Friday, August 19, 2022

Latest Posts

ಕೋವಿಡ್-19 ವ್ಯಾಕ್ಸಿನ್ ವಿತರಣೆಗೆ ಕಾಸರಗೋಡು ಜಿಲ್ಲೆ ಸಜ್ಜು: ಜ.16ರಂದು 9 ಕೇಂದ್ರಗಳಲ್ಲಿ ಲಸಿಕೆ ನೀಡಿಕೆ

ಹೊಸದಿಗಂತ ವರದಿ,ಕಾಸರಗೋಡು:

ಕೋವಿಡ್-19 ವ್ಯಾಕ್ಸಿನ್ ನೀಡಿಕೆಗೆ ಕಾಸರಗೋಡು ಜಿಲ್ಲೆಯು ಸಂಪೂರ್ಣ ಸಜ್ಜುಗೊಂಡಿದೆ. ಅದರಂತೆ ಜಿಲ್ಲೆಯ 9 ಕೇಂದ್ರಗಳಲ್ಲಿ ಜ.16ರಂದು ಲಸಿಕೆ ವಿತರಣೆ ನಡೆಯಲಿದೆ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಜ.16ರಂದು 9 ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.

ಕಾಸರಗೋಡು ಜನರಲ್ ಆಸ್ಪತ್ರೆ , ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜು, ಕಾಞಂಗಾಡಿನ ಜಿಲ್ಲಾ ಆಸ್ಪತ್ರೆ , ಮಂಗಲ್ಪಾಡಿ, ಬೇಡಡ್ಕ, ನೀಲೇಶ್ವರ, ಪನತ್ತಡಿ ತಾಲೂಕು ಆಸ್ಪತ್ರೆಗಳು, ಪೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಎಣ್ಣಪ್ಪಾರೆ ಕುಟುಂಬ ಆರೋಗ್ಯ ಕೇಂದ್ರ ಎಂಬೀ ಕೇಂದ್ರಗಳಲ್ಲಿ ಪ್ರಥಮ ಹಂತದ ಕೋವಿಡ್ ವಾಕ್ಸಿನೇಷನ್ ನಡೆಸಲಾಗುವುದು.

ದ್ವಿತೀಯ ಹಂತದಲ್ಲಿ ಲಸಿಕೆ ನೀಡಿಕೆ ಸಂಬಂಧ ಈ 9 ಕೇಂದ್ರಗಳ ಸಹಿತ ಕಾಸರಗೋಡು ಜಿಲ್ಲೆಯ 58 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ. ಮೂರನೇ ಹಂತದಲ್ಲಿ ಜಿಲ್ಲೆಯಲ್ಲಿ 329 ಕೇಂದ್ರಗಳನ್ನು ಆರಿಸಲಾಗಿದೆ ಎಂದವರು ವಿವರಿಸಿದರು.

ಜಿಲ್ಲೆಯಲ್ಲಿ ಮೊದಲ ಹಂತದ ಲಸಿಕೆ ನೀಡಿಕೆ ಗುರುವಾರ ಆರಂಭಗೊಂಡಿದೆ. ಪ್ರತಿ ಕೇಂದ್ರದಲ್ಲೂ 4 ಮಂದಿ ವಾಕ್ಸಿನೇಷನ್ ಅಧಿಕಾರಿಗಳೂ, 3 ಮಂದಿ ವಾಕ್ಸಿನೇಟರ್ ಗಳೂ ಇರುವರು. ಜತೆಗೆ ಎರಡು ಪಾಳಿಗಳಲ್ಲಿ ಇಬ್ಬರು ವೈದ್ಯರನ್ನು ನೇಮಿಸಲಾಗಿದೆ. ಬೆಳಗ್ಗೆ9ರಿಂದ ಸಂಜೆ 5 ಗಂಟೆ ವರೆಗೆ ವ್ಯಾಕ್ಸಿನ್ ವಿತರಣೆ ಜರಗಲಿದೆ. ಜಿಲ್ಲೆಯ ವಾಕ್ಸಿನೇಷನ್ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ಧತೆಗಳ ಬಗ್ಗೆ ಅವಲೋಕನ ನಡೆಸುವ ಹೊಣೆಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಹೇಳಿದರು.

ಈ ಸಂಬಂಧ ಕಾಸರಗೋಡಿನಲ್ಲಿ ನಡೆದ ಪೂರ್ಣಭಾವಿ ಸಿದ್ಧತಾ ಸಭೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ಹಾಗೂ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!