ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಸಾಣಿಕೆರೆ ಗ್ರಾಮದ ಆಶಾ ಕಾರ್ಯಕರ್ತೆ ಶಿವಲೀಲಾ (೩೮) ಎಂಬುವರು ಶನಿವಾರ ಕೊರೋನಾ ವೈರಸ್ಗೆ ತುತ್ತಾಗಿದ್ದಾರೆ.
ಶಿವಲೀಲಾ ಅವರಿಗೆ ಇದ್ದಕ್ಕಿದ್ದಂತೆ ಜ್ವರ ಕಾಣಿಸಿಕೊಂಡಿತ್ತು. ಶುಕ್ರವಾರ ಕೂಡಲೇ ಅವರನ್ನು ಚಳ್ಳಕೆರೆಯ ಸರ್ಕಾರಿ ಆಸ್ಪತ್ರೆಗೆ ಕರೆತಂದು ರ್ಯಾಪಿಡ್ ಪರೀಕ್ಷೆ ಮಾಡಿಸಲಾಗಿತ್ತು.ಕೇವಲ ಜ್ವರ ಹೊರತುಪಡಿಸಿದರೆ ಬೇರೆ ಯಾವುದೇ ಸೋಂಕಿನ ಲಕ್ಷಣಗಳು ಕಂಡು ಬಂದಿರಲಿಲ್ಲ. ಶಿವಲೀಲಾ ಅವರಿಗೆ ಕೋವಿಡ್-೧೯ಗೆ ಸಂಬಂಧಿಸಿದಂತೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಆದರೆ ಶಿವಲೀಲಾ ರಕ್ತದ ಒತ್ತಡ ಕಡಿಮೆಯಾಗಿ ಶನಿವಾರ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ತಾಲ್ಲೂಕು ಆಡಳಿತಾಧಿಕಾರಿ ಡಾ.ಪ್ರೇಮಾಸುಧಾ ತಿಳಿಸಿದ್ದಾರೆ.
ಮೃತ ಆಶಾ ಕಾರ್ಯಕರ್ತೆ ಶಿವಲೀಲಾ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಟ್ವೀಟ್ನಲ್ಲಿ ಭರವಸೆ ನೀಡಿದ್ದಾರೆ.