Thursday, June 30, 2022

Latest Posts

ಕೋವಿಡ್ ಭೀತಿ ಕಾಲೇಜುಗಳತ್ತ ಮುಖ ಮಾಡದ ವಿದ್ಯಾರ್ಥಿಗಳು!

ಹೊಸ ದಿಗಂತ ವರದಿ, ದಾವಣಗೆರೆ:

ಜಿಲ್ಲೆಯಲ್ಲಿ ಪದವಿ, ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜುಗಳಲ್ಲಿ ತರಗತಿ ಮಂಗಳವಾರದಿಂದ ಆರಂಭಗೊಂಡಿದ್ದರೂ, ವಿದ್ಯಾರ್ಥಿಗಳು ಮಾತ್ರ ಕಾಲೇಜುಗಳತ್ತ ವಿದ್ಯಾರ್ಥಿಗಳು ಮುಖ ಮಾಡಿಲ್ಲ. ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಕೋವಿಡ್ ನೆಗೆಟಿವ್ ವರದಿಯೊಂದಿಗೆ ಕಾಲೇಜಿಗೆ ಹಾಜರಾಗಿದ್ದಾರೆ.
ಮೊದಲ ದಿನ ಪ್ರತಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅತ್ಯಂತ ಕಡಿಮೆ ಇತ್ತು. ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ(ಯುಜಿಸಿ) ಮಾರ್ಗಸೂಚಿಯಂತೆ ಕೆಲವು ಕಾಲೇಜುಗಳಲ್ಲಿ ತರಗತಿ ಆರಂಭಕ್ಕೆ ಸಿದ್ಧತೆ ನಡೆಸಲಾಗಿತ್ತು. ಎವಿಕೆ ಕಾಲೇಜು, ಬಿಎಸ್‌ಸಿ ಪ್ರಥಮ ದರ್ಜೆ ಕಾಲೇಜು, ಡಿಆರ್‌ಎಂ ವಿಜ್ಞಾನ ಕಾಲೇಜು, ಮಹಿಳಾ ಸರ್ಕಾರಿ ಕಾಲೇಜು ಸೇರಿದಂತೆ ಬಹುತೇಕ ಕಾಲೇಜಿನಲ್ಲಿ ಕಟ್ಟಡ, ಶೌಚಾಲಯ, ಎಲ್ಲ ಕೊಠಡಿಗಳಲ್ಲಿನ ಪೀಠೋಪಕರಣ ಮತ್ತು ಪಠ್ಯ ಸಾಮಗ್ರಿಗಳ ಸ್ಯಾನಿಟೈಸ್ ಮಾಡಲಾಗಿತ್ತು. ಆದರೆ ಸಾವಿರಾರು ಸಂಖ್ಯೆ ಹೊಂದಿರುವ ಕಾಲೇಜುಗಳಲ್ಲಿ ಒಬ್ಬಿಬ್ಬರು ವಿದ್ಯಾರ್ಥಿಗಳು ಮಾತ್ರ ಕೋವಿಡ್ ನೆಗೆಟಿವ್ ವರದಿ ತಂದಿದ್ದರು. ಕೋವಿಡ್ ಪರೀಕ್ಷಾ ವರದಿ ಇಲ್ಲದೇ ಬಂದ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ವಾಪಸ್ ಕಳುಹಿಸಲಾಗಿದೆ.
ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಇಬ್ಬರು ವಿದ್ಯಾರ್ಥಿನಿಯರು ಮಾತ್ರ ತರಗತಿಗೆ ಹಾಜರಾಗಿದ್ದರು. ಅಂತಿಮ ವರ್ಷದ ಬಿಎಸ್‌ಸಿ ವಿದ್ಯಾರ್ಥಿನಿ ವಿ.ಕೆ.ರಶ್ಮಿ, ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿ ಫಿಜಾ ಜಿಯಾವುಲ್ಲಾ ಮಾತ್ರ ಹಾಜರಾಗಿದ್ದರು. ಕಾಲೇಜು ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದ್ದರಿಂದ ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯ ಮುಂಭಾಗ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಸಾಲುಗಟ್ಟಿ ನಿಂತಿದ್ದರು. ವರದಿ ಬರಲು ಇನ್ನೂ 3-4 ದಿನ ಕಾಯಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಡಿಆರ್‌ಎಂ ಕಾಲೇಜಿನಲ್ಲಿ ಓರ್ವ ವಿದ್ಯಾರ್ಥಿಯು ಕೂಡ ಕಾಲೇಜಿನ ಬಂದಿರಲಿಲ್ಲ. ನಾವುಗಳು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ ವಿದ್ಯಾರ್ಥಿಗಳೇ ಆಗಮಿಸಿಲ್ಲ. ನಮ್ಮಲ್ಲಿ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರಬೇಕಿರುವುದರಿಂದ ಇನ್ನೂ 3-4 ದಿನ ಕಾಯಬೇಕಾಗಬಹುದು ಎಂದು ಕಾಲೇಜಿನ ಪ್ರಾಂಶುಪಾಲೆ ಡಾ.ಆರ್.ವನಜಾ ತಿಳಿಸಿದರು.
ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕಾಲೇಜು ಆರಂಭಕ್ಕೆ ಸರ್ಕಾರ ಆಸಕ್ತಿ ತೋರಿದ್ದರೂ, ವಿದ್ಯಾರ್ಥಿಗಳಿಂದ ಅಂತಹ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಶಾರೀರಿಕವಾಗಿ ಸದೃಢವಾಗಿರುವ ಯುವಜನರೇ ತರಗತಿಗೆ ಬರಲು ಹಿಂದೇಟು ಹಾಕುತ್ತಿರುವಾಗ, ಶಾಲೆಗಳ ಆರಂಭ ಸಾಧ್ಯವಾದೀತೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇನ್ನೊಂದು ವಾರದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದರೂ, ಕೋವಿಡ್ ಹಾವಳಿ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಹಾಜರಾತಿ ಕಷ್ಟವೆಂದೇ ಹೇಳಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss