Sunday, July 3, 2022

Latest Posts

ಕೋವಿಡ್‌ಗೆ ಹೆದರಿ, ಸಕಾಲದಲ್ಲಿ ಚಿಕಿತ್ಸೆಯೂ ಸಿಗದೆ ಸತ್ತ ಕಾಯಿಲೆಪೀಡಿತರ ಬಗ್ಗೆ ಇಲ್ಲಿಲ್ಲ ಲೆಕ್ಕ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೇರಳ ಸರಕಾರ ಅದೇನೇ ಸಬೂಬು ಹೇಳಿದರೂ, ರಾಜ್ಯದಲ್ಲಿ ಕಳೆದ ವರ್ಷ ಅಂದರೆ ೨೦೨೦ರಲ್ಲಿ ಹೆಚ್ಚಿನ ಸಂಖ್ಯೆಯ ಅಸೌಖ್ಯ ಪೀಡಿತ ವೃದ್ಧರು ಮತ್ತು ಅನ್ಯಾನ್ಯ ತೆರನಾದ ಕಾಯಿಲೆಪೀಡಿತರು ತಮ್ಮ ಮನೆಗಳಲ್ಲೇ ಸಾವನ್ನಪ್ಪಿದ್ದಾರೆ. ಕೋವಿಡ್ ಹಾವಳಿಯಿಂದಾಗಿ ರಾಜ್ಯದ ಬಹುತೇಕ ಆಸ್ಪತ್ರೆಗಳು ಕೋವಿಡ್ ಚಿಕಿತ್ಸಾ ಕೇಂದ್ರಗಳಾಗಿ ಮಾರ್ಪಾಡಾದ ಪರಿಣಾಮ, ಹಿರಿಯ ನಾಗರಿಕರು ಮತ್ತಿತರ ಕಾಯಿಲೆ ಪೀಡಿತರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಮನೆಗಳಲ್ಲೇ ಕೊನೆಯುಸಿರೆಳೆದಿದ್ದಾರೆಂಬ ಅಂಶವೀಗ ಬೆಳಕಿಗೆ ಬಂದಿದೆ.
ರಾಜ್ಯದ ಒಂದೆರಡು ಜಿಲ್ಲೆ ಹೊರತುಪಡಿಸಿದರೆ ಬಹುತೇಕ ಜಿಲ್ಲೆಗಳ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ವೃದ್ಧರು ಮತ್ತು ಬೇರೆ ಬೇರೆ ಕಾಯಿಲೆಪೀಡಿತರು ಮನೆಯಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗಳಿಗೆ ಹಿರಿಯರನ್ನು ಒಯ್ದರೆ ಕೋವಿಡ್ ಸೋಂಕು ಹರಡುವ ಭೀತಿ ಇದ್ದ ಕಾರಣ ಕುಟುಂಬ ಸದಸ್ಯರು ವೃದ್ಧರನ್ನು ಆಸ್ಪತ್ರೆಗೆ ಒಯ್ಯಲು ಹಿಂದೇಟು ಹಾಕಿದ್ದರು. ಇನ್ನೊಂದೆಡೆ ಕೋವಿಡೇತರ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಲು ಪರ್ಯಾಯ ವ್ಯವಸ್ಥೆ ಸರಕಾರದ ಕಡೆಯಿಂದ ಆಗದಿರುವುದು ಕೂಡ ಈ ತೆರ ಮನೆಗಳಲ್ಲೇ ಸಾವಿನ ಪ್ರಮಾಣ ಅಧಿಕವಾಗಲು ಕಾರಣವೆಂದು ವಿಶ್ಲೇಷಿಸಲಾಗಿದೆ.
ಕಳೆದ ವರ್ಷದ ಪ್ರತೀ ಸಾವನ್ನು ಕೋವಿಡ್‌ಗೆ ಜೋಡಿಸಿದ್ದರಿಂದ ಮತ್ತು ರಾಜಕೀಯ ನೆಲೆಯಲ್ಲೂ ಕೋವಿಡ್ ಸಾವುನೋವಿಗೇ ಮಹತ್ತ್ವ ನೀಡಿದ ಪರಿಣಾಮ, ಇತರ ಕಾಯಿಲೆಗಳಿಂದ ಮೃತಪಟ್ಟವರ ನಿಖರ ಸಂಖ್ಯೆ-ಅಂಕಿಅಂಶ ಅಲಭ್ಯವಾಗಿದೆ ಎಂಬುದು ಸಾರ್ವಜನಿಕ ಆರೋಗ್ಯಾಧಿಕಾರಿಯೋರ್ವರ ಆರೋಪ.
ಆರಂಭದಲ್ಲಿ ಕೇರಳ ಕೋವಿಡ್-೧೯ನಿರ್ವಹಣೆಯಲ್ಲಿ ಮಾದರಿ ಎಂಬಂತೆ ಬಿಂಬಿಸಿಕೊಂಡಿದ್ದರೆ, ಇಂದು ದೇಶದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕೋವಿಡ್ ಸೋಂಕಿತರನ್ನು ಹೊಂದುತ್ತಿರುವ ರಾಜ್ಯವಾಗಿ ಮಾರ್ಪಟ್ಟಿರುವುದಿಲ್ಲಿ ಉಲ್ಲೇಖನೀಯ.

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss