ಹಾವೇರಿ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಕೈಗೊಳ್ಳಲಾಗಿದೆ. ಆದಾಗ್ಯೂ ಜಿಲ್ಲೆಯ ಕೋವಿಡ್ ಆಸ್ಪತ್ರೆಯ ಆಕ್ಸಿಜನ್ ಸೌಲಭ್ಯ ಸೇರಿದಂತೆ ವೈದ್ಯಕೀಯ ಸೌಲಭ್ಯಗಳನ್ನು ಪೂರ್ಣಪ್ರಮಾಣದಲ್ಲಿ ಬಳಕೆಮಾಡಿಕೊಳ್ಳಲು ಮಾನವ ಸಂಪನ್ಮೂಲದ ಕೊರತೆ ಇದ್ದು, ತಜ್ಞವೈದ್ಯರು ಹಾಗೂ ಮೈಕ್ರೋಬಯಾಲಜಿಸ್ಟ್ ನೇಮಕಾತಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.
ಕೋವಿಡ್ ನಿಯಂತ್ರಣ ಹಾಗೂ ಮಳೆ ಹಾನಿ ಕುರಿತಂತೆ ಹಾವೇರಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಆರೋಗ್ಯಾಧಿಕಾರಿಗಳೊಂದಿಗೆ ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹಕಚೇರಿ ಬಿ.ಎಸ್.ಯಡಿಯೂರಪ್ಪ ಅವರು ವಿಡಿಯೋ ಸಂವಾದ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಹಾವೇರಿಯ ಮಾಹಿತಿ ಪಡೆಯುವ ಸಂದರ್ಭದಲ್ಲಿ ಜೊತೆಗಿದ್ದ ಗೃಹ ಸಚಿವರು ಮಾತನಾಡಿ, ಜಿಲ್ಲೆಗೆ ಬೆಂಗಳೂರಿನಿಂದ ವೈದ್ಯಕೀಯ ತಂಡ ಭೇಟಿ ನೀಡಿ ವರದಿ ಮಾಡಿರುವ ಅನುಸಾರ ಹಾವೇರಿಗೆ ಅಗತ್ಯವಾದ ವೈದ್ಯರು ಹಾಗೂ ತಜ್ಞವೈದ್ಯರ ನೇಮಕಾತಿ ಮಾಡಬೇಕು. ಎಕ್ಸರೇ ಯಂತ್ರಗಳನ್ನು ಪೂರೈಸಬೇಕು. ಆರ್.ಟಿ.ಪಿ.ಆರ್. ಲ್ಯಾಬ್ಗೆ ಮೈಕ್ರೋಬಯಾಲಜಿಸ್ಟ್ ನೇಮಕಗೊಳಿಸುವಂತೆ ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಮಳೆಹಾನಿ ಮತ್ತು ನೆರೆಯಿಂದ ಹಾನಿಯಾದ ಬೆಳೆನಷ್ಟ ಹಾಗೂ ಮನೆ ಹಾನಿಗಳ ಪರಿಷ್ಕೃತ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಕೋವಿಡ್ ನಿಯಂತ್ರಣ ಹಾಗೂ ಮಳೆಹಾನಿ ಮಾಹಿತಿಯನ್ನು ಮಾನ್ಯಮುಖ್ಯಮಂತ್ರಿಗಳಿಗೆ ವಿವರಿಸಿದ ಜಿಲ್ಲಾಧಿಕಾರಿ ಕೋವಿಡ್ನಿಂದ ಮರಣಹೊಂದುವ ಪ್ರಮಾಣವನ್ನು ಗಣನೀಯವಾಗಿ ಇಳಿಮುಖಗೊಳ್ಳುತ್ತಿದೆ. ಮತ್ತಷ್ಟು ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ತಜ್ಞವೈದ್ಯರ ಕೊರೆತೆ ಕಾಡುತ್ತಿದ್ದು, ಜಿಲ್ಲೆಗೆ ತಜ್ಞವೈದ್ಯರ ನೇಮಕಮಾಡುವಂತೆ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮನವಿ ಮಾಡಿಕೊಂಡರು.
ಆಗಸ್ಟ್ ತಿಂಗಳಲ್ಲಿ ಶೇ.೩೩ ರಷ್ಟು ಪ್ರತಿಶತ ಹೆಚ್ಚು ಮಳೆಯಾಗಿದೆ. ವಿಶೇಷವಾಗಿ ಜಿಲ್ಲೆಯ ಶಿಗ್ಗಾಂವ, ಹಾನಗಲ್, ಸವಣೂರಿನಲ್ಲಿ ಹೆಚ್ಚು ಮಳೆಗಾಳಿಯಿಂದ ಮನೆ ಹಾನಿಯಾಗಿದೆ. ೨೭೧೫ ಹೆಕ್ಟೇರ್ ಕೃಷಿ ಬೆಳೆ, ೬೫೦ ಎಕರೆ ತೋಗಾರಿಕೆ ಬೆಳೆ, ೧೫೨೦ ಮನೆಗಳ ಹಾನಿ ಉಂಟಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಜಿ.ಪಂ ಸಿಇಓ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಎಎಸ್ಪಿ ಮಲ್ಲಿಕಾರ್ಜುನ ಬಲದಂಡಿ, ಉಪವಿಭಾಗಾಧಿಕಾರಿಗಳಾದ ಡಾ.ದಿಲೀಷ್ ಶಶಿ, ಡಿಹೆಚ್ಓ ಡಾ.ರಾಜೇಂದ್ರ ದೊಡ್ಮನಿ, ಡಿಎಸ್ ಡಾ.ಪಿ.ಆರ್.ಹಾವನೂರ, ಕೃಷಿ ಜಂಟಿ ನಿರ್ದೇಶಕ ಡಿ.ಮಂಜುನಾಥ್, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವೀರೇಂದ್ರ ಇತರರು ಉಪಸ್ಥಿತರಿದ್ದರು.