ಚಿಕ್ಕಮಗಳೂರು: ಕೊರೋನಾ ಸೋಂಕಿನಿಂದ ಸಾವಿಗೀಡಾಗುವವರ ಶವ ಸಂಸ್ಕಾರದ ಮಾರ್ಗಸೂಚಿಯನ್ನು ಸರ್ಕಾರ ಬದಲಾಯಿಸುವ ಸಾಧ್ಯತೆ ಇದ್ದು, ರಾಜ್ಯಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆ ಚರ್ಚಿಸಿ ಈ ಬಗ್ಗೆ ತೀರ್ಮಾನಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಸಂಬಂಧ ತಾವು ಸಹ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳೊಂದಿಗೆ ಮಾತನಾಡಿದ್ದೇವೆ. ಶವದ ಮುಖ ನೋಡುವುದರಿಂದ ಕೊರೋನಾ ಬರುವುದಿಲ್ಲ. ಅದಕ್ಕೆ ಅವಕಾಶ ಕೊಡದಿರುವುದು ಮಾನವೀಯತೆ ಅಲ್ಲ ಎಂದು ನ್ಯಾಯಾಲಯ ಸಹ ನಿರ್ದೇಶನ ನೀಡಿದೆ. ಸದ್ಯಕ್ಕೆ ಐಸಿಎಂಆರ್ ಮತ್ತು ಡಬ್ಲ್ಯುಹೆಚ್ಒ ಮಾರ್ಗಸೂಚಿ ಜಾರಿಯಲ್ಲಿದೆ. ಈ ಕಠಿಣ ಕ್ರಮ ಬದಲಾವಣೆ ಆಗುವ ಅಗತ್ಯವಿದೆ ಎಂದರು.
ಕೋವಿಡ್ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಹಿಂದೆ ತಾವು ಹೇಳಿದಂತೆ ತಂಡವೊಂದನ್ನು ರಚನೆ ಮಾಡಿದ್ದೇವೆ. ಶವ ತೆಗೆದುಕೊಂಡು ಹೋಗಲು ಯಾರೂ ಮುಂದೆ ಬರದಿದ್ದಲ್ಲಿ ಅಂತಹ ಶವಗಳಿಗೆ ನಮ್ಮ ತಂಡ ಅಂತ್ಯ ಸಂಸ್ಕಾರ ನೆರವೇರಿಸಲಿದೆ ಎಂದರು.
ಕೋವಿಡ್ ಸಂಬಂಧಿತ ಕೆಲಸಗಳ ಒತ್ತಡದಿಂದಾಗಿ ಆರೋಗ್ಯ ಸಿಬ್ಬಂದಿ ರಾಜೀನಾಮೆ ನೀಡಲು ಮುಂದಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸೈನಿಕರು ವಿಜೃಂಭಿಸುವುದು ಯುದ್ಧದಲ್ಲಿ. ಅವರೇ ಬೆನ್ನು ತೋರಿಸುವ ಕೆಲಸ ಮಾಡಿದರೆ ಸೈನಿಕರೆನಿಸುವುದಿಲ್ಲ. ಹಾಗೆಯೇ ಅವರ ಬೇಡಿಕೆ ಪಟ್ಟಿಯನ್ನಿಡಲು ಇದು ಸಂದರ್ಭವೂ ಅಲ್ಲ. ಯುದ್ಧ ಬಂದಾಗ ಸೈನಿಕರು ಚಳುವಳಿ ಕುಳಿತರೆ ದೇಶ ಉಳಿಯೋಲ್ಲ. ಕೋವಿಡ್ನಂತಹ ಸಂದರ್ಭದಲ್ಲಿ ವೈದ್ಯ ಸಿಬ್ಬಂದಿ ಚಳುವಳಿ ಕುಳಿತರೆ ಆರೋಗ್ಯ ವ್ಯವಸ್ಥೆ ಉಳಿಯುವುದಿಲ್ಲ. ಈ ರೀತಿ ಮಾಡುವುದು ಒಂದು ಬ್ಲ್ಯಾಕ್ಮೇಲ್ ಆಗುತ್ತದೆ. ಈಗಾಗಲೇ ಒತ್ತಡದ ಕೆಲಸಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡುತ್ತಿದ್ದೇವೆ ಎಂದರು.