Tuesday, August 16, 2022

Latest Posts

ಕೋವಿಡ್ – 19: ಕೇರಳಕ್ಕೆ ಆಗಮಿಸುವವರಿಗೆ ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರಕಾರ

ಕಾಸರಗೋಡು: ಕಡಿಮೆ ದಿನಗಳ ಅವಧಿಗಾಗಿ ರಾಜ್ಯಕ್ಕೆ ಭೇಟಿ ನೀಡುವವರಿಗೆ ಕೇರಳ ಸರಕಾರವು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಈ ಮಾರ್ಗಸೂಚಿ 7 ದಿನಗಳ ಕಾಲ ರಾಜ್ಯದಲ್ಲಿ ವಾಸ್ತವ್ಯ ಹೂಡುವವರಿಗೆ ಅನ್ವಯವಾಗಲಿದೆ ಎಂದು ಸರಕಾರ ತಿಳಿಸಿದೆ.
ಈ ಮೂಲಕ ಕೇರಳ ರಾಜ್ಯಕ್ಕೆ ಆಗಮಿಸಿ 7 ದಿನಗಳ ಕಾಲ ವಾಸ್ತವ್ಯ ಹೂಡಬಹುದಾಗಿದ್ದು , 8 ನೇ ದಿನ ಹೊರಡಬೇಕಿದೆ. ವ್ಯಾಪಾರ, ಚಿಕಿತ್ಸೆಯ ಉದ್ದೇಶಕ್ಕೆ ಆಗಮಿಸುವ ಜನರಿಗಾಗಿ ಈ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
ಕೇರಳಕ್ಕೆ ಆಗಮಿಸುವ ಜನರು ಕೋವಿಡ್ – 19 ಜಾಗೃತ ವೆಬ್ ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಬೇಕು ಮತ್ತು ಪ್ರವೇಶಕ್ಕೆ ಪಾಸ್ ಗಳನ್ನು ಪಡೆಯಬೇಕು. ಹೆಸರು ನೋಂದಣಿಯಾದ ತಕ್ಷಣ ಅಧಿಕಾರಿಗಳು ಅದನ್ನು ಪರಿಶೀಲಿಸಿ ಅನುಮತಿ ನೀಡಲಿದ್ದಾರೆ. ಈ ವಿಷಯದಲ್ಲಿ ಯಾವುದೇ ವಿಳಂಬ ಆಗುವುದಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.
ರಾಜ್ಯಕ್ಕೆ ಆಗಮಿಸುವ ಜನರು ಯಾರನ್ನು ಭೇಟಿಯಾಗಬೇಕು, ಭೇಟಿಯ ಉದ್ದೇಶ, ಭೇಟಿ ನೀಡುವ ಸ್ಥಳ, ವಸತಿ ವ್ಯವಸ್ಥೆ ಮುಂತಾದ ವಿವರಗಳನ್ನು ಕಡ್ಡಾಯವಾಗಿ ನೀಡಬೇಕಿದೆ. ಈ ಮಧ್ಯೆ ಕೇರಳಕ್ಕೆ ಆಗಮಿಸುವವರು ಯಾರನ್ನು ಭೇಟಿಯಾಗಬೇಕು ಮತ್ತು ಎಲ್ಲಿಗೆ ಹೋಗಬೇಕು ಅಲ್ಲಿಗೆ ಮಾತ್ರ ಭೇಟಿ ನೀಡಬಹುದು. ರಾಜ್ಯದ ಬೇರೆ ಪ್ರದೇಶಗಳಿಗೆ ಭೇಟಿ ನೀಡಲು ಅವಕಾಶವಿಲ್ಲ. ಜನರ ಭೇಟಿ ಬಗ್ಗೆ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.
ಪರೀಕ್ಷೆ ಸೇರಿದಂತೆ ಶೈಕ್ಷಣಿಕ ಚಟುವಟಿಕೆಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಕೆಲವೊಂದು ರಿಯಾಯಿತಿ ನೀಡಲಾಗಿದೆ. ರಾಜ್ಯಕ್ಕೆ ಆಗಮಿಸಿದವರು ಸಾಮಾಜಿಕ ಅಂತರ ಕಾಪಾಡಬೇಕು. ಸ್ಯಾನಿಟೈಸರ್ ಮತ್ತು ಒಂದು ಹೆಚ್ಚುವರಿ ಮಾಸ್ಕ್ ಹೊಂದಿರುವುದು ಕಡ್ಡಾಯವಾಗಿದೆ. ಅಲ್ಲದೆ ಭೇಟಿ ನೀಡಿದವರು ವಾಪಸ್ ಆದ 14 ದಿನಗಳ ಬಳಿಕ ಕೊರೋನಾ ವೈರಸ್ ಸೋಂಕು ತಗುಲಿದರೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಕೊಡಬೇಕು. ಒಂದು ವೇಳೆ ಸರಕಾರದ ನಿಯಮ ಪಾಲನೆ ಮಾಡದಿದ್ದರೆ ರಾಜ್ಯದಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ಗೆ ಹಾಕಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss