Wednesday, August 17, 2022

Latest Posts

ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ: ಡಾ.ಜಿ.ಪರಮೇಶ್ವರ್

ಕೋಲಾರ: ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು,೪೧೬೭ ಕೋಟಿ ಖರೀದಿಯಲ್ಲಿ ಸುಮಾರು ೨ ಸಾವಿರ ಕೋಟಿ ಅವ್ಯವಹಾರ ನಡೆದಿದ್ದು, ಇದನ್ನು ಹಾಲಿ ಹೈಕೋಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು ಮತ್ತು ಖರ್ಚಿನ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗ್ರಹಿಸಿದರು.
ಸೋಮವಾರ ಕೆಪಿಸಿಸಿಯ ಸ್ಪೀಕ್ ಆಫ್ ಕರ್ನಾಟಕದಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಪಲ್ಯಗಳನ್ನು ತಿಳಿಸಲು ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
ಜನ ಸಮುದಾಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಭ್ರಷ್ಟಾಚಾರ ತಿಳಿದಿದೆ. ಕೊರೋನ ಸಂಕಷ್ಟದಲ್ಲಿಯೂ ಬಿಜೆಪಿ ತನ್ನ ಜೇಬು ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ.
೪ ಲಕ್ಷದ ವೆಂಟಿಲೇಟರ್ ೧೮ ಲಕ್ಷಕ್ಕೆ ಖರೀದಿ
ರಾಜ್ಯದ ಬಿಜೆಪಿ ಸರ್ಕಾರ  ಪಿಪಿಇ ಕಿಟ್, ಮಾಸ್ಕ್ ಖರೀದಿಯಲ್ಲೂ ಭಾರಿ ಅವ್ಯವಹಾರ ನಡೆಸಿದೆ ಎಂದು ಆರೋಪಿಸಿದ ಅವರು, ವೆಂಟಿಲೇಟರ್ ಖರೀದಿಗೆ ೫ ರಿಂದ ೧೮ ಲಕ್ಷ ರೂ ವ್ಯಯಿಸಿದ್ದಾರೆ. ಆದರೆ, ಪಕ್ಕದ ತಮಿಳುನಾಡು ರಾಜ್ಯದಲ್ಲಿ ಕೇವಲ ೪ ಲಕ್ಷಕ್ಕೆ ವೆಂಟಿಲೇಟರ್ ಖರೀದಿ ಮಾಡಿದ್ದಾರೆ ಎಂದರು.
ಇನ್ನು ೯.೬೫ ಲಕ್ಷ ಪಿಪಿಇ ಕಿಟ್ ಖರೀದಿಗೆ ತಲಾ ಕಿಟ್‌ಗೆ ೨೧೧೭ ರೂ. ವ್ಯಯಿಸಿದ್ದಾರೆ. ಎನ್೯೫ ಮಾಸ್ಕ್ ಒಂದಕ್ಕೆ ೧೫೦ ಕೊಟ್ಟು ಖರೀದಿಸಿದ್ದಾರೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ಮಾಸ್ಕ್ ಕಡಿಮೆ ದರದಲ್ಲಿ ಲಭ್ಯವಿದ್ದರೂ ಬೇಕೆಂದೆ ದುಬಾರಿ ಮೊತ್ತದ ಮಾಸ್ಕ್ ಖರೀದಿಸಿ ಅವ್ಯವಹಾರ ಎಸಗಿದ್ದಾರೆ. ಥರ್ಮಲ್ ಸ್ಕ್ರೀನರ್‌ನ ಬೆಲೆ ೩ ಸಾವಿರ ಇರಬಹುದು ಆದರೆ ಅದನ್ನು ೫೯೪೫ ರೂ. ಗೆ ಖರೀದಿಸಿದ್ದಾರೆ ಎಂದು ಆರೋಪಿಸಿದರು.
ಆರೋಗ್ಯ ಇಲಾಖೆ ೭೦೦ ಕೋಟಿ , ಬಿಬಿಎಂಪಿ ೨೦೦ ಕೋಟಿ , ವೈದ್ಯಕೀಯ ಶಿಕ್ಷಣ ಇಲಾಖೆ ೮೫೦ ಕೋಟಿ, ಹಾಗೂ ಎನ್‌ಡಿಆರ್‌ಎಫ್ ೭೪೩ ಕೋಟಿ ರೂ. ಸೇರಿ ಒಟ್ಟು ೪೧೬೭ ಕೋಟಿ ರೂ. ವೆಚ್ಚ ಮಾಡಲಾಗಿದೆ.
ಇದರಲ್ಲಿ ೨ ಸಾವಿರ ಕೋಟಿ ಭ್ರಷ್ಟಾಚಾರ ಆಗಿದೆ. ಹೀಗಾಗಿ ಸರಕಾರ ಕೂಡಲೇ ಇದಕ್ಕೆ ಸೂಕ್ತ ಲೆಕ್ಕವನ್ನು ತೋರಿಸಲಿ, ಇಲ್ಲವೇ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಮತ್ತು ಅವ್ಯವಹಾರ ನಡೆಸದಿದ್ದರೆ ಶ್ವೇತ ಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
ಖಾಸಗಿ ಆಸ್ಪತ್ರೆಗಳ ವಿರುದ್ದ ಕ್ರಮವಿಲ್ಲ
ಇನ್ನು ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಬಿಲ್ ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಸರಕಾರ ಯಾವುದೇ ಕ್ರಮಕೈಗೊಂಡಿಲ್ಲ. ಹಣ ಕಟ್ಟದೇ ಶವವನ್ನು ನೀಡದೇ ಅಮಾನವೀಯತೆ ತೋರಿದ್ದಾರೆ, ಸರ್ಕಾರ ಇದನ್ನು ತಡೆಯಲು ವಿಫಲವಾಗಿದೆ ಎಂದು ದೂರಿದರು.
ಅಟೋ ಚಾಲಕರು, ಕ್ಷೌರಿಕರು, ನೇಕಾರರಿಗೆ ೫ ಸಾವಿರ ರೂಪಾಯಿ ಕೂಡ ಸರಿಯಾಗಿ ತಲುಪಿಲ್ಲ. ಕಾರ್ಮಿಕರು ಸೇರಿದಂತೆ ಲಕ್ಷಾಂತರ ಜನ ಬೆಂಗಳೂರು ಬಿಟ್ಟಿದ್ದಾರೆ. ಆದರೆ ೮೫ ಲಕ್ಣ ಜನರಿಗೆ ಆಹಾರ ಸಾಮಾಗ್ರಿ ಕೊಟ್ಟಿರುವ ಲೆಕ್ಕ ಕೊಡುತ್ತಿದ್ದಾರೆ ಯಾರಿಗೆ ಕೊಟ್ಟರೋ ಗೊತ್ತಿಲ್ಲ ಎಂದರು.
ವಲಸೆ ಕಾರ್ಮಿಕರನ್ನು ಉಚಿತ ಬಸ್ಸುಗಳಲ್ಲಿ ಕಳುಹಿಸಬೇಕಾಗಿತ್ತು, ಆದರೆ ಸರ್ಕಾರ ದುಪ್ಪಟ್ಟ ಪ್ರಯಾಣದರ ಪಡೆದು ಕಳುಹಿಸುವ ಕೆಲಸಕ್ಕೆ ಮುಂದಾಗಿತ್ತು, ಇಂತಹ ಸಂದರ್ಭದಲ್ಲಿ ಕೆಪಿಸಿಸಿ ಯಿಂದ ೧ ಕೊಟಿ ರೂಪಾಯಿ ಕೊಟ್ಟರೆ ಅವಮಾನ ಆಗುತ್ತದೆಂದು ಅದನ್ನು ಪಡೆದಿಲ್ಲ ಎಂದರು.
ಕೊರೋನಾ ಹರಡಲು ಸರ್ಕಾರವೇ ಕಾರಣ
ಕೊರೋನ ದಿನೇದಿನೆ ಹೆಚ್ವುತ್ತಿದೆ. ಕೋರೋನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ಕೋರೋನ ಹೆಚ್ಚಳದಿಂದ ಜನರು ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಸಾವನ್ನಪ್ಪುತ್ತಿದ್ದಾರೆ.ಈ ಎಲ್ಲದಕ್ಕೂ ನೇರ ಹೊಣೆ ಈ ಸರಕಾರ ಎಂದು ವಾಗ್ದಾಳಿ ನಡೆಸಿದರು.
ಕೊರೋನಾ ಮಾರಿ ಬರುತ್ತಿದ್ದಂತೆ ಹೊರ ದೇಶಗಳಿಂದ ವಿಮಾನಗಳಿಗೆ ತಡೆ ನೀಡಿದ್ದರೆ ಈ ಅನಾಹುತ ಸಂಭವಿಸುತ್ತಿರಲಿಲ್ಲ ಎಂದರು.
ಸಿಎಂ ಶೀಘ್ರ ಗುಣಮುಖರಾಗಲಿ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊರೋನಾ ಕಾಣಿಸಿಕೊಂಡಿರುವುದು ಬೇಸರ ತಂದಿದೆ , ಅವರು ಶೀಘ್ರವೇ ಗುಣಮುಖರಾಗಿ ಹಿಂದಿರುಗಲಿ ಎಂದು ಆಶಿಸುತ್ತೇವೆ ಎಂದರು.
ಶಾಸಕ ರಮೇಶ್ ಕುಮಾರ್ ಮಾತನಾಡಿ, ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ನಾವು ತನಿಖೆಗೆ ಸಿದ್ದ ಎಂದ ಅವರು ಹಿಂದೆ ನಾವು ೨೧ ಲಕ್ಷಕ್ಕೆ ವೆಂಟಿಲೇಟರ್ ಖರೀದಿಸಿದ್ದೇವೆ ಎಂದು ಹೇಳಿದ್ದಾರೆ, ಎಲ್ಲವೂ ತನಿಖೆ ಮಾಡಿಸಲಿ ಎಂದರು.
ಇದೀಗ ಜನ ಸಾವು ಬದುಕಿನ ನಡುವೆ ನರಳಾಡುತ್ತಿದ್ದಾರೆ, ಸಾರ್ವಜನಿಕ ಜೀವನದಲ್ಲಿ ಆರೋಪ ಪ್ರತ್ಯಾರೋಪ ಮಾಡಿಕೊಂಡು ಇರುವುದು ಕೆಲಸವಲ್ಲ, ತನಿಖೆ ಆಮೇಲೆಮಾಡಿಸಬಹುದು ಆದರೆ ರೋಗಪೀಡಿತರಿಗೆ ಔಷಧಿ ನೀಡದೇ ಇರುವುದು ಸರಿಯಲ್ಲ ಎಂದರು.
ಕೆಪಿಎಂಪಿ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಅದನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ, ಇದರಿಂದ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಬಹುದಾಗಿತ್ತು ಎಂದರು.
ಈ ಸಂದರ್ಭದಲ್ಲಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ,ನಸೀರ್ ಅಹಮದ್, ಡಿಸಿಸಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ಕೆಪಿಸಿಸಿ ಕಾರ್ಯದರ್ಶಿ ಕುಮಾರ್, ಮುಖಂಡರಾದ ಜಮೀರ್‌ಪಾಷ, ವಸಂತ ಕವಿತಾ,ಎಲ್.ಎ.ಮಂಜುನಾಥ್, ಊರುಬಾಗಿಲು ಶ್ರೀನಿವಾಸ್, ಮತ್ತಿತರರು ಭಾಗಿಯಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!