ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಯಾದಗಿರಿ ಜಿಲ್ಲಾಡಳಿತ ಕಾರ್ಯಕ್ಕೆ ರಾಜ್ಯಮಟ್ಟದ ಮೌಲ್ಯಮಾಪನ ತಂಡ ಪ್ರಶಂಸೆ

0
60

ಯಾದಗಿರಿ: ರಾಜ್ಯ ಸರ್ಕಾರದ ಆದೇಶದಂತೆ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಯಾದಗಿರಿ ಜಿಲ್ಲಾಡಳಿತ ಕೈಕೊಂಡಿರುವ ಮುಂಜಾಗ್ರತಾ ಕ್ರಮಗಳು ಬೇರೆ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಬೀದರ ವೈದ್ಯಕೀಯ ಮಹಾವಿದ್ಯಾಲಯದಿಂದ ಆಗಮಿಸಿದ ರಾಜ್ಯ ಮಟ್ಟದ ಮೌಲ್ಯಮಾಪನ ತಂಡವು ಪ್ರಶಂಸೆ ವ್ಯಕ್ತಪಡಿಸಿದೆ.
ಇದೇ ಜೂನ್ 26ರಿಂದ 28ರ ವರೆಗೆ ಜಿಲ್ಲೆಯಲ್ಲಿ ಮೂರು ದಿನಗಳವರೆಗೆ ಎಲ್ಲಾ ತಾಲ್ಲೂಕುಗಳಿಗೆ ಪ್ರವಾಸ ಕೈಗೊಂಡ ಡಾ.ಚಂದ್ರಕಾಂತ ಚಿಲ್ಲರಗಿ, ಡಾ.ಶಿವರಾಜ ಬಿರಾದಾರ, ಡಾ.ಅಶೋಕ ಅವರನ್ನೊಳಗೊಂಡ ತಂಡವು, ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಕೈಗೊಳ್ಳಲಾದ ಎಲ್ಲಾ ಕ್ವಾರೆಂಟೈನ್ ಸೆಂಟರ್ಗಳು, ಕಂಟೈನ್ಮೆಂಟ್ ಜೋನ್ಗಳು, ಫೀವರ್ ಕ್ಲಿನಿಕ್ಗಳು, ಗಂಟಲು ದ್ರವ ಸಂಗ್ರಹಣೆ ಮಾಡುವ ವಾಹನ, ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ, ಕೋವಿಡ್ ಲ್ಯಾಬ್ಗಳನ್ನು, ಸಕಾರಾತ್ಮಕ ಹಾಗೂ ನಕಾರಾತ್ಮಕ ಪ್ರಕರಣಗಳು, ಆಶಾ ಕಾರ್ಯಕತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿಗಳ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿತು.
ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಯಾದಗಿರಿ ಜಿಲ್ಲಾಡಳಿತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸುವ ಮಾರ್ಗಸೂಚಿಯಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದು, ಜಿಲ್ಲೆಯಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಕೊರತೆ ನಡುವೆಯೂ ಸಾವು-ನೋವು ಸಂಭವಿಸಿದಂತೆ ಉತ್ತಮ ಕ್ರಮಗಳನ್ನು ಕೈಗೊಂಡಿದೆ. ಸಕಾರಾತ್ಮಕ ಪ್ರಕರಣಗಳನ್ನು ಶೀಘ್ರ ಪತ್ತೆಹಚ್ಚುವ ನಿಟ್ಟಿನಲ್ಲಿ ಯಾದಗಿರಿ ಜಿಲ್ಲೆಯು ರಾಜ್ಯದಲ್ಲಿಯೇ ಅತೀ ಹೆಚ್ಚು ಗಂಟಲು ದ್ರವ ಮಾದರಿಗಳನ್ನು ಪರೀಕ್ಷಿಸಿರುವುದು ಮತ್ತು ಜಿಲ್ಲೆಯಲ್ಲಿ ವರದಿಯಾಗಿರುವ ಸಕಾರಾತ್ಮಕ ಪ್ರಕರಣಗಳ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಬೇಗನೆ ಗುಣಮುಖರಾಗಿ ಬಿಡುಗಡೆ ಮಾಡಿರುವುದು ಜಿಲ್ಲಾಡಳಿತ ಕೈಗೊಂಡ ಅತ್ಯುತ್ತಮ ಕ್ರಮಗಳ ಕನ್ನಡಿ ಎಂದು ಶ್ಲಾಘಿಸಿದೆ.
ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಉಪ ಕೇಂದ್ರಗಳನ್ನು ಜ್ವರ ತಪಾಸಣಾ ಕೇಂದ್ರಗಳಾಗಿ ಮಾರ್ಪಡಿಸಿದ್ದು, ಪ್ರತಿ ಆಶಾ ಕಾರ್ಯಕರ್ತೆಯರಿಗೆ ಥರ್ಮಲ್ ಸ್ಕ್ಯಾನರ್ ಹಾಗೂ ಪಲ್ಸ್ ಆಕ್ಸಿಮೀಟರ್ ನೀಡಿ ಪ್ರತಿ ಹಳ್ಳಿಯಲ್ಲಿ ಐಎಲ್ಐ ಪ್ರಕರಣಗಳು ಗುರುತಿಸುವುದು ಹಾಗೂ ಎನ್.ಜಿ.ಒ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನ ಹಾಗೂ ಜಿಲ್ಲೆಯ ನಾಲ್ಕು ಜನ ಶಾಸಕರುಗಳ ಸಹಕಾರದಿಂದ ಬೆಂಗಳೂರು ಮತ್ತು ಮಹಾರಾಷ್ಟ್ರದಿಂದ ವಲಸೆ ಬಂದ ಕುಟುಂಬಗಳಿಗೆ ಸರ್ಕಾರ ವಿತರಿಸುವ ಪಡಿತರದೊಂದಿಗೆ ಇತರೆ ಪಡಿತರವನ್ನು ವಿತರಿಸಲಾಗಿದೆ. ಇವೆಲ್ಲವೂ ವೈರಸ್ ಹರಡದಂತೆ ಕೈಗೊಂಡ ವಿಶೇಷ ಕಾರ್ಯಕ್ರಮಗಳಾಗಿವೆ ಎಂದು ಅಭಿಪ್ರಾಯಪಟ್ಟಿದೆ.
ಜಿಲ್ಲೆಯ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿರುವ ಎಲ್ಲಾ ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಸರ್ ನೀಡಲಾಗಿದೆ. ಇದರೊಂದಿಗೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮಗಳ ನಿರ್ವಹಣೆ ಒಂದು ಮಾದರಿಯಾಗಿದ್ದು, ಈ ಕ್ರಮಗಳನ್ನು ಬೇರೆ ಜಿಲ್ಲೆಗಳು ಸಹ ಅನುಸರಿಸಬೇಕೆಂದು ಬೀದರ ವೈದ್ಯಕೀಯ ಮಹಾವಿದ್ಯಾಲಯದಿಂದ ಆಗಮಿಸಿದ ಮೌಲ್ಯಮಾಪನ ತಂಡದ ಅಧಿಕಾರಿಗಳು ಅಭಿಪ್ರಾಯಪಟ್ಟರು. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದೆಂದು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅವರು, ನೋವೆಲ್ ಕೊರೊನಾ ವೈರಸ್ ಹರಡದಂತೆ ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ಹಾಗೂ ಪಾಸಿಟಿವ್ ವ್ಯಕ್ತಿಗಳು ತ್ವರಿತಗತಿಯಲ್ಲಿ ಚೇತರಿಕೆ ಕಾಣುತ್ತಿರುವ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್, ಪ್ರಭಾರಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ನೀಲಮ್ಮ ಎಸ್.ರೆಡ್ಡಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here