Thursday, August 11, 2022

Latest Posts

ಕೋವಿಡ್ ಮಹಾಮಾರಿ ದೂರವಿಡಲು, ಜನರ ಆರೋಗ್ಯದ ದೃಷ್ಟಿಯಿಂದ ಸದಾ ಮಾಸ್ಕ್ ಧರಿಸುವುದು ಅಗತ್ಯ

ಹಾವೇರಿ: ಕೋವಿಡ್ ಮಹಾಮಾರಿಯನ್ನು ದೂರವಿಡಲು, ಜನರು ಆರೋಗ್ಯದ ದೃಷ್ಟಿಯಿಂದ ಸದಾ ಮಾಸ್ಕ ಧರಿಸುವುದು ಅಗತ್ಯವಾಗಿದೆ. ಈ ಕುರಿತಂತೆ ಜಿಲ್ಲೆಯಾದ್ಯಂತ ಮಾಸ್ಕ ದಿನ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತದೆ. ಆರೋಗ್ಯ ಸುರಕ್ಷತೆಗೆ ಎಲ್ಲರೂ ಮಾಸ್ಕ ಧರಿಸಬೇಕು. ಈ ಕುರಿತು ಮೊದಲು ಜಾಗೃತಿ ಹಮ್ಮಿಕೊಳ್ಳಲಾಗುತ್ತಿದೆ ನಂತರ ಮಾಸ್ಕ ಧರಿಸಿದವರಿಗೆ ದಂಡ ಹಾಕಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆಡಳಿತ, ಜಿಲ್ಲಾ ಆಸ್ಪತ್ರೆ, ನಗರಸಭೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾದ ಮಾಸ್ಕ ದಿನ ಆಚರಣೆ ಜಾಗೃತಿ ಜಾಥಾಕ್ಕೆ ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಸಾರ್ವಜನಿಕರು ಇಂತಹದೇ ಮಾಸ್ಕ ಹಾಕಬೇಕೆಂಬ ಕಡ್ಡಾಯವಿಲ್ಲ. ಮನೆಯಲ್ಲಿಯೇ ಬಟ್ಟೆಯ ಮಾಸ್ಕ್ ತಯಾರಿಸಿಕೊಂಡು ಬಳಕೆ ಮಾಡಬಹುದು. ಮಾರುಕಟ್ಟೆಯಲ್ಲಿ ಅನೇಕ ಬಣ್ಣ ಬಣ್ಣದ ಮಾಸ್ಕ ಬಂದಿವೆ. ಜನರು ಮಾಸ್ಕಗಳನ್ನು ಖರೀದಿಸಿ ಕಡ್ಡಾಯವಾಗಿ ಧರಿಸಬೇಕು. ನಿಯಮಿತವಾಗಿ ಸ್ಯಾನಿಟೈಸರ್ ಬಳಸುವುದನ್ನು ಅಭ್ಯಾಸಮಾಡಿಕೊಳ್ಳಬೇಕು, ಮಾಸ್ಕ ಧರಿಸದೇ ನಿಯಮ ಉಲ್ಲಂಘನೆ ಮಾಡಿದವರಿಗೆ ೧೦೦ ರೂ. ದಂಡ ವಿಧಿಸಲು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಎಸ್.ಹಾವನೂರ ಮಾತನಾಡಿ, ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಮಾಸ್ಕ ದರಿಸುವ ಅಗತ್ಯ ಎಂದು ಹೇಳಿದರು.
ಜಾಥಾ- ಮಾಸ್ಕ್ ವಿತರಣೆ
ಮಾಸ್ಕ್ ದಿನದ ಅಂಗವಾಗಿ ಹಮ್ಮಿಕೊಂಡ ಜಾಥಾದಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ದೇಸಾಯಿ ಅವರು ಪಿ.ಬಿ.ರಸ್ತೆ, ಎಂ.ಜಿ.ರಸ್ತೆಯ ಹಣ್ಣು, ಹೂವು, ಬೀದಿಯ ವ್ಯಾಪಾರಸ್ಥರಿಗೆ, ಕಾರ್ಮಿಕರಿಗೆ, ರೈತರಿಗೆ, ಸಾರ್ವಜನಿಕರಿಗೆ ಉಚಿತ ಮಾಸ್ಕ ವಿತರಿಸಿ ಮಾಸ್ಕ್ ಧರಿಸುವ ಅಗತ್ಯತೆ ಕುರಿತಂತೆ ಜಾಗೃತಿ ಮೂಡಿಸಿದರು.
ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರು ಜಾಗೃತಿ ಫಲಕ ಹೊತ್ತು ನಗರದ ವಿವಿದೆಡೆ ರೆಡ್ ಕ್ರಾಸ್ ಸ್ವಯಂ ಸೇವಕರು, ಸಾರ್ವಜನಿಕರಿಗೆ ಮೆರವಣಿಗೆಯುದ್ದಕ್ಕೂ ಉಚಿತವಾಗಿ ಮಾಸ್ಕ್ ಹಂಚಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ತಹಶೀಲ್ದಾರ ಶಂಕರ, ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ್, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಡಾ.ವಿಶ್ವನಾಥ್, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜಪ್ಪ, ನಗರಸಭೆ ಆಯುಕ್ತ ಬಸವರಾಜ ಜಿದ್ದಿ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ.ನಿಲೇಶ, ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ತಿಮ್ಮೇಶಕುಮಾರ ಇತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss