ಚಿಕ್ಕಮಗಳೂರು: ಗಿರಿ ತಪ್ಪಲಿನ ತಾಣಗಳು ಎರಡು ದಿನಗಳಿಂದ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದು, ಕೋವಿಡ್ ನಿಯಮಗಳಿಗೆ ಡೋಂಟ್ ಕೇರ್ ಎನ್ನುವ ರೀತಿ ಮೋಜು ಮಸ್ತಿಯಲ್ಲಿ ತೊಡಗಿರುವುದು ಕಂಡುಬಂದಿದೆ.
ಕೊರೋನಾ ಕಾರಣಕ್ಕೆ ಸಂಪೂರ್ಣ ನೆಲಕಚ್ಚಿರುವ ಜಿಲ್ಲೆಯ ಆರ್ಥಿಕತೆಗೆ ಪ್ರವಾಸೋದ್ಯಮದಿಂದ ಮತ್ತೆ ಚೇತರಿಕೆ ಕಂಡು ಬರುವಂತಾಗಿದ್ದರೂ, ವೀಕೆಂಡ್ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸುಶಿಕ್ಷಿತ ಐಟಿ, ಬಿಟಿ ಕ್ಷೇತ್ರದ ಪ್ರವಾಸಿಗರೇ ಕೋವಿಡ್ ನಿಯಮಗಳನ್ನು ಗಾಳಿಗೆ ತೂರುತ್ತಿರುವುದ ಬಗ್ಗೆ ಸ್ಥಳೀಯರ ಆಕ್ರೋಷಕ್ಕೆ ಕಾರಣವಾಗುತ್ತಿದೆ.
ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ನಡುವೆ ಕೋವಿಡ್ ಹಾಟ್ಸ್ಪಾಟ್ಗಳೆಂದು ಗುರುತಿಸಲ್ಪಟ್ಟ ಬೆಂಗಳೂರು ಸೇರಿದಂತೆ ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಿಂದಲೂರು ಕಳೆದ ಮೂರ್ನಾಲ್ಕು ವಾರಗಳಿಂದ ಪ್ರವಾಸಿಗರು ಜಿಲ್ಲೆಗೆ ಭೇಟಿ ಕೊಡುತ್ತಿದ್ದಾರೆ. ಹೆಚ್ಚಿನವರು ಮಾಸ್ಕ್ ಧರಿಸದಿರುವುದು, ಅಂತರ ಕಾಯ್ದುಕೊಳ್ಳದಿರುವುದು, ವಾಹನದ ತುಂಬ ಮಕ್ಕಳು ಮರಿಯನ್ನು ತುಂಬಿಕೊಂಡು ಬರುತ್ತಿದ್ದು, ಈ ಬಗ್ಗೆ ಕೈಮರದ ಚೆಕ್ಪೋಸ್ಟ್ ಸಿಬ್ಬಂದಿಗಳು ಪ್ರಶ್ನಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬಂದಿವೆ.
ಒಂದು ಕಾರಿನಲ್ಲಿ ನಾಲ್ಕು ಮಂದಿ, ಟಿಟಿಗಳಲ್ಲಿ 6 ರಿಂದ 8 ಮಂದಿ ಪ್ರಯಾಣಿಸಬೇಕು ಎನ್ನುವ ನಿಯಮಗಳಿದ್ದರೂ ಅದಾವುದನ್ನೂ ಪ್ರವಾಸಿಗರು ಪಾಲಿಸುತ್ತಿಲ್ಲ ಎಂದು ಸ್ಥಳೀಯರು ದೂರಿದರು.
ಐಟಿ ಉದ್ಯೋಗಿಗಳಿಗೆ ಶುಕ್ರವಾರದಿಂದ ಮೂರುದಿನಗಳ ಸರಣಿ ರಜೆ ಇರುವ ಹಿನ್ನೆಲೆಯಲ್ಲಿ ಗಿರಿ ತಪ್ಪಲು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದು ಶನಿವಾರ ಬೆಳಗ್ಗೆ 11 ಗಂಟೆ ಸಮಯದಲ್ಲಿ ಮುಳ್ಳಯ್ಯನ ಗಿರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಕಳೆದರಾತ್ರಿ ಈ ಭಾಗದಲ್ಲಿ ಸುಮಾರು 2 ಇಂಚಿನಷ್ಟು ಮಳೆ ಸುರಿದಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ 2 ಸಾವಿರ ಅಡಿಯ ಪ್ರಪಾತಕ್ಕೆ ಉರುಳಿ ಬೀಳುವ ಸಂಭವಗಳಿರುತ್ತವೆ. ಆದರೂ ಪ್ರವಾಸಿಗರು ಸಮಾಧಾನದಿಂದ ವಾಹನ ಚಲಾಯಿಸುವುದಿಲ್ಲ ಇದರ ಪರಿಣಾಮ ಕಿರಿದಾದ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಿಕ್ಕಿಕೊಂಡು ಗಂಟೆಗಳ ಕಾಲ ಪರದಾಡುವಂತಾಗಿತ್ತು.
ಗಾಂಧಿ ಜಯಂತಿಯ ದಿನವಾದ ಶುಕ್ರವಾರ ಕೈಮರ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸಿದ ಸಿಬ್ಬಂಧಿ ಗಿರಿ ಪ್ರದೇಶಕ್ಕೆ ಕೊಂಡೊಯ್ಯಲಾಗುತ್ತಿದ್ದ ಭಾರೀ ಪ್ರಮಾಣದ ಮದ್ಯವನ್ನು ಪ್ರವಾಸಿಗರಿಂದ ವಶಕ್ಕೆ ತೆಗೆದುಕೊಂಡಿದ್ದರು. ಅದರ ಪ್ರಮಾಣ ಎಷ್ಟಿತ್ತೆಂದರೆ ಅಲ್ಲಿನ ಲಾಕರ್ ತುಂಬಿ ಹೊರಗಡೆಯೂ ಜೋಡಿಸಬೇಕಾಯಿತು. ಅದನ್ನು ಗಿರಿಯಿಂದ ಹೊರ ಹೋಗುವಾಗ ಮತ್ತೆ ವಾಪಾಸ್ ಕೊಟ್ಟು ಕಳಿಸಲಾಯಿತು.
ಕೊರೋನಾ ಸೋಂಕು ನಿಯಂತ್ರಣಕ್ಕೆ ಸಿಗದೆ ಹರಡುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಟ ವಾರಾಂತ್ಯದ ಮೂರು ದಿನಗಳ ಕಾಲ ಗಿರಿ ತಪ್ಪಲಿನ ಪ್ರವಾಸಿ ತಾಣಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಿ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳು ಅವರ ನೆರವು ಪಡೆದು ಮಾಸ್ಕ್ ಧರಿಸದಿರುವವರು ಹಾಗೂ ಇನ್ನಿತರೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸಿದರೆ ಪರಿಸ್ಥಿತಿ ಸುಧಾರಿಸಬಹುದು. ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವರ್ಷ ಉತ್ತಮ ಮಳೆಯ ಪರಿಣಾಮ ಗಿರಿಶ್ರೇಣಿ ಹಸಿರಿನಿಂದ ನಳನಳಿಸುತ್ತಿದೆ. ಆಹ್ಲಾದಕರ ವಾತಾವರಣ, ಕಣ್ಮನ ಸೆಳೆಯುವ ಗಿರಿ, ಶಿಖರಗಳು ಕೈಬೀಸಿ ಕರೆಯುತ್ತಿದೆ. ಅದರ ಸೊಬಗನ್ನು ಆಸ್ವಾದಿಸಲು ಯಾರೂ ಬೇಡ ಎನ್ನುವುದಿಲ್ಲ. ಆದರೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಸಾಮಾಜಿಕ ಜವಾಬ್ದಾರಿಗಳನ್ನು ಸ್ವಯಂ ಪಾಲಿಸುವಂತಾದರೆ ಅವರೊಂದಿಗೆ ಇತರಿಗೂ ಕ್ಷೇಮ ಎಂದು ಸ್ಥಳೀಯರು ಅಭಿಪ್ರಾಯಿಸಿದರು.