ಮುಂಬೈ: ಕೋವಿಡ್ಗೆ ಅತ್ಯಾಧುನಿಕ ಚಿಕಿತ್ಸೆ ಎನ್ನಲಾಗಿರುವ ಸ್ಟರಾಯ್ಡ್ ಎರಡು ಅಲಗಿನ ಕತ್ತಿಯಂತೆ. ಕೋವಿಡ್ ಗಂಭೀರ ಘಟ್ಟದಲ್ಲಿರುವ ರೋಗಿಗಳ ಪಾಲಿಗೆ ಸ್ಟಿರಾಯ್ಡ್ ಆಶಾಕಿರಣ ಸರಿ. ಆದರೆ ಕೋವಿಡ್ನ ಸಣ್ಣಪುಟ್ಟ ಲಕ್ಷಣಗಳಿರುವವರಿಗೆ ಇದನ್ನು ನೀಡಿದರೆ ಸೋಂಕು ಹಠಾತ್ ಉಲ್ಬಣಿಸುವ ಅಪಾಯವಿದೆ !
ಭಾರತದಲ್ಲಿ ಕೋವಿಡ್ನ ಆರಂಭಿಕ ಹಂತದಲ್ಲೇ ಅಥವಾ ಏಪ್ರಿಲ್ನಲ್ಲಿ ಸ್ಟಿರಾಯ್ಡ್ ಬಳಕೆ ಅಸ್ತಿತ್ವದಲ್ಲಿದೆ. ಡೆಕ್ಸಾಮೆಥಸೋನ್ ಅಥವಾ ಮೆಥಿಲ್ಪ್ರೆಡ್ನಿಸೋಲೋನ್ ಎಂಬ ಸ್ಟಿರಾಯ್ಡ್ ಪರಿಣಾಮಕಾರಿ ಔಷ ಎನ್ನಲಾದರೂ, ಗಂಭೀರ ಸ್ಥಿತಿಯಲ್ಲಿರುವ ಅಥವಾ ದೇಹಕ್ಕೆ ಅಥವಾ ದೇಹದ ಯಾವುದೋ ಒಂದು ಭಾಗಕ್ಕೆ ಸರಿಯಾಗಿ ಆಮ್ಲಜನಕ ಪೂರೈಕೆಯಾಗದೆ ಒದ್ದಾಡುವ ಸ್ಥಿತಿಯಲ್ಲಿರೋ ರೋಗಿಗೆ ಮಾತ್ರ ಇದು ಪೂರಕ. ಉಚ್ವಾಸ ಮೂಲಕ ಶರೀರಕ್ಕೆ ಪೂರೈಕೆಯಾಗುತ್ತಿರೋ ಆಮ್ಲಜನಕ ಪ್ರಮಾಣ ಶೇ.೯೪ಕ್ಕಿಂತಲೂ ಕಡಿಮೆಯಾಗಿರೋ ರೋಗಿಗಳಿಗೆ ಮಾತ್ರ ಇದನ್ನು ನೀಡಬಹುದು ಎಂದು ಕೋವಿಡ್ ಕಾರ್ಯಪಡೆಯ ಸದಸ್ಯರಾಗಿರುವ ಡಾ.ರಾಹುಲ್ ಪಂಡಿತ್ ಹೇಳುತ್ತಾರೆ.
ಪ್ರಥಮ ವಾರದಲ್ಲಿ ಕೋವಿಡ್ ಲಕ್ಷಣಗಳು ವಿಶೇಷವಾಗಿರುವುದಿಲ್ಲ. ದ್ವಿತೀಯ ವಾರದಲ್ಲಿ ಪರಿಸ್ಥಿತಿ ಗಂಭೀರವಾಗಿರುತ್ತದೆ. ಶಾರೀರಿಕ ಪ್ರತಿರೋಧ ಶಕ್ತಿ ಈ ಹಂತದಲ್ಲಿ ದುರ್ಬಲವಾಗಿರುತ್ತದೆ ಮತ್ತು ಇದೇ ಹಂತದಲ್ಲಿ ಸ್ಟಿರಾಯ್ಡ್ ಕೊಡಲಾಗುತ್ತದೆ. ಇದನ್ನು ನೀಡುವಾಗಲೂ ತೀರಾ ಎಚ್ಚರಿಕೆ ಮುಖ್ಯ. ಕೋವಿಡ್ ಲಕ್ಷಣ ಗೋಚರಿಸಿದ ಪ್ರಥಮ ವಾರದಲ್ಲೇ ರೋಗಿಗೆ ಸ್ಟಿರಾಯ್ಡ್ ಚುಚ್ಚಿದರೆ ಶ್ವಾಸಕೋಶದೊಳಗೆ ವೈರಸ್ ಸೋಂಕು ದುಪ್ಪಟ್ಟಾಗಿಬಿಡುತ್ತದೆ ಅಥವಾ ಶ್ವಾಸಕೋಶದಲ್ಲಿರಬಹುದಾದ ಅನ್ಯ ಬ್ಯಾಕ್ಟೀರಿಯಾಗಳ ಪ್ರಮಾಣ ದ್ವಿಗುಣಿಸುತ್ತದೆ. ಇದು ರೋಗಿಯ ಪ್ರಾಣಕ್ಕೇ ಗಂಡಾಂತರಕಾರಿ. ಕೆಲವು ಕಡೆ ಮನೆಯಲ್ಲೇ ಕ್ವಾರಂಟೈನ್ನಲ್ಲಿರುವವರಿಗೂ ಸ್ಟಿರಾಯ್ಡ್ ಶಿಫಾರಸು ಮಾಡುತ್ತಿರುವುದು ತೀರಾ ಆತಂಕದ ವಿಚಾರ. ಡಯಬಿಟೀಸ್ ಸಮಸ್ಯೆ ಇರುವವರಿಗೆ ಇದನ್ನು ನೀಡಿದರೆ ತೀರಾ ತೊಂದರೆ ಎಂದು ಶ್ವಾಸಕೋಶ ಕಾಯಿಲೆ ತಜ್ಞ ಡಾ.ಲ್ಯಾನ್ಸ್ಲಾಟ್ ಪಿಂಟೋ ಆತಂಕ ವ್ಯಕ್ತಪಡಿಸಿದ್ದಾರೆ.