Sunday, August 14, 2022

Latest Posts

ಕೋವಿಡ್ -19 ಸೋಂಕಿತರು ಸಾಮಾಜಿಕ ಕಳಂಕಿತರಲ್ಲ: ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್

ಉಡುಪಿ: ವಿಶ್ವದಲ್ಲಿ ಕರೆಯದೇ ವಿಶೇಷ ಅತಿಥಿಯಾಗಿ ಬಂದಿರುವ ಕೋವಿಡ್ ವ್ಯಾದಿ ಬಗ್ಗೆ ಬಹಳಷ್ಟು ಜನರಿಗೆ ಹೆದರಿಕೆ ಶುರುವಾಗಿದೆ. ಅಲ್ಲದೇ ಸಮಾಜದಲ್ಲಿ ಸೋಂಕಿತರು ಸಾಮಾಜಿಕ ಕಳಂಕಿತರು ಎನ್ನುವ ದೃಷ್ಟಿಯಲ್ಲಿ ನೋಡುತ್ತಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ವಿಷಾದಿಸಿದ್ದಾರೆ.

ಕೋವಿಡ್ -19 ಸೋಂಕಿನ ಕುರಿತ ಪರಿಶೀಲನೆ ನಡೆಸಲು ಜಿಲ್ಲೆಗಾಗಮಿಸಿದ ಸಚಿವರು, ಕೋವಿಡ್ ಸಾಮಾಜಿಕ ಪಿಡುಗು ಅಲ್ಲ, ವ್ಯಕ್ತಿಗೆ ಸೋಂಕು ತಗುಲಿದ ತಕ್ಷಣ ಅವರು ಸಾಮಾಜಿಕ ಕಳಂಕಿತರಲ್ಲ. ಇದು ಅನೇಕ ವ್ಯಾದಿಗಳಿಗೆ ಹೋಲಿಕೆ ಮಾಡಿದರೆ, ಮಾರಕವಾಗಿರುವ ಗಂಭೀರವಾಗಿರುವ ವ್ಯಾದಿ ಇದಲ್ಲ. ಇದನ್ನು ಒಬ್ಬ ವೈದ್ಯನಾಗಿ ಅನುಭವದ ಮೇಲೆ ಹೇಳುತ್ತಿದ್ದೇನೆ ಎಂದರು.

ಸಾರ್ಸ್ ವೈರಾಣು ಇನ್ನೂ ಭಯಾನಕವಾಗಿದೆ. ಅದರಿಂದ ಮರಣ ಹೊಂದುವ ಪ್ರಮಾಣ ಶೇ. 10ರ ಮೇಲಿದೆ, ಎಬೋಲಾ ಶೇ. 15ಕ್ಕಿಂತ ಜಾಸ್ತಿ ಇದೆ. ಅನೇಕ ವೈರಾಣುಗಳು ಮನುಷ್ಯನನ್ನು ಬಾಧಿಸಿವೆ. ಆದರೆ ಅಂತಿಮವಾಗಿ ಮನುಷ್ಯನೇ ಇವುಗಳ ವಿರುದ್ಧ ಗೆದ್ದಿದ್ದಾನೆ. ಇದರಲ್ಲಿಯೂ ಮನುಷ್ಯ ಗೆಲ್ಲುತ್ತಾನೆ. ಈ ಮನಸ್ಥಿತಿ ಎಲ್ಲರಿಗೂ ಬರಬೇಕು ಎಂದು ಆಶಿಸಿದರು.

ವಿಶ್ವದಲ್ಲಿ ಹೋಲಿಕೆ ಮಾಡಿದಾಗ ಭಾರತಕ್ಕಿಂತ 2-3 ಪಟ್ಟು ಜಾಸ್ತಿ ಸೋಂಕು ಇದೆ. ಭಾರತದಲ್ಲಿ ಮರಣ ದರ ಕೂಡ ಕಡಿಮೆ ಇದೆ. ದೇಶದಲ್ಲಿ ಸಾವಿನ ಪ್ರಮಾಣ ಶೇ. 1.5-1.8ರಷ್ಟು ಮಾತ್ರ ಇದೆ. ಆದ್ದರಿಂದ ಆತಂಕಪಟ್ಟುಕೊಳ್ಳುವ ಆವಶ್ಯಕತೆ ಇಲ್ಲ, ಆದರೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಮಾಸ್ಕ್ ಧರಿಸಬೇಕು, ಕೈಗಳನ್ನು ಪದೇ ಪದೇ ತೊಳೆದುಕೊಳ್ಳಬೇಕು, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಬೇಕು ಎಂದ ಸಚಿವರು, ವೈರಾಣುವಿನಿಂದ ದೂರ ಇರುವ ಉಪಾಯದಲ್ಲಿ ಬದುಕಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಆರಂಭದಲ್ಲಿ 2 ಲ್ಯಾಬ್ ಇತ್ತು, ದಿನಕ್ಕೆ 200-300 ಮಾದರಿ ಪರೀಕ್ಷೆ ಸಾಮರ್ಥ್ಯ ಹೊಂದಿತ್ತು. ಎರಡುವರೆ ತಿಂಗಳಲ್ಲಿ 64 ಲ್ಯಾಬ್‌ಗಳನ್ನು ಸ್ಥಾಪನೆ ಮಾಡಿದ್ದೇವೆ. ಮಂಗಳವಾರದ ವರೆಗೆ 3,31,687 ಪರೀಕ್ಷೆ ಮಾಡಿದ್ದೇವೆ. 3792 ಪಾಸಿಟಿವ್ ಬಂದಿದೆ. ಅದರಲ್ಲಿ ಶೇ. 85 ಜನರು ಯಾವುದೇ ರೋಗದ ಲಕ್ಷಣಗಳಿಲ್ಲ. ಶೇ. 15 ಜನರಲ್ಲಿ ಸೌಮ್ಯ ಲಕ್ಷಣಗಳು ಕಾಣಿಸಿವೆ, ಶೇ. 3-4 ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತರ ರೋಗಗಳಿದ್ದರೆ ಅವರಲ್ಲಿ ಕೋವಿಡ್ ಉಲ್ಬಣವಾಗುತ್ತಿರುವುದು ಕಂಡುಬರುತ್ತಿದೆ ಎಂದು ಸಚಿವ ಡಾ. ಸುಧಾಕರ್ ತಿಳಿಸಿದರು.

ಕೇಂದ್ರ ಆರೋಗ್ಯ ಸಚಿವರು ಕರ್ನಾಟಕದ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡ್ಯಾಶ್ ಬೋರ್ಡ್, ವಾರ್ ರೂಂ, ಟೆಲಿ ಮೆಡಿಸಿನ್, ಟೆಲಿ ಐಸಿಯು, ಪ್ಲಾಸ್ಮಾ ಚಿಕಿತ್ಸೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇಡೀ ರಾಜ್ಯದಲ್ಲಿ ಏಕರೂಪದ ಚಿಕಿತ್ಸೆಯನ್ನು ಅಳವಡಿಸಿಕೊಂಡಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರಕಾರ ಘೋಷಿಸಿದ ಲಾಕ್‌ಡೌನ್, ಸೋಂಕು ಹರಡುವಿಕೆಯ ಪ್ರಮಾಣವನ್ನು ಕಡಿಮೆ ಮಾಡಿದೆ. ಈ ವೈರಾಣು ಇನ್ನು ಇಲ್ಲಿಂದ ಹೋಗುವುದಿಲ್ಲ. ಸರಕಾರಗಳಿಗೆ ಜೀವ ಉಳಿಸುವ ಜೊತೆಗೆ, ಜೀವನ ಮುಂದೆ ಸಾಗಿಸುವ ಜವಾಬ್ದಾರಿಯೂ ಇದೆ ಎಂದು ಡಾ. ಸುಧಾಕರ್ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss