ವಾಷಿಂಗ್ಟನ್: ಕೋವಿಡ್ ಮಹಾಮಾರಿ ವಿಶ್ವದ ದೊಡ್ಡಣ್ಣ ಅಮೆರಿಕಗೇ ನಡುಕ ಹುಟ್ಟಿಸಿದೆ.
ಕಳೆದ ೩ ವಾರಗಳ ಅವಧಿಯಲ್ಲಿ ಅಮೇರಿಕದಲ್ಲಿ ಬರೋಬ್ಬರಿ 1.68 ಕೋಟಿ ಉದ್ಯೋಗಗಳು ನಷ್ಟವಾಗಿದ್ದು, ವಿಶ್ವದ ದೊಡ್ಡಣ್ಣನ ಅರ್ಥ ವ್ಯವಸ್ಥೆ ಸಂಪೂರ್ಣ ಹಳಿತಪ್ಪಿದೆ. ಅಮೆರಿಕದ ಕಾರ್ಮಿಕ ಸಚಿವಾಲಯ ಗುರುವಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಕಳೆದ ವಾರದಲ್ಲಿಯೇ ಸುಮಾರು 6.6 ಮಿಲಿಯ ಮಂದಿ ನಿರುದ್ಯೋಗ ಭತ್ಯೆಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಮಾರ್ಚ್ ತಿಂಗಳ ಕೊನೆಯ ಎರಡು ವಾರಗಳಲ್ಲಿ 1 ಕೋಟಿ ಮಂದಿ ನಿರುದ್ಯೋಗ ಭತ್ಯೆಗೆ ಅರ್ಜಿ ಹಾಕಿದ್ದಾರೆ. ಈ ಪೈಕಿ ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳೇ ಹೆಚ್ಚಾಗಿದ್ದಾರೆ.
ಅಮೆರಿಕದ 50 ಪ್ರಾಂತ್ಯಗಳ ಪೈಕಿ 48ರಲ್ಲಿ ಲಾಕ್ಡೌನ್ ಇದೆ. ರೆಸ್ಟಾರೆಂಟ್ಗಳು, ಹೊಟೇಲ್ಗಳು, ಸಣ್ಣ ಪ್ರಮಾಣದ ಉದ್ದಿಮೆಗಳು, ಡಿಪಾರ್ಟ್ಮೆಂಟಲ್ ಸ್ಟೋರ್ಗಳ ಮಾಲೀಕರು ಮತ್ತು ಆಡಳಿತ ವರ್ಗ ಈಗಾಗಲೇ ಉದ್ಯೋಗಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಿವೆ.
ಅಮೆರಿಕದಲ್ಲಿ ಕನಿಷ್ಠ 11 ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ. ಕರ್ನಾಟಕದ ವ್ಯಕ್ತಿ ಸೇರಿದಂತೆ ಇನ್ನೂ 16 ಮಂದಿಗೆ ಸೋಂಕು ದೃಢಪಟ್ಟಿದೆ. ಈಗಾಗಲೇ ಅಮೆರಿಕದಾದ್ಯಂತ 14 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. 5 ಲಕ್ಷ ಅಧಿಕ ಜನರು ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.