ಹೊಸ ದಿಗಂತ ಆನ್ ಲೈನ್ ಡೆಸ್ಕ್
ಗುಜರಾತ್ನ ರಾಜ್ಕೋಟ್’ನ ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಐದು ಮಂದಿ ಕೊರೋನಾ ಸೋಂಕಿತರು ದಹನಗೊಂಡಿದ್ದಾರೆ.
ಶುಕ್ರವಾರ ನಸುಕಿನಲ್ಲಿ ರಾಜ್ಕೋಟ್ನ ಸರ್ದಾರ್ ನಗರದ ಮಾವಡಿಯಲ್ಲಿನ ಶಿವಾನಂದ ಜನರಲ್ ಆಂಡ್ ಮಲ್ಟಿಸ್ಪೆಷಾಲಿಟಿ ಟ್ರಸ್ಟ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಈ ಆಸ್ಪತ್ರೆಯನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆಂದು ಮೀಸಲಿರಿಸಲಾಗಿದ್ದು, ಬೆಂಕಿ ಅವಘಡ ಸಂಭವಿಸಿದ ಸಂದರ್ಭದಲ್ಲಿ 11 ರೋಗಿಗಳು ಐಸಿಯುದೊಳಗೆ ಇದ್ದರು. ಒಟ್ಟು 33 ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬೆಂಕಿ ಅವಘಡದಿಂದಾಗಿ ಐದು ಮಂದಿ ಕೊರೋನಾ ಸೋಂಕಿತರು ದಹನಗೊಂಡಿದ್ದಾರೆ.
ಮೊದಲು ಬೆಂಕಿ ಆಸ್ಪತ್ರೆಯಲ್ಲಿನ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಕಾಣಿಸಿಕೊಂಡಿದೆ. ಬಳಿಕ ಇತರೆ ಭಾಗಗಳಿಗೂ ಆವರಿಸಿದೆ. ಕಿಟಕಿ ಮೂಲಕ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೋಂಕಿತರನ್ನು ರಕ್ಷಣೆ ಮಾಡಿದ್ದಾರೆ. ಬೆಂಕಿ ಏಕಾಏಕಿ ವ್ಯಾಪಿಸಿದ್ದು, ದಟ್ಟ ಹೊಗೆ, ಬೆಂಕಿಯ ಕೆನ್ನಾಲಗೆಯಿಂದ ಸೋಂಕಿತರು ಹೊರ ಬರಲು ಸಾಧ್ಯವಾಗಿಲ್ಲ. ಇದರಿಂದಾಗಿ 5 ಮಂದಿ ಸಾವನ್ನಪ್ಪಿದ್ದಾರೆ.
ಈ ಹಿಂದೆಯೂ ಗುಜರಾತ್ನ ಕೆಲವು ಆಸ್ಪತ್ರೆಗಳಲ್ಲಿ ಇಂತಹ ಅವಘಡಗಳು ಸಂಭವಿಸಿದ್ದವು. ಆಗಸ್ಟ್ 6 ರಂದು ಅಹಮದಾಬಾದ್ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.