ಬಾಗಲಕೋಟೆ: ಬಾಗಲಕೋಟೆಯ ಜಿಲ್ಲಾ ಮಟ್ಟದ ಮಾಧ್ಯಮ ಪ್ರತಿನಿಧಿಗಳ ಕೋವಿಡ್ ತಪಾಸಣಾ ವರದಿ ಬಂದಿದ್ದು, ಎಲ್ಲರ ವರದಿಗಳು ನೆಗಟಿವ್ ಬಂದಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯದ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರ ಮಾರ್ಗದರ್ಶನಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಅವರ ನೇತೃತ್ವದ ತಂಡ ನವನಗರದ ನೂತನ ಪತ್ರಿಕಾಭವನದಲ್ಲಿ ಎರಡು ದಿನಗಳ ಕಾಲ ಬಾಗಲಕೋಟೆ ಜಿಲ್ಲಾ ಮಟ್ಟದ 67 ಮಾಧ್ಯಮ ಪ್ರತಿನಿಧಿಗಳ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆಯ ವರದಿಯಲ್ಲಿ ಎಲ್ಲವು ನೆಗಟಿವ್ ಬಂದಿರುತ್ತದೆ. ಏಪ್ರೀಲ್ 28 ರಂದು 26 ಹಾಗೂ ಏಪ್ರೀಲ್ 29 ರಂದು 41 ಸೇರಿ ಒಟ್ಟು 67 ಮಾದ್ಯಮ ಪ್ರತಿನಿಧಿಗಳ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು, ಮೇ 1 ರಂದು ಏಪ್ರೀಲ್ 29 ರಂದು ಕಳುಹಿಸಿದ 41 ಮಾಧ್ಯಮ ಪ್ರತಿನಿಧಿಗಳ ವರದಿ ನೆಗಟಿವ್ ಬಂದಿದ್ದವು. ಇನ್ನು 26 ಜನರ ವರದಿ ಬಾಕಿ ಉಳಿದಿತ್ತು. ಮೇ 2 ರಂದು ಸಂಜೆ ಹೊತ್ತಿಗೆ ಬಾಕಿ ಉಳಿದ 26 ಮಾಧ್ಯಮ ಪ್ರತಿನಿಧಿಗಳ ವರದಿಗಳು ಸಹ ನೆಗಟಿವ್ ಬಂದಿದ್ದು, ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಅವರ
ನೇತೃತ್ವದ ತಂಡಕ್ಕೆ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳು ಧನ್ಯವಾದಗಳನ್ನು ಅರ್ಪಿ ಸಿದ್ದಾರೆ.