Wednesday, June 29, 2022

Latest Posts

ಕೋವಿಡ್-19 ಲಸಿಕೆ ವಿತರಣೆಗೆ ಸಕಲ ಸಿದ್ಧತೆ: ಡಾ.ರಾಗಪ್ರಿಯಾ ಆರ್.

ಹೊಸ ದಿಗಂತ ವರದಿ, ಯಾದಗಿರಿ:

ರಾಜ್ಯದಲ್ಲಿ ಕೋವಿಡ್-19 ವ್ಯಾಕ್ಸಿನ್ ಲಸಿಕೆ ಯಶಸ್ವಿಯಾಗಲಿದ್ದು, ಜಿಲ್ಲೆಯಲ್ಲಿ ಕೋವಿಡ್-19 ಲಸಿಕೆ ವಿತರಣೆಗೆ ಎಲ್ಲಾ ಬಗೆಯ ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಂಯೋಗದಲ್ಲಿ ನಡೆದ ಕೋವಿಡ್-19 ಲಸಿಕೆಯ ಬಗ್ಗೆ ಪೂರ್ವ ತಯಾರಿ ಹಾಗೂ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದ ತರಬೇತಿ ಕಾರ್ಯಾಗಾರದಲ್ಲಿ ಉದ್ಘಾಟಿಸಿ ಮಾತನಾಡಿದರು.
ಕೋವಿಡ್ 19 ಸಾಂಕ್ರಮಿಕ ರೋಗ ಹರಡುವ ಸಂದರ್ಭದಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಇತರ ಇಲಾಖೆಯವರ ಕಾರ್ಯ ಶಾಘ್ಲನೀಯವಾದದ್ದು ಎಂದು ಜಿಲ್ಲಾಧಿಕಾರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಮೊದಲ ಹಂತದ ಲಸಿಕೆಯನ್ನು ಕೊರೊನಾ ವಾರಿಯರ್ಸ್ ಅವರಿಗೆ ಪ್ರಾಯೋಗಿಕವಾಗಿ ನೀಡಲು ನಿರ್ಧರಿಸಲಾಗಿದೆ. ಲಸಿಕೆ ನೀಡುವ ಸಮಯದಲ್ಲಿ ಊಹಾಪೋಹಗಳು ಕೇಳಿಬರುತ್ತವೆ. ಆದರೆ ಇದಕ್ಕೆ ಯಾರೂ ಕಿವಿಗೊಡಬಾರದೆಂದು ಜಿಲ್ಲಾಧಿಕಾರಿ ಹೇಳಿದರು.
ಕೋವಿಡ್-19 ಲಸಿಕೆ ಅಗತ್ಯವಿರುವವರು ಕೂಡಲೇ ಹತ್ತಿರದ ಕೋವಿಡ್ ಸೆಂಟರ್‌ಗಳಿಗೆ ಭೇಟಿ ನೀಡಿ ನೋಂದಣಿ ಮಾಡಿ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಲಸಿಕೆ ದೊರೆತ ಬಳಿಕ ಹೆಚ್ಚು ಜನರಿಗೆ ನೀಡಲಾಗುವುದು. ಕೊರೊನಾ ನಿಯಂತ್ರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಮೊದಲ ಹಂತದ ಲಸಿಕೆ ನೀಡಲಾಗುವುದು. ನಂತರ 50 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶಿಲ್ಪಾ ಶರ್ಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯಾದ ಇಂದುಮತಿ ಪಾಟೀಲ್, ಆರ್.ಸಿ.ಎಚ್ ರಾದ ಡಾ.ಸೂರ್ಯ ಪ್ರಕಾಶ್ ಕುಂದಕೂರ, ಐ.ಎಮ್.ಎ ಅಧ್ಯಕ್ಷರಾದ ಡಾ.ಸಿ.ಎಮ್. ಪಾಟೀಲ್, ಎಸ್.ಎಮ್.ಓ ರಾದ ಡಾ.ಅನಿಲ್ ಜಾರಕೋಳಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಯಾದ ಡಾ.ಲಕ್ಷ್ಮೀಕಾಂತ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss