Thursday, August 18, 2022

Latest Posts

ಕೋವಿಡ್ ನಿಯಮ ಪಾಲನೆಯಾಗುತ್ತಿಲ್ಲ, ಸಾಮಾಜಿಕ ಹೊಣೆಗಾರಿಕೆ ಮರೆತ ಜನ!

ಚಿತ್ರದುರ್ಗ: ಪ್ರಸ್ತುತ ದಿನಗಳಲ್ಲಿ ಕೊರೋನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಲಾಕ್‌ಡೌನ್, ಸೀಲ್ ಡೌನ್ ಎಂದು ಏನೆಲ್ಲಾ ಮಾಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಹಾಗಾಗಿ ಕೊರೋನಾ ಜೊತೆ ಬದುಕುವುದು ಅನಿವಾರ್ಯ. ಅದಕ್ಕೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಬೇಕು ಎಂಬುದು ವೈದ್ಯರ ಅಭಿಪ್ರಾಯ. ಆದರೆ ನಗರದ ಜಿಲ್ಲಾ ಆಸ್ಪತ್ರೆಯಲ್ಲಿರುವ ಕೋವಿಡ್-೧೯ ಪರೀಕ್ಷಾ ಕೇಂದ್ರದಲ್ಲಿ ಇಂತಹ ಯಾವುದೇ ನಿಯಮಾವಳಿಗಳು ಪಾಲನೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ವೇಕ್ಷಣಾ ಘಟಕದ ಪ್ರಯೋಗ ಶಾಲೆಯಲ್ಲಿ ಕೋವಿಡ್ ಸೋಮಕಿತರ ಪರೀಕ್ಷೆ ನಡೆಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಪರೀಕ್ಷೆಗೆ ೩ ಸಾವಿರ ರೂ. ಶುಲ್ಕ ಪಡೆಯಲಾಗುತ್ತದೆ. ಬರದನಾಡು ಎಂದು ಹೆಸರಾಗಿರುವ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಬಡಜನರೇ ವಾಸಿಸುತ್ತಿದ್ದಾರೆ. ಅದರಲ್ಲೂ ದಲಿತ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು ಸಂಸ್ಕೃತಿಗೆ ಸಮುದಾಯದ ಜನರೇ ಹೆಚ್ಚಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಎಂಬ ಕಾರಣಕ್ಕೆ ತಮಗೆ ಬರುವ ಯಾವುದೇ ರೋಗಕ್ಕೆ ಜಿಲ್ಲಾ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ.
ಅದರಂತೆ ಪ್ರಸ್ತುತ ದಿನಗಳಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ಜನರಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದ ಕಂಗಾಲಾದ ಜನರು ತಮ್ಮ ಆತಂಕ ದೂರ ಮಾಡಿಕೊಳ್ಳಲು ಜಿಲ್ಲಾ ಆಸ್ಪತ್ರೆಯ ಕೋವಿಡ್-೧೯ ಪರೀಕ್ಷಾ ಕೇಂದ್ರದತ್ತ ದಾಂಗುಡಿ ಇಡುತ್ತಿದ್ದಾರೆ. ಹೀಗೆ ಬರುವ ಜನರ ಮೂಗು ಹಾಗೂ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನಂತರ ಪರೀಕ್ಷೆಗೆ ಒಳಗಾದ ವ್ಯಕ್ತಿಗೆ ಸೋಂಕು ಪಾಸಿಟಿವ್ ಅಥವಾ ನೆಗೆಟಿವ್ ಎಂದು ದೃಢಪಡಿಸಲಾಗುತ್ತದೆ.
ಆದರೆ ಹೀಗೆ ಜನರನ್ನು ಪರೀಕ್ಷೆಗೆ ಒಳಪಡಿಸುವ ಸಂದರ್ಭದಲ್ಲಿ ಪ್ರಯೋಗಾಲಯದ ಸಿಬ್ಬಂದಿ ಕೋವಿಡ್-೧೯ಗೆ ಸಂಬಂಧಿಸಿದ ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ. ಪರೀಕ್ಷೆಗೆಂದು ಜನರು ಬಂದು ಗಂಟೆಗಟ್ಟಲೆ ಕಾದರೂ ಪ್ರಯೋಗಾಲಯದ ಸಿಬ್ಬಂದಿ ಸಕಾಲಕ್ಕೆ ಬರುವುದಿಲ್ಲ. ಬಂದರೂ ಜನರನ್ನು ಕುರಿ ಮಂದೆಯಂತೆ ಗುಂಪು ಗುಂಪಾಗಿ ನಿಲ್ಲಿಸಿಕೊಂಡು ಅವರಿಂದ ಮಾಹಿತಿ ಸಂಗ್ರಹಿಸಲಾಗುತ್ತದೆ. ಬಳಿಕ ಅವರಿಂದ ಮೂಗು, ಗಂಟಲು ದ್ರವ ಮಾದರಿ ಸಂಗ್ರಹಿಸಲಾಗುತ್ತದೆ. ಇದರಿಂದ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ.
ಇದರಿಂದ ಗೊಂದಲಕ್ಕೊಳಗಾದ ಜನರು ಪ್ರಯೋಗಾಲಯದ ಸಿಬ್ಬಂದಿಗೆ ಮಾಹಿತಿ ನೀಡಲು ನಾ ಮುಂದು, ತಾ ಮುಂದು ಎಂದು ಮುಗಿಬೀಳುತ್ತಾರೆ. ಬಹುತೇಕ ಎಲ್ಲರೂ ಮಾಸ್ಕ್ ಧರಿಸಿಯೇ ಕೋವಿಡ್-೧೯ ಪರೀಕ್ಷೆಗೆ ಬರುತ್ತಾರೆ. ಆದರೆ ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಹೀಗೆ ಪರೀಕ್ಷೆಗೆ ಬರುವ ಜನರಿಗೆ ಯಾವುದೇ ಸ್ಯಾನಿಟೈಸರ್ ವ್ಯವಸ್ಥೆಯನ್ನೂ ಮಾಡಿಲ್ಲ. ಇದರಿಂದಾಗಿ ಕೋವಿಡ್-೧೯ ಪರೀಕ್ಷಾ ಕೇಂದ್ರದಲ್ಲಿ ಸೋಂಕಿಗೆ ಸಂಬಂಧಿಸಿದ ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿದಂತಾಗಿದೆ.
ಈ ಕುರಿತು ಕೇಳಿದರೆ, ಜನರಿಗೆ ಹೇಳಿ ಹೇಳಿ ಸಾಕಾಗಿದೆ. ನಾವು ಎಷ್ಟೂ ಅಂತ ಹೇಳಲು ಸಾಧ್ಯ ಎಂಬುದು ಪ್ರಯೋಗಾಲಯದ ಸಿಬ್ಬಂದಿ ಬೇಜವಾಬ್ಧಾರಿತನದ ಉತ್ತರ. ಸಾರ್ವಜನಿಕರೂ ಸಹ ಮಾರಣಾಂತಿಕ ವೈರಸ್ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ಜನರಿಗೆ ಪ್ರಯೋಗಾಲಯದ ಪರೀಕ್ಷೆ ಬೇಕು. ರೋಗಕ್ಕೆ ಸೂಕ್ತ ಚಿಕಿತ್ಸೆಯೂ ಬೇಕು. ಅದೂ ಉಚಿತವಾಗಿ ಬೇಕು. ಆದರೆ ಜನರು ತಮ್ಮ ಜವಾಬ್ಧಾರಿ ಮಾತ್ರ ತಿಳಿದಿಲ್ಲ. ಇನ್ನಾದರೂ ಪ್ರತಿಯೊಬ್ಬರೂ ತಮ್ಮ ಸಾಮಾಜಿಕ ಹೊಣೆಗಾರಿಕೆ ಅರಿತು ನಡೆದುಕೊಳ್ಳಬೇಕು. ತಪ್ಪಿದಲ್ಲಿ ಯಾವ ಪರೀಕ್ಷೆ, ಯಾವ ಚಿಕಿತ್ಸೆಯೂ ಕೊರೋನಾ ಮಹಾಮಾರಿಯಿಂದ ಜನರನ್ನು ಕಾಪಾಡಲಾರದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!