Thursday, July 7, 2022

Latest Posts

ಕೋವಿಡ್ ನಿಯಂತ್ರಣ ಸಂಬಂಧಿಸಿದ ಖರ್ಚು ವೆಚ್ಚ ಕುರಿತು ಶ್ವೇತಪತ್ರ: ಕೆಪಿಸಿಸಿ ಕಾರ್ಯಾಧ್ಯಕ್ಷ ಒತ್ತಾಯ

ಮಂಗಳೂರು: ರಾಜ್ಯದಲ್ಲಿ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪವಿದೆ. ಈ ಬಗ್ಗೆ ತನಿಖೆಗೆ ಅವಕಾಶ ನೀಡುವಂತೆ ಸರಕಾರವನ್ನು ಕೇರಿಕೊಂಡರೂ ಅದಕ್ಕೆ ನಿರಾಕರಿಸುವ ಮೂಲಕ ತಪ್ಪನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಲಾಗುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಖರ್ಚು ವೆಚ್ಚಗಳ ಕುರಿತು ಸರಕಾರ ಶ್ವೇತಪತ್ರ ಬಿಡುಗಡೆಗೊಳಿಸಬೇಕು…
ಇದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರ ಆರೋಪ ಮತ್ತು ಒತ್ತಾಯ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು ಸೇರಿದಂತೆ ಜನ ಸಮುದಾಯದ ಸಂಕಷ್ಟಗಳ ಬಗ್ಗೆ ಸರಕಾರ ಕಣ್ಣು , ಕಿವಿ ಇಲ್ಲದಂತೆ, ಹೃದಯ ಶೂನ್ಯವಾಗಿ ವರ್ತಿಸುತ್ತಿದೆ. ರಾಜ್ಯಕ್ಕೆ ೫೦,೦೦೦ ಕೋಟಿ ವಿಶೇಷ ಪ್ಯಾಕೇಜ್ ನೀಡುವಂತೆ ವಿನಂತಿಸಿದ್ದರೂ, ಯಾವುದೇ ಪ್ರಯತ್ನ ಆಗಿಲ್ಲ.
ಕೋವಿಡ್ ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿ ಪ್ರತಿಪಕ್ಷವಾಗಿ ಕಾಂಗ್ರೆಸ್ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಪಕ್ಷದ ಮುಖಂಡರು ಸರಕಾರಕ್ಕೆ ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಿದ್ದರೂ ಸರಕಾರ ಮಾತ್ರ ಅದನ್ನು ಒಪ್ಪಿಲ್ಲ. ಬದಲಾಗಿ ಆರೋಗ್ಯ, ಶಿಕ್ಷಣ ಸಚಿವರ ನಡುವೆ ಕಚ್ಚಾಟ ನಡೆಯುತ್ತಿದೆ  ಎಂದು ಅವರು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಸಮಾರಂಭವನ್ನು ಐತಿಹಾಸಿಕ ಕಾರ್ಯಕ್ರಮವಾಗಿಸಲು ಸಿದ್ಧತೆಗಳು ನಡೆದಿದೆ. ಈ ಮೂಲಕ ಬೂತ್ ಮಟ್ಟದಿಂದ ಪಕ್ಷ ಬಲವರ್ಧನೆಗೆ ಕಾರ್ಯಕ್ರಮ ರೂಪಿಸಲಾಗಿದೆ. ಬೂತ್‌ಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳನ್ನು ಜಿಪಿಎಸ್ ಮೂಲಕ ಕೆಪಿಸಿಸಿಗೆ ಲಿಂಕ್ ಮಾಡಿಕೊಂಡು ಮೇಲ್ವಿಚಾರಣೆ ಮಾಡುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ದೇಶದ ಕೋಟಿಗಟ್ಟಲೆ ಜನತೆ ಹಾಗೂ ಲಕ್ಷಾಂತರ ಕಾರ್ಯಕರ್ತರು ಸಾಕ್ಷಿಯಾಗುವಂತೆ ಯೋಜನೆ ರೂಪಿಸಲಾಗಿದೆ. ಪಂಚಾಯತ್, ಬ್ಲಾಕ್, ವಾರ್ಡ್ ಸೇರಿದಂತೆ ದ.ಕ. ಜಿಲ್ಲೆಯ ೩೦೦ ಕಡೆ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಎಲ್ಲಾ ಕಡೆ ಏಕಕಾಲದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅದು ನೇರ ಪ್ರಸಾರವಾಗಲಿದೆ ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಹರೀಶ್ ಕುಮಾರ್,  ಮಾಜಿ ಶಾಸಕರಾದ ಮೊಯ್ದೀನ್ ಬಾವ, ಜೆ.ಆರ್. ಲೋಬೊ, ಮುಖಂಡರಾದ ಜಿ.ಎ. ಬಾವಾ, ಶಶಿಧರ ಹೆಗ್ಡೆ, ಮಂಜುನಾಥ ಭಂಡಾರಿ, ಬಿ. ಇಬ್ರಾಹಿಂ, ಟಿ.ಎಂ. ಶಹೀದ್, ದಿನೇಶ್ ಆಳ್ವ, ಶುಭೋದಯ ಆಳ್ವ, ಬಲರಾಜ್ ಉಪಸ್ಥಿತರಿದ್ದರು.
*ಬಿಜೆಪಿ ಕಚ್ಚಾಟ:
ರಾಜ್ಯದಲ್ಲಿ ಪ್ರತಿಪಕ್ಷವಾಗಿ ಕಾಂಗ್ರೆಸ್ ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿದ್ದರೆ, ಬಿಜೆಪಿಯ ಶಾಸಕರು ಅಧಿಕಾರ, ಮಂತ್ರಿಗಿರಿಯ  ಕಚ್ಚಾಟದಲ್ಲಿದ್ದಾರೆ ಎಂದು ಬಿಜೆಪಿ ಶಾಸಕರು ಪತ್ಯೇಕ ಸಭೆ ನಡೆಸುತ್ತಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಸಲೀಂ ಅಹ್ಮದ್ ಪ್ರತಿಕ್ರಿಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss