Sunday, June 26, 2022

Latest Posts

ಕೋವಿ ಹೊಂದುವುದು ಜನ್ಮಸಿದ್ಧ ಹಕ್ಕು, ಭಿಕ್ಷೆಯಲ್ಲ : ಕೊಡಗು ರಕ್ಷಣಾ ವೇದಿಕೆ

ಹೊಸ ದಿಗಂತ ವರದಿ ಮಡಿಕೇರಿ:

ಕೊಡವರು ಹಾಗೂ ಜಮ್ಮಾ ಹಿಡುವಳಿದಾರರಿಗೆ ಸುಮಾರು ಇನ್ನೂರು ವರ್ಷಗಳಿಗೂ ಹಿಂದೆ ದೊರೆತಿರುವ ಕೋವಿ ಹಕ್ಕಿನ ಕುರಿತು ಅಧಿಕಾರಿಗಳು ಗೊಂದಲ ಸೃಷ್ಟಿಸುತ್ತಿದ್ದು, ಕಾಯ್ದೆಯಲ್ಲಿಲ್ಲದ ನಿಯಮಗಳನ್ನು ಜಾರಿಗೆ ತಂದು ಅರ್ಜಿ ವಿಲೇವಾರಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ಅವರು, ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದೆಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಯನ್ನು ಹೊಂದುವುದು ಕೊಡವರ ಮತ್ತು ಜಮ್ಮಾ ಹಿಡುವಳಿದಾರರ ಹಕ್ಕಾಗಿದೆಯೇ ಹೊರತು ಭಿಕ್ಷೆಯಲ್ಲವೆಂದು ಕಿಡಿಕಾರಿದರು.
ಸುಮಾರು ಇನ್ನೂರು ವರ್ಷಗಳಿಗೂ ಮಿಗಿಲಾಗಿ ದೊರೆತಿರುವ ಕೋವಿ ಹೊಂದುವ ಈ ವಿಶೇಷ ಹಕ್ಕು 2029 ಅಕ್ಟೋಬರ್ 31 ರವರೆಗೆ ಅಬಾಧಿತವಾಗಿ ಮುಂದುವರೆಯಲಿದೆಯೆಂದು ಕೇಂದ್ರ ಸರ್ಕಾರವೇ ತಿಳಿಸಿದೆ. ಇದನ್ನು ರಾಜ್ಯ ಸರ್ಕಾರ ಪಾಲಿಸಬೇಕಾಗಿದ್ದು, ಅಧಿಕಾರಿಗಳು ಯಾವುದೇ ತಕರಾರಿಲ್ಲದೆ ಕೋವಿಯ ಹಕ್ಕನ್ನು ನೀಡಬೇಕಾಗಿದೆ.
ಆದರೆ, ಇತ್ತೀಚಿನ ದಿನಗಳಲ್ಲಿ ‘ಕೋವಿ ವಿನಾಯಿತಿ ಪತ್ರ’ ಮತ್ತು ಪೊಲೀಸರಿಂದ ಪರಿಶೀಲನೆಗಾಗಿ ಅಧಿಕಾರಿಗಳು ಒತ್ತಡ ಹೇರುತ್ತಿದ್ದು, ಇದರಿಂದ ನೈಜ ಹಕ್ಕುದಾರರಿಗೆ ತೊಂದರೆಯಾಗುತ್ತಿದೆ. ಕೋವಿಗಾಗಿ ಅರ್ಜಿ ಸಲ್ಲಿಸಿದವರು ವರ್ಷದವರೆಗೆ ಕಾಯ್ದ ಉದಾಹರಣೆಗಳಿದೆ. ಆದ್ದರಿಂದ ರಾಜರ ಕಾಲದಿಂದಲೂ ಜಾರಿಯಲ್ಲಿರುವ ಕೋವಿ ಹಕ್ಕಿನ ನಿಯಮದಡಿಯೇ ಅತ್ಯಂತ ಸರಳ ರೀತಿಯಲ್ಲಿ ಕೋವಿಯ ಹಕ್ಕನ್ನು ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಅಧಿಕಾರಿಗಳು ಬದಲಾದಂತೆಲ್ಲ ಕೋವಿ ಹಕ್ಕು ಹೊಂದುವವರಿಗೆ ಹೊಸ ಹೊಸ ನಿಯಮಗಳನ್ನು ತಿಳಿಸುವ ಮೂಲಕ ಗೊಂದಲ ಸೃಷ್ಟಿಸಲಾಗುತ್ತಿದೆ. ಆದ್ದರಿಂದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೋವಿ ಹಕ್ಕಿನ ಬಗ್ಗೆ ಪರಿಣತಿ ಹೊಂದಿರುವ ಅಧಿಕಾರಿಗಳನ್ನು ನಿಯೋಜಿಸಿ ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕೆಂದರು. ಈ ಬಗ್ಗೆ ನುರಿತ ತಜ್ಞರ ಸಹಿತ ಸಮಗ್ರ ಮಾಹಿತಿಯೊಂದಿಗೆ ಸರ್ಕಾರದ ಗಮನ ಸೆಳೆಯಲಾಗುವುದೆಂದು ಪವನ್ ಪೆಮ್ಮಯ್ಯ ತಿಳಿಸಿದರು.
ಹಿರಿಯ ವಕೀಲ ಹಾಗೂ ‘ದಿ ಗ್ಯಾಲೆಂಟ್ ಕೊಡವ ಅಂಡ್ ಹಿಸ್ ಗನ್’ ಕೃತಿಯ ಲೇಖಕರಾದ ಪಾಲೆಕಂಡ ಎ.ಸುಬ್ಬಯ್ಯ ಮಾತನಾಡಿ, ಕೋವಿ ಹಕ್ಕಿನ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದರು. ಕೊಡಗಿನ ಅರಸರಾಗಿದ್ದ ವೀರರಾಜೇಂದ್ರ ಒಡೆಯರ್ ಅವರು 1788 ಮತ್ತು 1809 ರಲ್ಲಿ ಹೊರಡಿಸಿದ ಹುಕುಂ ನಾಮೆಗಳಲ್ಲಿ ಕೊಡಗಿನ ಪ್ರಜೆಗಳು ಅರಮನೆಗೆ ಬರುವಾಗ ಸಂಪೂರ್ಣ ಶಸ್ತ್ರಸಜ್ಜಿತರಾಗಿ ಬರತಕ್ಕದ್ದೆಂದು ತಿಳಿಸಿರುವುದು ಗಮನಾರ್ಹ. ಆ ಕಾಲದಲ್ಲಿ ಅರಮನೆಯಲ್ಲಿ ಅರಸರ ಪ್ರತ್ಯೇಕ ಶಸ್ತಾçಗಾರವೂ ಇರಲಿಲ್ಲ. ಈ ಕಾರಣಕ್ಕಾಗಿ ಪ್ರಜೆಗಳೇ ಶಸ್ತಾಸ್ತ್ರಗಳನ್ನು ಹೊಂದಿರಬೇಕಾಗಿತ್ತು. ಲಿಂಗಾಯಿತ ಅರಸರಿಗೆ ಕೊಡವರ ಮೇಲೆ ಮತ್ತು ಅವರ ಸ್ವಾಮಿ ನಿಷ್ಠೆಯ ಮೇಲೆ ಸಂಪೂರ್ಣ ನಂಬಿಕೆ ಇದ್ದ ಕಾರಣ ಶಸ್ತ್ರಾಸ್ತ್ರಗಳೊಂದಿಗೆ ಕೊಡವರು ಓಡಾಡಬಹುದಾಗಿತ್ತೆಂದು ತಿಳಿಸಿದರು.
ಜಮ್ಮಾ ಹಿಡುವಳಿದಾರರೆಂದರೆ ಕೊಡವರು ಮಾತ್ರವಲ್ಲದೆ, ಕೊಡವ ಮಾಪಿಳ್ಳೆ, ಗೌಡರು, ಗೊಲ್ಲರು, ಪೆಗ್ಗಡೆ, ಪರಿಶಿಷ್ಟ ಜಾತಿ, ಬಂಟರು ಹಾಗೂ ಜೇನು ಕುರುಬರು ಕೂಡ ಸೇರುತ್ತಾರೆ. ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959ರಲ್ಲಿ ತಿಳಿಸಿರುವಂತೆ ಕೊಡವ ಬೈ ರೇಸ್ ಮತ್ತು ಜಮ್ಮಾ ಹಿಡುವಳಿದಾರರು ಕೊಡಗಿನ ಹೊರಗೆ ವಾಸ ಅಥವಾ ಪ್ರಯಾಣ ಮಾಡುವ ಸಂದರ್ಭದಲ್ಲಿ ಒಂದು ರೈಫಲ್ ಮತ್ತು ನೂರು ಗುಂಡುಗಳು ಅಥವಾ ಸ್ಮೂತ್ ಬೋರ್ ಕೋವಿ ಅಥವಾ ಕೇಪಿನ ಕೋವಿ, 500 ಗುಂಡುಗಳು ಅಥವಾ ಅಷ್ಟೇ ಪ್ರಮಾಣದ ಮದ್ದು ಇಟ್ಟು ಕೊಳ್ಳಲು ವಿನಾಯಿತಿ ಹೊಂದಿರುತ್ತಾರೆ. 1963 ಮತ್ತು 1966 ರಲ್ಲಿ ಹೊರಡಿಸಿದ ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ ಕೋವಿ ಹಕ್ಕಿನ ವಿನಾಯಿತಿಗೆ ಸೂಕ್ತ ರಾಜ್ಯಾಂಗದ ಭದ್ರತೆ ಮತ್ತು ಖಾತ್ರಿಯನ್ನು ಖಚಿತ ಪಡಿಸಲಾಗಿದೆಯೆಂದು ಸುಬ್ಬಯ್ಯ ಮಾಹಿತಿ ನೀಡಿದರು.
ಕೊಡವರ ಜೀವನದಲ್ಲಿ ಕೋವಿ ವಿಶೇಷ ಸ್ಥಾನಮಾನವನ್ನು ಹೊಂದಿಕೊಂಡು ಬಂದಿದ್ದು, ಜನನ, ಮರಣ, ಗೃಹಪ್ರವೇಶ, ಕೈಲ್ ಪೊಳ್ದ್, ಪುತ್ತರಿ ಹಬ್ಬಗಳಲ್ಲು ಪ್ರಮುಖ ಪಾತ್ರ ವಹಿಸಿದೆ. ಕೊಡವರ ವಿಶೇಷ ನಂಬಿಕೆ ಎಂದರೆ, ಅವರ ಹಿರಿಯರ ಕೋವಿ ಪೂರ್ವಿಕರನ್ನು ಪ್ರತಿನಿಧಿಸುತ್ತದೆ. ಆದರೆ, ಕುಟುಂಬದೊಳಗೆ ಕೋವಿಗಳ ಹಸ್ತಾಂತರಕ್ಕು ಅಧಿಕಾರಿಗಳು ತಕರಾರು ಎತ್ತುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕೊಡವರು ಹಾಗೂ ಜಮ್ಮಾ ಹಿಡುವಳಿದಾರರು ಕೋವಿ ಹೊಂದುವ ಹಕ್ಕನ್ನು ಹುಟ್ಟಿನಿಂದಲೇ ಗಳಿಸಿಕೊಳ್ಳುತ್ತಾರೆ. ಈ ವಿಶಿಷ್ಟವಾದ ಹಕ್ಕಿನ ಬಗ್ಗೆ ಗೊಂದಲ ಸೃಷ್ಟಿ ಸರಿಯಲ್ಲವೆಂದು ಸುಬ್ಬಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಜಮ್ಮಡ ಗಣೇಶ್ ಅಯ್ಯಣ್ಣ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss