ಬಳ್ಳಾರಿ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಇದುವರೆಗೆ ಕೈಗೊಳ್ಳಲಾಗಿರುವ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅರಣ್ಯ,ಪರಿಸರ,ಜೀವಿಶಾಸ್ತ್ರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್.ಆನಂದಸಿಂಗ್ ಅವರು ಕೊರೊನಾದಿಂದ ಉಂಟಾಗುತ್ತಿರುವ ಸಾವಿನ ಪ್ರಮಾಣಗಳು ಕಡಿಮೆಯಾಗುವಂತೆ ನೋಡಿಕೊಳ್ಳಬೇಕು ಮತ್ತು ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಚಿಕಿತ್ಸೆಗೆ ಯಾವುದೇ ರೀತಿಯಲ್ಲಿ ಬೆಡ್ ಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯ ಕೋವಿಡ್ ಪರಿಸ್ಥಿತಿಗೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪ್ರಮುಖ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸಾಮಾನ್ಯವಾಗಿ ಕೊರೊನಾ ನಿಯಂತ್ರಣದಲ್ಲಿದೆ ಮತ್ತು ಇತ್ತೀಚೆಗೆ ಗುಣಮುಖರಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೇ ಸಾವಿನ ಪ್ರಮಾಣ ಇಳಿಕೆಯತ್ತ ಅಧಿಕಾರಿಗಳು ಗಮನಹರಿಸಬೇಕು ಎಂದರು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಸದ್ಯ ಕೊರೊನಾ ನಿಯಂತ್ರಣದಲ್ಲಿದೆ. ಹರಪನಹಳ್ಳಿಯಲ್ಲಿನ ಕೊರೊನಾ ಗಂಭೀರ ಪ್ರಕರಣಗಳನ್ನು ದಾವಣಗೆರೆ ಆಸ್ಪತ್ರೆಗೆ ಮಾತನಾಡಿಕೊಂಡು ಶಿಪ್ಟ್ ಮಾಡಲಾಗುತ್ತಿದೆ.ಜಿಲ್ಲೆಯಲ್ಲಿ ಕೊರೊನಾ ಸಂಬಂಧಿತ ಯಾವುದೇ ಸಮಸ್ಯೆಗಳಿಲ್ಲ ಎಂದರು.
ವಿಮ್ಸ್ ನಲ್ಲಿ ಸೊಂಕಿತರಿಗೆ ಹಾಗೂ ಇನ್ನೀತರ ರೋಗಿಗಳಿಗೆ ಚಿಕಿತ್ಸೆ ನೀಡಿದಕ್ಕಾಗಿ ಆಯುಷ್ಮಾನ್ ಭಾರತ ಯೋಜನೆ ಅಡಿ 1.50ಕೋಟಿ ರೂ. ಬಂದಿದೆ ಎಂದರು.
ಬಳ್ಳಾರಿ ಜಿಲ್ಲಾಸ್ಪತ್ರೆಯನ್ನು ಮುಂದಿನ ದಿನಗಳಲ್ಲಿ ನಾನ್ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುವುದು. ಟ್ರಾಮಾಕೇರ್ ಸೆಂಟರ್ ಅನ್ನು ಪೂರ್ಣಪ್ರಮಾಣದ ಕೋವಿಡ್ ಸೆಂಟರ್ ಆಗಿ ಪರಿವರ್ತಿಸಲಾಗುವುದು ಎಂದರು.
ಬಳ್ಳಾರಿ ಮತ್ತು ಹೊಸಪೇಟೆಯಲ್ಲಿ 24*7ಕುಡಿಯುವ ನೀರು ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದಕ್ಕೆ ಬೇಸರ ವ್ಯಕ್ಯಪಡಿಸಿದ ಸಚಿವ ಸಿಂಗ್ ಅವರು ಅಧಿಕಾರಿಗಳನ್ನು ಕರೆದು ಕ್ಷೀಪ್ರಗತಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಖನಿಜ ನಿಧಿ ಹಾಗೂ ಇನ್ನೀತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ,ಎಸ್ಪಿ ಸೈದುಲು ಅಡಾವತ್, ಎಡಿಸಿ ಪಿ.ಎಸ್.ಮಂಜುನಾಥ, ಡಿಎಚ್ಒ ಡಾ.ಜನಾರ್ಧನ್, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಇದ್ದರು.
ಕೋವಿಡ್ ಪರಿಶೀಲನಾ ಸಭೆ: ಸಾವಿನ ಪ್ರಮಾಣ ಇಳಿಕೆಯತ್ತ ಗಮನಹರಿಸಿ: ಸಚಿವ ಆನಂದಸಿಂಗ್
- Advertisement -