Tuesday, July 5, 2022

Latest Posts

ಕೋವಿಡ್ ಸಂಕಷ್ಟದ ಸಮಯದಲ್ಲಿ ಗೌರಿ-ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಲು ಒತ್ತು ನೀಡಿ: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಪ್ರಸಕ್ತ ಸಾಲಿನಲ್ಲಿ ಕೋವಿಡ್-೧೯ ಸೋಂಕು ವಿಶ್ವವನ್ನೇ ಬಾಧಿಸುತ್ತಿದೆ. ಇದು ಸಾಂಕ್ರಾಮಿಕ ಪಿಡುಗಾಗಿರುವುದರಿಂದ ರಾಜ್ಯದ ಜನರು ಗೌರಿ-ಗಣೇಶ ಹಬ್ಬದವನ್ನು ಸರಳವಾಗಿ ಆಚರಿಸುವುದಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಭಾರತೀಯ ಪರಂಪರೆಯ ಬಹುದೊಡ್ಡ ಹಬ್ಬಗಳಲ್ಲೊಂದಾದ ಗೌರಿ-ಗಣೇಶ ಚೌತಿ ಸಮೀಪ ಬಂದಿದೆ. ಇದೇ ಆ. ೨೧ರಿಂದ ಗೌರಿ-ಗಣೇಶೋತ್ಸವ ಆರಂಭವಾಗಲಿದೆ.
ಗಣೇಶೋತ್ಸವ ಎಂದರೇ ಸಾಮೂಹಿಕ ಹಬ್ಬ. ಇದು ಸರ್ವ ಜನಾಂಗವನ್ನೂ ಬೆಸೆಯುವ, ಒಗ್ಗಟ್ಟಾಗಿ ಆಚರಿಸುವ, ಏಕತೆಯನ್ನು ಸಾರುವ ಹಬ್ಬವಾಗಿದೆ. ಈ ಉತ್ಸವವು ಪ್ರತಿ ವರ್ಷ ಪ್ರತಿ ಗಲ್ಲಿಗಳಲ್ಲಿ ವಿಜೃಂಭಣೆಯಿ೦ದ ಆಚರಿಸಲ್ಪಡುತ್ತಾ ಬರುತ್ತಿದೆ. ಆದರೆ,
ಸರಳ ಆಚರಣೆ ಎಂದರೆ ನಮ್ಮ ನಮ್ಮ ಮನೆ-ಮನಗಳಲ್ಲಿ ವಿಘ್ನನಿವಾರಕನಾದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸೋಣ. ಆ ಮೂಲಕ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳೋಣ. ಇನ್ನು ಸಾಮೂಹಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವುದಿದ್ದರೆ ರಾಜ್ಯ ಸರ್ಕಾರ ಅದಕ್ಕಾಗಿ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಯಾವುದೇ ಕಾರಣಕ್ಕೂ ನೀತಿ-ನಿಯಮಗಳನ್ನು ಮೀರಿ ಯಾರೂ ಸಹ ಆಚರಣೆ ಮಾಡಬಾರದು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಮಾರ್ಗಸೂಚಿಯನ್ವಯ ೨೦ ಜನಕ್ಕಿಂತ ಹೆಚ್ಚಿನ ಮಂದಿ ಸೇರಕೂಡದು. ಜೊತೆಗೆ ಸಂಬ೦ಧಪಟ್ಟವರಿ೦ದ ಅನುಮತಿಯನ್ನು ಪಡೆದುಕೊಂಡು ಆಚರಣೆ ಮಾಡಬೇಕ ಎಂದು ಮನವಿ ಮಾಡಿದ್ದಾರೆ.
ಭಗವಂತನ ದಯೆಯಿಂದ ಕೊರೋನಾ ಮಹಾಮಾರಿ ಕಡಿಮೆಯಾದರೆ, ಮುಂದಿನ ಬಾರಿ ಅದ್ದೂರಿಯಾಗಿಯೇ ಆಚರಿಸಿಕೊಳ್ಳಬಹುದು. ಈಗ ನಾವೆಲ್ಲರೂ ನಮ್ಮ ಹಾಗೂ ನಮ್ಮವರ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನಕೊಡಬೇಕು. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ ಎಂದು ಹೇಳಿದ್ದಾರೆ.
ಬನ್ನಿ ಪರಿಸರ ಸ್ನೇಹಿಯಾಗೋಣ 
ಯಾವು ಹಬ್ಬ-ಹರಿದಿನಗಳಿರಲಿ ನಾವು ಸಾಧ್ಯವಾದಷ್ಟು ಪರಿಸರ ಸ್ನೇಹಿ ಆಚರಣೆಗೆ ಒತ್ತು ಕೊಡಬೇಕು. ಪರಿಸರ ನಮಗೆಲ್ಲವನ್ನೂ ಕೊಟ್ಟಿದೆ. ಹಾಗಾಗಿ ನಾವೂ ಪರಿಸರಕ್ಕೆ ನಮ್ಮ ಕೊಡುಗೆ ನೀಡಬೇಕಲ್ಲವೇ..? ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಣ್ಣ ಲೇಪಿತ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟ ಎರಡಕ್ಕೂ ಕಡಿವಾಣ ಹಾಕಬೇಕಿದೆ. ಇಂಥ ಪ್ರಕರಣಗಳು ಕಂಡುಬ೦ದರೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಂಥ ವಿಷಯಗಳಿಗೆ ನನ್ನ ಸಂಪೂರ್ಣ ಬೆಂಬಲ ಇದೆ.
ಮನೆಯಲ್ಲಿ ದೀಪ ಬೆಳಗಿ   
ಮೊದಲೇ ಹೇಳಿದಂತೆ ಪಟಾಕಿಗಳ ಬಳಕೆ ಈ ಬಾರಿ ಬೇಡವೇ ಬೇಡ. ಇದು ಪರಿಸರಕ್ಕೂ ಮಾರಕ, ಜೊತೆಗೆ ಕೋವಿಡ್ ೧೯ ದೃಷ್ಟಿಯಿಂದ ಈ ಬಾರಿ ಒಳ್ಳೆಯದಲ್ಲ. ಹೀಗಾಗಿ ಪ್ರಸಕ್ತ ಬಾರಿಯ ಗಣೇಶಹಬ್ಬವನ್ನು ಪಟಾಕಿರಹಿತವಾಗಿ ಆಚರಣೆ ಮಾಡಿ. ಪಟಾಕಿಯ ಬದಲು ದೀಪಗಳನ್ನು ಬೆಳಗಿ ಮನೆಯೊಳಗೆ ಹಾಗೂ ಮನೆ ಹೊರಗಿನ ಆವರಣದಲ್ಲಿ ದೀಪಗಳನ್ನು ಹಚ್ಚಿ ಆ ಮೂಲಕ ನಮ್ಮ ಸಂಭ್ರಮವನ್ನು ವ್ಯಕ್ತಪಡಿಸೋಣ.
ಕೊನೆಯದಾಗಿ ನಾನು ಹೇಳುವುದೇನೆಂದರೆ, ವಿಘ್ನನಿವಾರಕ ಗಣೇಶನು ಈಗ ಎದುರಾಗಿರುವ ಕೊರೋನಾ ಮಹಾಮಾರಿಯನ್ನು ದೂರ ಮಾಡಿ, ಮುಂದಿನ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಹಾಗೂ ಸಾರ್ವಜನಿಕವಾಗಿ ಆಚರಿಸಲು ಅನುಕೂಲವಾಗುವಂತೆ ಆಶೀರ್ವದಿಸಲಿ ಎಂದು ಮಹಾಜನತೆಯ ಪರವಾಗಿ ಪ್ರಾರ್ಥಿಸುತ್ತೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss