ರಾಮನಗರ: ಸರ್ಕಾರದ ಬೇಜವಾಬ್ದಾರಿ, ಆಸ್ಪತ್ರೆಗಳ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರು ಕರೋನಾದಿಂದ ಸಾವನ್ನಪಿರುವುದು ಸರ್ಕಾರದ ಅಸಮರ್ಥತೆಯೇ ಕಾರಣ, ಕೂಡಲೇ ಕೋವಿಡ್ ಬಗ್ಗೆ ಉನ್ನತಮಟ್ಟದ ತನಿಖೆಗೆ ಸರ್ಕಾರ ಆದೇಶಿಸಬೇಕೆಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜು ಆಗ್ರಹಿಸಿದರು.
ನಗರದ ಐಜೂರು ವೃತ್ತದಲ್ಲಿ ಶನಿವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಅವರು ಕರೋನಾದಿಂದ ರಾಜ್ಯದ ಜನರನ್ನು ರಕ್ಷಿಸಿ ಎಂಬ ಘೋಷಣೆ ಕೂಗಿ ಮಾತನಾಡಿ ರಾಜ್ಯದ ಜನರು ಕೋವಿಡ್ ನಿಂದ ಗಂಭೀರವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಕರೋನ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸ್ಪಂದಿಸುತ್ತಿಲ್ಲ, ಸಂಕಷ್ಠದಲ್ಲಿರುವ ರೋಗಿಗಳಿಗೆ ಸರಿಯಾಗಿ ಸ್ಪಂದಿಸಲಿಲ್ಲ. ಇದರ ಪರಿಣಾಮ ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರದಲ್ಲಿ ಇಬ್ಬರು ಆರೋಗ್ಯ ಸಚಿವರು ಒಂದೆಡೆ ಕುಳಿತು ಚರ್ಚೆ ನಡೆಸಿ ಕರೋನಾ ನಿಯಂತ್ರಣಕ್ಕೆ ಕ್ರಮ ವಹಿಸುವಲ್ಲಿ ಯಶಸ್ವಿಯಾಗಲಿಲ್ಲ, ಹೆಸರಿಗೆ ಮಾತ್ರ ಇಬ್ಬರು ಸಚಿವರು,ಆದರೆ ಸಚಿವ ಸಂಪುಟದಲ್ಲಿ ಶ್ರೀರಾಮುಲು. ಸುಧಾಕರ್, ಆರ್.ಅಶೋಕ್, ಸುರೇಶ್ ಕುಮಾರ್ ಸೇರಿದಂತೆ ನಾಲ್ವರು ಆರೋಗ್ಯ ಸಚಿವರಿದ್ದಾರೆ, ಇವರನ್ನೇ ನಂಬಿರುವ ಮುಖ್ಯಮಂತ್ರಿ ಯಡಿಯೂರಪ್ಪ ಕರೋನಾ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯನ್ನು ಪಾಲಿಸುವ ಸ್ಥಿತಿಯಲ್ಲಿ ಯಾವುದೇ ಮಂತ್ರಿಗಳಿಲ್ಲ. ಅಲ್ಲದೆ ಬೆರಳೆಣಿಕೆ ಮಂದಿಗೆ ಮಾತ್ರ ಮಂತ್ರಿಸ್ಥಾನವನ್ನು ನಿರ್ವಹಿಸುವ ಶಕ್ತಿ ಇದೆ. ಇದು ರಾಜ್ಯದ ಜನರ ದುರಂತವಾಗಿದ್ದು, ಮಂತ್ರಿಮಂಡಲ ಪುನರಚನೆ ಮಾಡಬೇಕು. ರಾಜ್ಯದಲ್ಲಿ ಕರೋನಾದಿಂದ ಮರಣ ಹೊಂದಿರುವ ಪ್ರತಿ ವ್ಯಕ್ತಿಗೆ ಸರ್ಕಾರ 5 ಲಕ್ಷ ಪರಿಹಾರ ಘೋಷಣೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯ ಸರ್ಕಾರ ಕುಂಭಕರ್ಣ ನಿದ್ರೆಗೆ ಜಾರಿದ್ದು, ವಿಧಾನಸೌಧದಿಂದ ಮಣಿಪಾಲ್ ಆಸ್ಪತ್ರೆಗೆ ಆಡಳಿತಯಂತ್ರ ಸಿಪ್ಟ್ ಆಗಿದೆ. ಸಿಎಂ, ಅಧಿಕಾರಿಗಳು, ಪೋಲೀಸರಿಗೂ ಸೋಂಕು ಹರಡಿದೆ. ಕೂಡಲೇ ಕರೋನಾ ನಿಯಂತ್ರಣ ಮಾಡುವ ವಿಚಾರದಲ್ಲಿ ವಿಫಲರಾಗಿರುವ ಸರ್ಕಾರ 15 ದಿನಗಳ ಒಳಗೆ ತನಿಖೆಗೆ ಆದೇಶಿಸಬೇಕು. ಇಲ್ಲದಿದ್ದರೆ ರಾಜ್ಯದ್ಯಾಂತ ಸರ್ಕಾರದ ವಿರುದ್ದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಕೊಡಗು, ಉತ್ತರ ಕರ್ನಾಟಕದ ಭಾಗದ ಜನರು ತತ್ತರಿಸಿ ಹೋಗಿದ್ದಾರೆ, ಕಳೆದ ವರ್ಷ ಸಂಕಷ್ಠಕೀಡಾದ ಜನತೆಗೆ ಇದುವರೆವಿಗೂ ಪರಿಹಾರ ನೀಡಿಲ್ಲ, ಇನ್ನೊಂದು ವಾರದೊಳಗೆ ಬೆಳಗಾವಿ ಸೇರಿದಂತೆ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಜನರಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದ ಅವರು ರಾಜ್ಯ ಸರ್ಕಾರ ಎಲ್ಲ ರಂಗದಲ್ಲೂ ವಿಫಲವಾಗಿದ್ದು, ಉತ್ತರ ಕರ್ನಾಟಕ ಭಾಗದ ಶಾಸಕರು, ಮಂತ್ರಿಗಳು, ಜನರ ಕಷ್ಟ ಸುಖ ಕೇಳುತ್ತಿಲ್ಲ, ಕೂಡಲೇ ಈ ಭಾಗದ ಶಾಸಕರು, ಮಂತ್ರಿಗಳು ಸಾಮೂಹಿಕ ರಾಜೀನಾಮೆ ನೀಡಬೇಕು, ಈ ಕೂಡಲೇ ಕೇಂದ್ರ ಸರ್ಕಾರ ಮದ್ಯಪ್ರವೇಶಿಸಿ ರಾಜ್ಯದ ಜನರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್, ಜಿಲ್ಲಾಧ್ಯಕ್ಷ ಸಿ.ಎಸ್.ಜಯಕುಮಾರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗಾಯಿತ್ರಿಬಾಯಿ, ಪದಾಧಿಕಾರಿಗಳಾದ ತ್ಯಾಗರಾಜು, ಎಸ್.ಬಿ.ಎಂ. ಲೋಕೇಶ್, ಮರಿಸ್ವಾಮಿ, ಪಿ.ಸುರೇಶ್, ನಾರಾಯಣಸ್ವಾಮಿ, ಪಾರ್ಥಸಾರಥಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.