ಮಂಡ್ಯ: ಮಿಮ್ಸ್ ಆಸ್ಪತ್ರೆಯ ಕೋವಿಡ್ ಪ್ರಯೋಗಾಲಯದ ಒಳಗೆ ಸೋಂಕಿತ ವ್ಯಕ್ತಿಯೊಬ್ಬ ಓಡಾಡಿದ್ದರಿಂದ ಪ್ರಯೋಗಾಲಯವನ್ನು 48 ಗಂಟೆಗಳ ಕಾಲ ಬಂದ್ ಮಾಡಲಾಗಿದೆ. ಅಲ್ಲಿದ್ದ 16 ಮಂದಿ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ನ್ಯಾಯಾಲಯದ ಸಿಬ್ಬಂದಿಯೊಬ್ಬರು ತನ್ನ ಹಾಗೂ ಬೇರೋಬ್ಬರ ಕೋವಿಡ್ ಪರೀಕ್ಷಾ ವರದಿಯನ್ನು ತೆಗೆದುಕೊಂಡು ಹೋಗುವುದಕ್ಕೆ ಜಿಲ್ಲಾಸ್ಪತ್ರೆಯ ಕೋವಿಡ್ ಪ್ರಯೋಗಾಲಯಕ್ಕೆ ಗುರುವಾರ ಆಗಮಿಸಿದ್ದರು. ಆ ಸಮಯದಲ್ಲಿ ಎರಡು ಗಂಟೆಗಳ ಕಾಲ ಪರೀಕ್ಷಾ ವರದಿ ಪಡೆಯಲು ಅಲ್ಲೇ ಕಾದು ಕುಳಿತಿದ್ದರು. ಸಿಬ್ಬಂದಿಯೊಂದಿಗೆ ಮಾತುಕತೆಯನ್ನೂ ನಡೆಸಿದ್ದರು.
ವರದಿ ಬಂದ ನಂತರವಷ್ಟೇ ಆ ವ್ಯಕ್ತಿಗೂ ಕೊರೋನಾ ಸೋಂಕು ಇರುವುದು ವೈದ್ಯಾಧಿಕಾರಿಗಳು ಹಾಗೂ ಪ್ರಯೋಗಾಲಯದವರ ಗಮನಕ್ಕೆ ಬಂದಿದೆ. ಇದರಿಂದ ಆತಂಕಕ್ಕೆ ಒಳಗಾದ ಪ್ರಯೋಗಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಮತ್ತು ಸಿಬ್ಬಂದಿ ಕೂಡಲೇ ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದರು.
ಆನಂತರ 48 ಗಂಟೆಗಳ ಕಾಲ ಪ್ರಯೋಗಾಲಯವನ್ನು ಬಂದ್ ಮಾಡುವ ತೀರ್ಮಾನ ಕೈಗೊಂಡು, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಯಿತು. ಗಡುವು ಮುಗಿಯುವವರೆಗೆ ಕೋವಿಡ್ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಶನಿವಾರದಿಂದ ಪ್ರಯೋಗಾಲಯದಲ್ಲಿ ಪರೀಕ್ಷೆ ಆರಂಭಿಸಲಾಗುವುದು ಎಂದು ಜಿಲ್ಲಾ ಸರ್ವೇಕ್ಷಣಾýಕಾರಿ ಡಾ.ಬಾಲಕೃಷ್ಣ ತಿಳಿಸಿದರು.