶಕ್ಕೆ ತುತ್ತಾಗಿದೆ. ಕೊಲುಮಂಡೆ ಹಾಡನ್ನ ಅಶ್ಲಿಲವಾಗಿ ಚಿತ್ರಿಕರಿಸಿ ಭಾವನೆಗೆ ಧಕ್ಕೆ ತಂದ ಆರೋಪ ಕೇಳಿಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿಯ ವಿರುದ್ಧ ತೀವ್ರ ಟೀಕೆ, ಆಕ್ರೋಶಗಳು ವ್ಯಕ್ತವಾಗಿದೆ.
ಕೋಲುಮಂಡೆ ಜಂಗಮ ದೇವನು ಕೋರಣಕ್ಕೆ ದಯಾಮಾಡವನೇ, ಕೋರಣ್ಣ ನೀಡವ್ವಾ ಕೋಲುಮಂಡೆ ಜಂಗಮದೇವನಿಗೆ ಈ ಜಾನಪದ ಶೈಲಿಯ ಹಾಡು ಜಾನಪದ ನಾಯಕ, ಪವಾಡ ಪುರುಷ ಶ್ರೀಮಲೆಮಹದೇಶ್ವರರಿಗೆ ಸೇರಿದ್ದು, ಅವರ ಭಕ್ತರು ಮಹದೇಶ್ವರನ ಮಹಿಮೆಯನ್ನು ಜಗತ್ತಿಗೆ ಸಾರುತ್ತಾ ಹೋಗುವ ಗೀತೆ. ಇದು ೧೯೯೬ರಲ್ಲಿ ತೆರೆಕಂಡಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಜನುಮದ ಜೋಡಿ ಸಿನಿಮಾದಲ್ಲಿನ ಕೋಲುಮಂಡೆ ಎಲ್.ಎನ್ ಶಾಸ್ತಿç ಅವರ ಕಂಠದಿAದ ಮೂಡಿಬಂದಿದ್ದ ಈ ಹಾಡು ಬಹಳ ಜನಪ್ರಿಯವಾಗಿತ್ತು. ಈಗಲೂ ಕೂಡ ಈ ಗೀತೆ ಅದೇ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಕಾರಣ ಈ ಹಾಡಿಗೆ ಅಂದು ಜಾನಪದ ಶೈಲಿಯಲ್ಲಿಯೇ ನೃತ್ಯವನ್ನು ಸಂಯೋಜಿಸಲಾಗಿತ್ತು. ಆದರೆ ಈಗ ಚಂದನ್ ಶೆಟ್ಟಿ ತಂದಿರುವ ಅದೇ ಕೋಲುಮಂಡೆ ಜಂಗಮ ದೇವನು ಹಾಡಿನ ನೃತ್ಯ, ಗೀತೆ ರಚನೆ ಭಾರೀ ವಿವಾದಕ್ಕೆ ಸಿಲುಕಿದೆ.
ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ. ಈ ಹೊಸ ಹಾಡು ಈಗ ಬಿಸಿ, ಬಿಸಿ ಚರ್ಚೆಗೆ ಗ್ರಾಸವಾಗಿದೆ. ಮಹದೇಶ್ವರ ಇತಿಹಾಸ ತಿರುಚಿ ಹಾಡು ಚಿತ್ರಿಕರಿಸಲಾಗಿದೆ. ಶರಣೆ ಸಂಕಣ್ಣೆರನ್ನ ಅಶ್ಲಿಲವಾಗಿ ಪ್ರದರ್ಶಿಸಲಾಗಿದೆ. ಆ ಮೂಲಕ ಶರಣೆ ಸಂಕಣ್ಣೆರನ್ನ ಅವಮಾನಿಸಲಾಗಿದೆ. ಹಳೇ ಜಾನಪದ ಹಾಡೋಂದನ್ನ ತನ್ನ ಲಾಭಕ್ಕಾಗಿ ಬಳಸಿಕೊಂಡು ವಿಕೃತಿ ಮೆರೆದಿದ್ದಾರೆ. ಈ ಕೂಡಲೇ ಚಂದನ್ ಹಾಡಿರುವ ಕೊಲುಮಂಡೆ ಹಾಡನ್ನ ಯೂಟ್ಯೂಬ್ನಿಂದ ತೆಗೆಯಬೇಕು. ಇಲ್ಲವಾದಲ್ಲಿ ಚಂದನ್ಶೆಟ್ಟಿ ಮನೆ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಈ ಹಾಡನ್ನ ಯೂಟ್ಯೂಬ್ನಿಂದ ತೆಗೆಯದಿದ್ದರೇ ರಾಜ್ಯದಲ್ಲಿ ಅವರ ಕಾರ್ಯಕ್ರಮ ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಿವಾದ ಇದೇ ಮೊದಲಲ್ಲ: ರ್ಯಾಪರ್ ಚಂದನ್ ಶೆಟ್ಟಿ ಅವರು ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲಲ್ಲ, ಕಳೆದ ವರ್ಷ ದಸರಾದ ವೇಳೆ ನಿವೇದಿತಾಗೌಡರಿಗೆ ವೇದಿಕೆಯಲ್ಲಿಯೇ ಲವ್, ವಿವಾಹ ಪ್ರಪೋಸ್ ಮಾಡುವ ಮೂಲಕ ಸರ್ಕಾರಿ ಕಾರ್ಯಕ್ರಮದ ವೇದಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದು, ಸಾಕಷ್ಟು ವಿವಾದವೆಬ್ಬಿಸಿತ್ತು. ಆನಂತರ ಘಟನೆ ಬಗ್ಗೆ ಚಂದನ್ ಶೆಟ್ಟಿ ನಾಡಿನ ಜನರ ಕ್ಷಮೆಯಾಚಿಸಿದ್ದರು. ಇದಾದ ಬಳಿಕ ಮದ್ಯ ಸೇವೆಯ ಗುಂಡಿನ ಹಾಡುಗಳನ್ನು ಬರೆದು ಆಲ್ಬಂ ಹೊರತಂದಿದ್ದಕ್ಕೆ ಪೊಲೀಸರಿಂದ ನೋಟಿಸ್ ಪಡೆದು, ಎಚ್ಚರಿಕೆಗೆ ಗುರಿಯಾಗಿದ್ದರು. ಆದರೂ ಕೂಡ ಎಚ್ಚೆತ್ತುಕೊಳ್ಳದೆ ಇದೀಗ ಕೋಲುಮಂಡೆ ಹಾಡನ್ನು ರ್ಯಾಪರ್ ಶೈಲಿಗೆ ಅಳವಡಿಸಿ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದಾರೆ.