ಹುಬ್ಬಳ್ಳಿ: ‘ಕೋವಿಡ್–19 ಆತಂಕವನ್ನು ಲೆಕ್ಕಿಸದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಲವು ರಚನಾತ್ಮಕ ಕೆಲಸಗಳನ್ನು ಮಾಡುತ್ತಿದೆ’ ಎಂದು ಪರಿಷತ್ನ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ್ ಜೀ ಹೇಳಿದರು.
ನಗರದಲ್ಲಿ ಶುಕ್ರವಾರ ನಡೆದ ಪರಿಷತ್ನ ಪ್ರಾಂತ ಕಾರ್ಯ ಸಮಿತಿ ಬೈಠಕ್ನಲ್ಲಿ ಮಾತನಾಡಿದ ಅವರು, ‘ಕೊರೊನಾ ನಡುವೆಯೂ ಮಾಸ್ಕ್, ದಿನಸಿ, ಮೆಡಿಕಲ್ ಕಿಟ್ಗಳ ವಿತರಣೆ ಸೇರಿದಂತೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿ ಮತ್ತು ಕೃಷಿ ಮಸೂದೆ ದೇಶದ ಚಹರೆ ಬದಲಿಸಬಲ್ಲವು. ಇವುಗಳ ಬಗ್ಗೆ ವ್ಯಾಪಕ ಸುಳ್ಳು ಪ್ರಚಾರ ನಡೆಯುತ್ತಿದೆ. ಹಾಗಾಗಿ, ಪರಿಷತ್ ಇವುಗಳ ನಿಜಾಂಶಗಳೊಂದಿಗೆ, ಅವುಗಳ ಮಹತ್ವವನ್ನು ಜನರಿಗೆ ತಲುಪಿಸುವ ಜಾಗೃತಿ ಕಾರ್ಯವನ್ನು ಮಾಡಬೇಕಿದೆ’ ಎಂದು ಕರೆ ನೀಡಿದರು.
ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣ್ ಮಾತನಾಡಿ, ‘ಬದಲಾದ ಕಾಲಕ್ಕೆ ತಕ್ಕಂತೆ, ಕೊರೊನಾದಂತಹ ಸವಾಲಿನ ನಡುವೆಯೇ ರಚನಾತ್ಮಕವಾಗಿ ಸಂಘಟನೆಯನ್ನು ಮುಂದಕ್ಕೆ ಕೊಂಡೊಯ್ಯಬೇಕಿದೆ’ ಎಂದು ತಿಳಿಸಿದರು.
‘ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಸೇರಿದಂತೆ ವಿವಿಧ ಶೈಕ್ಷಣಿಕ ಚಟುವಟಿಕೆಗಳಿಗೆ ಪರಿಷತ್ ಬೆಂಬಲ ಸೂಚಿಸಿ, ಯಶಸ್ಸಿಗೆ ಶ್ರಮಿಸಿದೆ. ವೈದ್ಯಕೀಯ ಶಿಕ್ಷಣದ ಶುಲ್ಕ ಹೆಚ್ಚಳದ ವಿರುದ್ಧ ದನಿ ಎತ್ತಿದೆ. ಡ್ರಗ್ಸ್ ದಂಧೆ ಕಡಿವಾಣಕ್ಕೆ ಸರ್ಕಾರವನ್ನು ಒತ್ತಾಯಿಸುವ ಜತೆಗೆ, ಜಾಗೃತಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ’ ಎಂದರು.
ಪರಿಷತ್ನ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಬಾಳಿಕಾಯಿ, ‘ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದತ್ತ ಪರಿಷತ್ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿದೆ. ಅದಕ್ಕಾಗಿ ವಿಶ್ವವಿದ್ಯಾಲಯ, ಕಾಲೇಜು, ಹಾಸ್ಟೆಲ್ಗಳ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ನಡೆಯಬೇಕಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ಮಾರಕವಾಗುವಂತಹ ವಿಷಯಗಳ ಬಗ್ಗೆ ಜಾಗೃತಿ ಜತೆಗೆ, ಪ್ರತಿಭಟನೆಯನ್ನು ದಾಖಲಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಪರಿಷತ್ನ ಪ್ರಾಂತ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಮೀಸೆ, ರಾಜ್ಯ ಕಾರ್ಯದರ್ಶಿ ಪ್ರತೀಕ್ ಮಾಳಿ, ಸಹ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ್, ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರುಳಾಪುರ ಇದ್ದರು.